ಶನಿವಾರ, ಜನವರಿ 25, 2020
16 °C
ವೃತ್ತಿ ಶಿಕ್ಷಣ ಸೀಟು, ಶುಲ್ಕ ನಿಗದಿ ಕಾಯ್ದೆ ಹಿಂಪಡೆಯಲು ಒತ್ತಾಯ

ಎಸ್‌ಎಫ್‌ಐ ಕಾರ್ಯಕರ್ತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ವೃತ್ತಿ ಶಿಕ್ಷಣ ಸೀಟು ಹಂಚಿಕೆ ಹಾಗೂ ಶುಲ್ಕ ನಿಗದಿ -ಕಾಯ್ದೆ ೨೦೦೬ರನ್ನು ವಾಪಸ್‌ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಗುರುವಾರ ನಗರದಲ್ಲಿ ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.ಕೆಎಲ್‌ಇ ಶಾಲೆಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವೃತ್ತಿ ಶಿಕ್ಷಣದ ಬಗ್ಗೆ ವಿರೋಧಿ ನೀತಿ ಅನುಸರಿಸುವ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಾ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಬಸವರಾಜ ಪೂಜಾರ ಮಾತನಾಡಿ, ವೃತ್ತಿ ಶಿಕ್ಷಣ ಕಾಯ್ದೆ- ೨೦೦೬ ಬಡ ವಿದ್ಯಾರ್ಥಿಗಳ ವೃತ್ತಿ ಶಿಕ್ಷಣದ ಭವಿಷ್ಯಕ್ಕೆ ಮಾರಕವಾಗಿದೆ. ಕಾಯ್ದೆ ರದ್ದು ಪಡಿಸುವಂತೆ ರಾಜ್ಯದಲ್ಲಿ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಕುರುಡುತನ ವಹಿಸಿದೆ ಎಂದು ಆರೋಪಿಸಿದರು.ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಹಿತ ಕಾಪಾಡುವ ಉದ್ದೇಶದಿಂದ ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿಯನ್ನು ಅನುಸರಿಸುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ವೃತ್ತಿ ಶಿಕ್ಷಣದಿಂದ ವಂಚಿತರನ್ನಾಗಿಸಲು ಸಂಚು ರೂಪಿಸುತ್ತಿದೆ ಎಂದು ಆಪಾದಿಸಿದರು.ಸರ್ಕಾರ ತಕ್ಷಣ ಈ ಕಾಯಿದೆಯನ್ನು ವಾಪಸ್‌ ಪಡೆಯಬೇಕು. ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಬೇಕು. ಶುಲ್ಕ ಏರಿಕೆ ತಡೆಗಟ್ಟಬೇಕು. ಸಿ.ಇ.ಟಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಸೌಲಭ್ಯಗಳಿಲ್ಲದ, ಸಾಮಾಜಿಕ ನ್ಯಾಯ ಕಡೆಗಣಿಸುವ ಹಾಗೂ ಸರ್ಕಾರದ ನಿಯಂತ್ರಣಕ್ಕೆ ಬಾರದ ಖಾಸಗಿ ಕಾಲೇಜುಗಳ ಮಾನ್ಯತೆ ರದ್ದು ಪಡಿಸಬೇಕು. ಸರ್ಕಾರಿ ಕಾಲೇಜುಗಳಿಗೆ ಶೇ 75 ಹಾಗೂ ಖಾಸಗಿ ಕಾಲೇಜುಗಳಿಗೆ ಶೇ 25ರ ಅನುಪಾತದಲ್ಲಿ ಸೀಟು ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನಾಕಾರರು ಬೇಡಿಕೆಯ ಮನವಿಯನ್ನು ತಹಶೀಲ್ದಾರ್‌ ದಂಡಿನ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಮುಖಂಡರಾದ ಪ್ರಸನ್ನ ಹಿರೇಮಠ, ಮಹ್ಮದ್‌ರಫಿಕ್‌ ನದಾಫ್‌, ಇಮಾಮ್‌ ನದಾಫ್‌, ಮಲ್ಲಿಕಾರ್ಜುನ ಹಿರೇಮಠ, ಚಂದ್ರು ಶಂಕ್ರಪ್ಪನವರ, ಮಂಜುನಾಥ ಉಪ್ಪಾರ, ಶಿವರಾಜ ಕಲಕೇರಿ, ದೀಪಕ ಕಬ್ಬೂರ, ರಾಘವೇಂದ್ರ. ಪಿ.ಎನ್., ವಿಶಾಲ ಹೇರೂರ, ಅಮಿತ ಶಿವಳ್ಳಿ, ಅರವಿಂದ ಪತ್ತಾರ, ಶೈಲಾ ಕೆ., ಯಲ್ಲಮ್ಮ, ಸಬಿಹಾ, ರೂಪಾ , ಹರ್ಷಾ, ಅಕ್ಷಯ, ಸುಮಂತ ಹಂಚಿನಾಳ, ದರ್ಶನ ಉಪಾಸಿ, ಆನಂದ ಕೂಲಿ, ಅಭಿಲಾಷಾ ಹೊಸಮಠ, ಪುನೀತ, ಶುಭಂ ಜಾನ್ವೇಕರ, ನವೀನ ದೊಡ್ಡಣ್ಣವರ, ರಾಜು ಚನ್ನೂರ, ಅಮಿತ ಶಿವಳ್ಳಿ  ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)