ಶುಕ್ರವಾರ, ಏಪ್ರಿಲ್ 23, 2021
22 °C

ಎಸ್‌ಎಎಸ್ ಇಳಿಕೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ಸ್ವಯಂಘೋಷಿತ ಆಸ್ತಿ ತೆರಿಗೆ (ಎಸ್‌ಎಎಸ್) ಶೇ. 15ರಷ್ಟು ಹೆಚ್ಚಿಸಿದ್ದು ನಾಗರಿಕರಿಗೆ ಹೊರೆಯಾಗಿದೆ. ಈ ನಿರ್ಧಾರವನ್ನು ಹಿಂಪಡೆಯಬೇಕು’ ಎಂದು ಮಂಗಳೂರು ನಾಗರಿಕರ ಸಂಘ ಪಾಲಿಕೆಯನ್ನು ಒತ್ತಾಯಿಸಿದೆ.ನಗರದ ಡಾನ್‌ಬಾಸ್ಕೊ ಮಿನಿ ಸಭಾಂಗಣದಲ್ಲಿ ಗುರುವಾರ ಸಂಘದ ವತಿಯಿಂದ ಈ ಬಗ್ಗೆ ಮೇಯರ್ ಪ್ರವೀಣ್ ಅವರಿಗೆ ಮನವಿ ಸಲ್ಲಿಸಲಾಯಿತು. ಬಳಿಕ ನಡೆದ ಸಂವಾದದಲ್ಲಿ ಕೆ.ಆರ್.ಶೆಣೈ ಮಾತನಾಡಿ, ‘ತೆರಿಗೆ ಹೆಚ್ಚಳಕ್ಕೆ ಮುನ್ನ ಜನಾಭಿಪ್ರಾಯ ಪಡೆದಿಲ್ಲ. ಈಗಾಗಲೇ ತೆರಿಗೆ ಪಾವತಿಸಿದ ಅನೇಕರು ಗೊಂದಲದಲ್ಲಿ ಬಿದ್ದಿದ್ದಾರೆ’ ಎಂದರು.

‘ಕಳೆದ 3-4 ದಿನದಿಂದ ತೆರಿಗೆ ಪಾವತಿಗೆ ಬೇಕಾದ ಅರ್ಜಿ ನಮೂನೆ ಲಭ್ಯವಿಲ್ಲ. ಪಾಲಿಕೆ ಕಚೇರಿಗೆ ತೆರಳಿ ಅನೇಕರು ಬರಿಗೈಯಲ್ಲಿ ಮರಳಿದ್ದಾರೆ. ಅರ್ಜಿ ನಮೂನೆ ಇಲ್ಲದಿರುವುದು ಪಾಲಿಕೆ ಸಮಸ್ಯೆ. ಈ ಕಾರಣಕ್ಕೆ ಏಪ್ರಿಲ್‌ನಲ್ಲಿ ತೆರಿಗೆ ಪಾವತಿಸುವವರಿಗೆ ನೀಡಲಾಗುತ್ತಿದ್ದ ಶೇ. 5 ತೆರಿಗೆ ವಿನಾಯಿತಿ ಸೌಲಭ್ಯದ ದಿನಾಂಕ ವಿಸ್ತರಿಸಲು ಪಾಲಿಕೆ ಸಿದ್ಧವಿದೆಯೇ?’ ಎಂದು ಅವರು ಪ್ರಶ್ನಿಸಿದರು.

‘ತೆರಿಗೆ ಹೆಚ್ಚಿಸುವುದರ ಜತೆ ಘನತ್ಯಾಜ್ಯ ನಿರ್ವಹಣೆಗಾಗಿ ಸೆಸ್ ವಿಧಿಸಲಾಗಿದೆ. ನಗರದ ತ್ಯಾಜ್ಯ ನಿರ್ವಹಣೆ ಸ್ಥಿತಿ ಚಿಂತಾಜನಕವಾಗಿದೆ. ಪಾಲಿಕೆಯ ಈ ನಿರ್ಧಾರ ಹಾಸ್ಯಾಸ್ಪದ. ನಗರದ ಪಾದಚಾರಿ ಮಾರ್ಗಗಳು ಅಪೂರ್ಣವಾಗಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಚೂಡಾಮಣಿ ಬಂಗೇರ ದೂರಿದರು. 

‘ನಗರದ ಉರ್ವಸ್ಟೋರ್ ಉದ್ಯಾನದಲ್ಲಿ ಮಣ್ಣಿನ ಸವಕಳಿಯಿಂದ ಮರಗಳು ಧರೆಗುರುಳುತ್ತಿವೆ. ಆವರಣ ನಿರ್ಮಿಸಿ ಈ ಸಮಸ್ಯೆ ನಿವಾರಿಸಿ’ ಎಂದು ಪಿ.ಎಸ್.ಪಾಯಸ್ ಮನವಿ ಮಾಡಿದರು.

‘ಅಕ್ಕಪಕ್ಕದ ಮನೆಯವರು ಅನುಮತಿ ನೀಡದ ಕಾರಣ ನಗರದ ಅನೇಕ ಮನೆಯವರು ಒಳಚರಂಡಿ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪಾಲಿಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು’ ಎಂದು ಜಾನ್ ರಾಡ್ರಿಗಸ್ ಮನವಿ ಮಾಡಿದರು.

ಅಹವಾಲು ಆಲಿಸಿದ ಬಳಿಕ ಮಾತನಾಡಿದ ಮೇಯರ್ ಪ್ರವೀಣ್, ‘ಉರ್ವ ಸ್ಟೋರ್ ಉದ್ಯಾನವನ ಅಭಿವೃದ್ಧಿಗೆ ರೂ. 20 ಲಕ್ಷ ಮೀಸಲಿಡಲಾಗಿದೆ. ಪಾದಚಾರಿ ಮಾರ್ಗ ಅಭಿವೃದ್ಧಿಗೆ ರೂ. 17 ಕೋಟಿ ಕಾದಿರಿಸಲಾಗಿದೆ. ಈ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರರು ಮುಂದೆ ಬಾರದ ಕಾರಣ ಕಾಮಗಾರಿಗೆ ಹಿನ್ನಡೆ ಆಗಿದೆ’ ಎಂದರು.

ಸಂಘದ ಅಧ್ಯಕ್ಷ ಸ್ಟ್ಯಾನಿ ಮಿನೇಜಸ್ ಹಾಗೂ ಉಪಾಧ್ಯಕ್ಷ ಸತೀಶ್ ರಾವ್ ಇದ್ದರು.

ಚರಂಡಿ ದುರಸ್ತಿಗೆ 15 ಕೋಟಿ

ಪಾಲಿಕೆ ವ್ಯಾಪ್ತಿಯ ಒಳಚರಂಡಿಗಳನ್ನು ಮಳೆಗಾಲಕ್ಕೆ ಮುನ್ನವೇ ಸ್ವಚ್ಛಗೊಳಿಸುವ ಸಲುವಾಗಿ ರೂ 15 ಕೋಟಿ ಕಾದಿರಿಸಲಾಗಿದೆ ಎಂದು ಮೇಯರ್ ಪ್ರವೀಣ್ ತಿಳಿಸಿದರು.‘ಚರಂಡಿಯಲ್ಲಿ ಸಿಲುಕಿರುವ ಕಸಕಡ್ಡಿಗಳನ್ನು ಶುಚಿಗೊಳಿಸುವ ಕಾರ್ಯ ಇದೇ 15ರಿಂದಲೇ ಆರಂಭವಾಗಲಿದ್ದು, ಮೇ 30ರವರೆಗೆ ಮುಂದುವರಿಯಲಿದೆ. ಚರಂಡಿ ಶುಚಿಗೊಳಿಸಲು ಪ್ರತಿ ವಾರ್ಡ್‌ಗೂ ಒಂದು ಟೆಂಪೊ ಹಾಗೂ ಐದು ಕೂಲಿ ಕಾರ್ಮಿಕರನ್ನು ಒದಗಿಸಲಾಗುವುದು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.