ಎಸ್‌ಎಪಿ ಜಾರಿಗೆ ಆಗ್ರಹಿಸಿ ರೈತ ಬಲಪ್ರದರ್ಶನ

7

ಎಸ್‌ಎಪಿ ಜಾರಿಗೆ ಆಗ್ರಹಿಸಿ ರೈತ ಬಲಪ್ರದರ್ಶನ

Published:
Updated:

ಬೆಳಗಾವಿ: ಪ್ರತಿ ಟನ್ ಕಬ್ಬಿಗೆ 3000 ರೂಪಾಯಿ ಮುಂಗಡ ಕೊಡಲು ಆದೇಶಿಸಬೇಕು. ರಾಜ್ಯ ಸಲಹಾ ಬೆಲೆಗೆ (ಎಸ್‌ಎಪಿ) ಮಸೂದೆ ರೂಪಿಸಿ, ಜಾರಿಗೆ ತರಬೇಕು ಎಂದು ಆಗ್ರಹಿಸಿ ಸುವರ್ಣ ವಿಧಾನಸೌಧದ ಎದುರು ಕಬ್ಬು ಬೆಳೆಗಾರರು ಬುಧವಾರ ಪ್ರತಿಭಟನೆ ನಡೆಸಿದರು.ಎಸ್‌ಎಪಿ ಕುರಿತು ಈ ಅಧಿವೇಶನದಲ್ಲೇ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್   ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಸುವರ್ಣ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಕೈಬಿಟ್ಟರು.ಸಕ್ಕರೆ ಕಾರ್ಖಾನೆಗಳು ರೈತರಿಗೆ ಕೊಡಬೇಕಾದ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಸಕ್ಕರೆ ಇಳುವರಿ, ಸಕ್ಕರೆ ದರ ಹಾಗೂ ಉಪ ಉತ್ಪನ್ನಗಳ ಲಾಭಗಳನ್ನು ಪರಿಗಣಿಸಿ ಕಬ್ಬಿಗೆ ಬೆಲೆ ನಿಗದಿ ಪಡಿಸಬೇಕು. ರಂಗರಾಜನ್ ವರದಿ ಅನುಷ್ಠಾನಗೊಳಿಸಬೇಕು ಎಂದು ರೈತರು ಒತ್ತಾಯಿಸಿದರು.ಬರಗಾಲದಿಂದ ಹಾನಿಗೊಳಗಾದ ರೈತರಿಗೆ ಪ್ರತಿ ಎಕರೆಗೆ 10 ಸಾವಿರ ರೂಪಾಯಿ ಪರಿಹಾರ ಕೊಡಬೇಕು. ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಬೆಳೆಗಳಿಗೆ ಕೃಷಿ ವೆಚ್ಚ ಪರಿಗಣಿಸಿ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು. ಪರಮಶಿವಯ್ಯ ಅವರ ವರದಿ ಆಧರಿಸಿ ನೀರಾವರಿ ಯೋಜನೆಗಳ ಜಾರಿಗೆ ತರ ಬೇಕು. ಕಳಸಾ- ಬಂಡೂರಿ ನಾಲಾ ಜೋಡಣೆ ಯೋಜನೆ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಕೃಷಿ ಉತ್ಪನ್ನಗಳ ಆಮದು ಮಾಡಿಕೊಳ್ಳುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ರೈತ ಸಂಘದ ಕಾರ್ಯಾಧ್ಯಕ್ಷ ಎಚ್. ಆರ್.ಬಸವರಾಜಪ್ಪ, ವಿದ್ಯುತ್ ಪೂರೈಕೆಯಲ್ಲಿ ನಗರಗಳಿಗೆ ಹಾಗೂ ಹಳ್ಳಿಗಳಿಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಕೇವಲ ಭಾವನಾತ್ಮಕವಾಗಿ ಮತ ಪಡೆಯಲು ಸುವರ್ಣ ವಿಧಾನಸೌಧ ನಿರ್ಮಿಸಿದ್ದಾರೆ ಎಂದು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ, `ರಾಜ್ಯ ಸರ್ಕಾರ ರೈತರ ಜೊತೆ ಚೆಲ್ಲಾಟ ಆಡುತ್ತಿದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ ಮೂಕ ಬಸವ ಎಂಬಂತೆ ಇದ್ದು, ರಾಜ್ಯ ಸರ್ಕರ ಕಳ್ಳರ ಕೂಟವಾಗಿದೆ. ಈ ಸರ್ಕಾರದಿಂದ ರೈತರ ದರೋಡೆ ನಡೆಯುತ್ತಿದೆ. ರಾಜ್ಯದ 58 ಸಕ್ಕರೆ ಕಾರ್ಖಾನೆಗಳ ಪೈಕಿ 30ಕ್ಕೂ ಹೆಚ್ಚು ಕಾರ್ಖಾನೆಗಳು ಶಾಸಕರು ಮತ್ತು ಸಚಿವರ ಒಡೆತನದಲ್ಲಿವೆ. ಹೀಗಾಗಿಯೇ ಎಸ್‌ಎಪಿ ಕಾಯ್ದೆ ಜಾರಿಗೆ ಸರ್ಕಾರ ಹಿಂದೇಟು ಹಾಕುತ್ತಿದೆ' ಎಂದು  ಆಪಾದಿಸಿದರು.`ಸಕ್ಕರೆ ಕಾರ್ಖಾನೆ ಮಾಲೀಕರ ಲಾಬಿಗೆ ಸರ್ಕಾರ ತಲೆ ಬಾಗಿಸಿದೆ. ರೈತರ ಪರ ಸರ್ಕಾರ ಕೆಲಸ ಮಾಡುತ್ತಿಲ್ಲ. ರಾಜ್ಯದ ಜಲಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಆದ್ದರಿಂದಲೇ ಆಂಧ್ರಪ್ರದೇಶ ಹಾಗೂ ತಮಿಳುನಾಡು ನಮ್ಮ ಪಾಲಿನ ನೀರನ್ನು ಒತ್ತುವರಿ ಮಾಡಿವೆ. ರೈತ ಪರ ಚಳವಳಿಗಾರರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು' ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಒತ್ತಾಯಿಸಿದರು.ಪ್ರತಿಭಟನಾ ಸ್ಥಳಕ್ಕೆ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿದ ಬಸವರಾಜ ಬೊಮ್ಮಾಯಿ ಮನವಿ ಸ್ವೀಕರಿಸಿ, ಎಸ್‌ಎಪಿ ಕಾಯ್ದೆ ಜಾರಿಗೆ ಸರ್ಕಾರ ಬದ್ಧವಿದೆ. ಸುಗ್ರಿವಾಜ್ಞೆ ಹೊರಡಿಸಿಯಾದರೂ ಎಸ್‌ಎಪಿ ಕಾಯ್ದೆ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು. ಸಕ್ಕರೆ ಕಾರ್ಖಾನೆಗಳು ಖಾಸಗಿ ಹಾಗೂ ಸಹಕಾರಿ ಸಂಘಗಳ ಒಡೆತನದಲ್ಲಿರುವುದರಿಂದ ಅವುಗಳ ಮೇಲೆ ರಾಜ್ಯ ಸರ್ಕಾರದ ನಿಯಂತ್ರಣವಿಲ್ಲ ಎಂದ ಬೊಮ್ಮಾಯಿ, ರೈತ ಪರ ಚಳವಳಿ ನಡೆಸಿದವರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಪ್ರಯತ್ನಿಸಲಾಗುವುದು ಎಂದರು.ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘ, ಭಾರತೀಯ ಕೃಷಿಕ ಸಮಾಜ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಜಾತ್ಯತೀತ ಜನತಾದಳ, ದಲಿತ ಸಂಘರ್ಷ ಸಮಿತಿ, ಬಿಎಸ್‌ಆರ್ ಕಾಂಗ್ರೆಸ್ ಸಮತಾ ಸೈನಿಕ ದಳ, ಬಹುಜನ ಸಮಾಜ ಪಾರ್ಟಿ ಮತ್ತಿತರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.ಶ್ರದ್ಧಾಂಜಲಿ: ಪ್ರತಿಭಟನಾ ಸಭೆ ಆರಂಭವಾಗುತ್ತಿದ್ದಂತೆ ಇತ್ತೀಚೆಗೆ ನಿಧನರಾದ ರೈತ ಮಖಂಡರಾದ ರಮೇಶ ಗಡದನ್ನವರ, ಡಾ. ವೆಂಕಟರೆಡ್ಡಿ ಹಾಗೂ ಮಹಾರಾಷ್ಟ್ರದಲ್ಲಿ ರೈತ ಚಳವಳಿ ಸಂದರ್ಭದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಚಂದ್ರಕಂತ ಹಾಗೂ ಪುಂಡಲೀಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎರಡು ನಿಮಿಷ ಮೌನ ಆಚರಿಸಿ ಸಂತಾಪ ಸೂಚಿಸಲಾಯಿತು.ಗೊಂದಲದ ವಾತಾವರಣ: ರೈತರ ಪ್ರತಿಭಟನಾ ಸ್ಥಳಕ್ಕೆ ಸರ್ಕಾರದ ಪ್ರತಿನಿಧಿಗಳಾಗಿ ಆಗಮಿಸಿದ್ದ ಸಚಿವ ಬಸವರಾಜ ಬೊಮ್ಮಾಯಿ  ಮಾತು ಮುಗಿಸುತ್ತಿದ್ದಂತೆ ಯುವ ರೈತ ಮಖಂಡ ರಮೇಶ ಕೋಮಾರ ಮಧ್ಯೆ ಪ್ರವೇಶಿಸಿ ಮುಖ್ಯಮಂತ್ರಿಗಳೇ ಸ್ಥಳಕ್ಕೆ ಬಂದು ಭರವಸೆ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ವೇದಿಕೆಯಲ್ಲಿದ್ದ ಮಠಾಧೀಶರು ಪ್ರತಿಭಟನಾ ಸ್ಥಳದಿಂದ ನಿರ್ಗಮಿಸಿದರು.ರೈತ ಮುಖಂಡರು ಮಧ್ಯ ಪ್ರವೇಶಿಸಿದರೂ ರೈತರು ಅವರ ಮಾತಿಗೆ ಕಿವಿಗೊಡಲಿಲ್ಲ. ಯಾವುದೇ ಕಾರಣಕ್ಕೂ ಪ್ರತಿಭಟನೆ ಮೊಟಕುಗೊಳಿಸಬಾರು ಎಂದು ರೈತರು ಪಟ್ಟು ಹಿಡಿದರು. ರೈತರ ಮನವೊಲಿಸಲು ಮುಖಂಡರು ಪ್ರಯಾಸ ಪಡಬೇಕಾಯಿತು. ನಂತರ ರೈತ ಮಖಂಡರು ಮಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲು ಸುವರ್ಣ ವಿಧಾನಸೌಧಕ್ಕೆ ತೆರಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry