ಭಾನುವಾರ, ಡಿಸೆಂಬರ್ 8, 2019
25 °C
ಮೊಬೈಲ್ ಮಾತು

ಎಸ್‌ಎಂಎಸ್ ಹುಟ್ಟಿದ ಕಥೆ...!

Published:
Updated:
ಎಸ್‌ಎಂಎಸ್ ಹುಟ್ಟಿದ ಕಥೆ...!

ಹಾಯ್ ಫ್ರೆಂಡ್ಸ್, ನಾನು ನಿಮ್ಮೆಲ್ಲರ ಆತ್ಮೀಯ ಗೆಳೆಯ. ನಾನು ನಿಮಗೆಲ್ಲಾ ಎಷ್ಟು ಆಪ್ತ ಎಂದರೆ, ದಿನ ಬೆಳಿಗ್ಗೆ ಎದ್ದು ದೇವರ ಮುಖ ನೋಡುತ್ತೀರೋ ಇಲ್ಲವೋ, ನನ್ನ ದರ್ಶನ ಮಾಡುವುದಂತೂ ನಿಮ್ಮ ದಿನಚರಿಯ ಮೊದಲ ಅಧ್ಯಾಯ.

ನಾನೇ ನಿಮ್ಮ ಪ್ರೀತಿಯ ಎಸ್‌ಎಂಎಸ್. ನಿಮ್ಮ ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ, ಸಕಲ ಕಾಲಕ್ಕೂ ನಾನೇ ಸಂಗಾತಿ. ಅಪ್ಪ ಅಮ್ಮನ ಪ್ರೀತಿಯ ಮಾತುಗಳಾಗಲೀ, ಸ್ನೇಹಿತರ ಸಮಾಧಾನವಾಗಲಿ, ಪ್ರೇಮಿಗಳ ಪಿಸು ಮಾತುಗಳಾಗಲೀ ನನ್ನಿಂದಲೇ ರಂಗೇರುವುದು. ಭಾವನೆಗಳಿಗೆ ನಾನೇ ಕೊಂಡಿ ಅಂದರೂ ತಪ್ಪಿಲ್ಲ. ಕೆಲವೊಮ್ಮೆ ನನ್ನನ್ನು ಬಳಸಿಕೊಂಡು ನೀವೆಲ್ಲಾ ಜಗಳವಾಡಿದ್ದೂ ಇದೆ. ಆಗೆಲ್ಲಾ ನನಗೂ ಬೇಸರ ಅನಿಸಿತ್ತು. ಅದು ಬಿಡಿ, ಈಗ ಈ ಪತ್ರ ಬರೆಯಲೂ ಒಂದು ಕಾರಣವಿದೆ. ನಾನು ನಿಮ್ಮ ಗಮನಕ್ಕೆ ಬಂದು ಇಪ್ಪತ್ತು ವರುಷಗಳೇ ತುಂಬಿವೆ. ಅದಕ್ಕೆಂದೇ ನಿಮಗೆ ನೆನಪಿಸಲು ದಿಢೀರನೆ ಪತ್ರ ಬರೆಯಬೇಕಾಯಿತು.ಬನ್ನಿ, ನಾನು ಹುಟ್ಟಿದ್ದು ಹೇಗೆ? ಇಲ್ಲಿ ನೋಡಿ: 1984ರ ಮಹಾ ಸಮ್ಮೇಳನವೊಂದರಲ್ಲಿ ಫಿನ್ನಿಶ್‌ನ ಮಾಜಿ ಸಾರ್ವಜನಿಕ ಅಧಿಕಾರಿ ಮಟ್ಟಿ ಮ್ಯಾಕೊನೆನ್ `ಮೊಬೈಲ್ ಮೆಸೇಜಿಂಗ್ ಸರ್ವೀಸ್' ಎಂಬ ಬಗ್ಗೆ ಸಲಹೆ ನೀಡಿದರಂತೆ. ಅಂದಿನಿಂದ ನನ್ನ ಬಗ್ಗೆ ಯೋಚನೆ ಶುರುವಾಯಿತು ಎನ್ನುತ್ತಾರೆ. ಇದೇ ಕಾರಣಕ್ಕೆ  `ನನ್ನ  ಜನಕ' (ಫಾದರ್ ಆಫ್ ಎಸ್‌ಎಂಎಸ್) ಎನಿಸಿಕೊಂಡರು ಮ್ಯಾಕೊನೆನ್.ಮ್ಯಾಕೊನೆನ್ ಬಿತ್ತಿದ್ದ ನನ್ನ ಸೃಷ್ಟಿಯ ಕನಸನ್ನು ಸಾಕಾರಗೊಳಿಸಿದವರು  ಬ್ರಿಟಿಷ್ ಎಂಜಿನಿಯರ್ ನೀಲ್ ಪಾಪ್‌ವರ್ತ್. 1992ರ ಡಿಸೆಂಬರ್‌ನಲ್ಲಿ ಅಕ್ಷರ ರೂಪದ ಮೊದಲ ಎಸ್‌ಎಂಎಸ್ ಕಳುಹಿಸಿದರಂತೆ. ಅದೇ ನಾನು ಅಂಬೆಗಾಲಿಟ್ಟ ದಿನ. ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ `ಮೇರಿ ಕ್ರಿಸ್‌ಮಸ್' ಎಂದು ರಿಚರ್ಡ್ ಜಾರ್ವಿಸ್ ಎಂಬಾತನಿಗೆ ಸಂದೇಶ ರವಾನಿಸಿದ್ದು ದಾಖಲಾಗಿದೆ. ಆದರೆ ಪಾಪ ಜಾರ್ವಿಸ್‌ಗೆ ತಿರುಗಿ ಸಂದೇಶ ಕಳುಹಿಸುವ ಆಯ್ಕೆಯಿರಲಿಲ್ಲ.ಇಷ್ಟೆಲ್ಲಾ ಆದ ಮೇಲೆ ಮೊಬೈಲ್‌ನಲ್ಲಿ ಎಸ್‌ಎಂಎಸ್ ಇಲ್ಲದಿದ್ದರೆ ಪ್ರಯೋಜನ ಏನು ಅನ್ನೊ ಯೋಚನೆ ಬಂತು. ನೋಕಿಯಾ ಎಂಬ ಕಂಪೆನಿ ನನಗೆ ಅನುಕೂಲ ಮಾಡಿಕೊಡುವಂತಹ ಮೊದಲ ಅಕ್ಷರ ಬೆಂಬಲಿತ ಜಿಎಸ್‌ಎಂ ಹ್ಯಾಂಡ್‌ಸೆಟ್‌ಗಳನ್ನು 1993ರಲ್ಲಿ ಹೊರತಂದರಂತೆ. ಮುಂದಿನ ಹಾದಿ ಗೊತ್ತೇ ಇದೆಯಲ್ಲಾ...1995ರಲ್ಲಿ ನಾನು ಹೆಚ್ಚು ಜನಪ್ರಿಯನಾದೆ. ನಿಧಾನವಾಗಿ, ವರ್ಷಕ್ಕೆ ಐದು ಬಾರಿ ಎಸ್‌ಎಂಎಸ್ ಕಳುಹಿಸುವ ಮಂದಿ ಹುಟ್ಟಿಕೊಂಡರು. ಆದರೆ ಅಮೆರಿಕದಲ್ಲಿ ಮಾತ್ರ ನಾನು 2000ರ ಮಧ್ಯದವರೆಗೂ ಬೆಳೆಯಲೇ ಇಲ್ಲವಂತೆ!

ನನ್ನ ಪ್ರಾಮುಖ್ಯ ತಿಳಿದುಕೊಂಡ ಕಂಪೆನಿಯವರು ನನಗೆ ಒಂದು ರೂಪಾಯಿ, ಎರಡು ರೂಪಾಯಿ ಎಂದು ಮೌಲ್ಯ ನಿಗದಿ ಮಾಡಿದರು.2010ರ ವೇಳೆಗೆ ಐನೂರು ಕೋಟಿ ಮೊಬೈಲ್ ಬಳಕೆದಾರರಲ್ಲಿ ಪ್ರತಿಯೊಬ್ಬರೂ 1200 ಸಂದೇಶವನ್ನು ಕಳುಹಿಸುತ್ತಿದ್ದು, ವರ್ಷಕ್ಕೆ ಆರು ಟ್ರಿಲಿಯನ್ (6 ಲಕ್ಷ ಕೋಟಿ) ಮೆಸೇಜ್‌ಗಳನ್ನು ಕಳುಹಿಸುತ್ತ್ದ್ದಿದರಂತೆ. ನಿಮಿಷಕ್ಕೆ 1.20 ಕೋಟಿ ಸಂದೇಶಗಳು ರವಾನೆಯಾಗುತ್ತಿದ್ದವಂತೆ.2011ರ ಕೊನೆಗೆ ಆರು ಬಿಲಿಯನ್(ಶತಕೋಟಿ) ಮೊಬೈಲ್ ಬಳಕೆದಾರರು 1300 ಮೆಸೇಜ್‌ಗಳನ್ನು ಕಳುಹಿಸಿದ್ದರು. ನಿಮಿಷಕ್ಕೆ 1.50 ಕೋಟಿ ಬಾರಿ ನನ್ನ ವಿನಿಮಯ ಸಾಗುತ್ತಿತ್ತಂತೆ. ಒಂದು ಬಗೆಯಲ್ಲಿ ಇಡೀ ವಿಶ್ವವೇ ನನ್ನನ್ನು ಅವಲಂಬಿಸತೊಡಗಿತ್ತು. ಇದೇ ಸಮಯದಲ್ಲಿ, ಸಾಲದೆಂಬಂತೆ ನನಗೆ ವಿರುದ್ಧವಾಗಿ ಇನ್‌ಸ್ಟಂಟ್ ಮೆಸೇಜ್ ಅಪ್ಲಿಕೇಷನ್ ಮತ್ತು ಬ್ಲಾಕ್‌ಬೆರಿ ಮೆಸೆಂಜರ್, ವಾಟ್ಸ್‌ಅಪ್ ಹೀಗೆ ಹಲವು ಶತ್ರುಗಳೂ ತಲೆಎತ್ತಿದರು.ಭಾರತ ಮತ್ತು ಚೀನಾದಂಥ ದೇಶಗಳಲ್ಲಿ ಆರು ನೂರು ಕೋಟಿ ಮೊಬೈಲ್ ಬಳಕೆದಾರರಲ್ಲಿ ಐನೂರು ಕೋಟಿ ಜನರು ಸ್ಮಾರ್ಟ್‌ಫೋನ್‌ಗಳಿಗಿಂತ ಕಡಿಮೆ ಬೆಲೆಯ ಫೀಚರ್ ಫೋನ್‌ಗಳನ್ನೇ ಬಳಸುತ್ತಿರುವ ಅಂಶವನ್ನೂ ವಿಶ್ವ ಬ್ಯಾಂಕ್ ದಾಖಲಿಸಿದೆಯಂತೆ. ಫೋನ್ ಯಾವುದೇ ಇರಲಿ, ನಾನೇ ಸಂವಹನದ ಪ್ರಮುಖ ಭಾಗ ಎಂದು ವಿಶ್ವವೇ ಹಾಡಿ ಹೊಗಳಿದೆ.ಕಾಲ  ಕಳೆದಂತೆ ನನ್ನನ್ನು ದುರ್ಬಳಕೆ ಮಾಡಿಕೊಳ್ಳುವವರೂ ಹೆಚ್ಚಾದರು. ನನ್ನ ಭದ್ರತೆ ಸಲುವಾಗಿ ಹಲವು ಕಾಯ್ದೆಗಳನ್ನೂ ಸರ್ಕಾರ ಹೊರತಂದಿತು. ಇದರಿಂದಾಗಿ ಭಾರತದಲ್ಲೂ ಕಳೆದ ವರ್ಷ ನನ್ನ ಖ್ಯಾತಿ ಇಳಿಕೆಯಾಯಿತು. `ಆ್ಯಂಟಿ ಸ್ಪಾಮ್ ಮಾನಿಟರ್'(ನಿಯಂತ್ರಣ ವ್ಯವಸ್ಥೆ)ಯಡಿ ಹಲವು ದಾಖಲಾತಿಗಳನ್ನೂ ರದ್ದು ಮಾಡಲಾಯಿತು.ಇಷ್ಟೆಲ್ಲಾ ಆದರೂ ಯಾರೂ ನನ್ನ ಕೈಬಿಟ್ಟಿಲ್ಲ. ನನಗೆ ಭಾರಿ ಬೆಲೆ ಕಟ್ಟಿದ್ದರೂ ನನ್ನನ್ನು ಬಳಸುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ನನ್ನ `ಮೌಲ್ಯ' ಹೆಚ್ಚಾದ ಕಾರಣಕ್ಕೆ ಎಲ್ಲೋ ನನ್ನೆಡೆಗೆ ಹಲವರಲ್ಲಿ ಅಸಮಾಧಾನ ಮೂಡಿರುವುದು ನಿಜ. ಮುಂದೆ ನನ್ನ ಗತಿಯೇನು ಎಂದು ಒಮ್ಮಮ್ಮೆ ಯೋಚನೆ ಬರುತ್ತಿತ್ತು. ಆದರೆ ಚಿಂತಿಸುವ ಅಗತ್ಯವಿಲ್ಲ. ಜನರು ಎಲ್ಲಿಯವರೆಗೂ ಮಾತನಾಡುತ್ತಾರೋ ಅಲ್ಲಿಯವರೆಗೂ ನಾನು ಇದ್ದೇ ಇರುತ್ತೇನೆ. ಹಿಂದೆ ಇದ್ದಂತೆ ನನ್ನನ್ನು ಉಚಿತವಾಗಿ ಕೊಡುವ ದಿನವೂ ಮರಳಿ ಬರಬಹುದು.

ಪ್ರತಿಕ್ರಿಯಿಸಿ (+)