ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಿದ್ಯಾರ್ಥಿ ದತ್ತು ಸ್ವೀಕಾರ!

7

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಿದ್ಯಾರ್ಥಿ ದತ್ತು ಸ್ವೀಕಾರ!

Published:
Updated:

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ನೆಲಕಚ್ಚಿದೆ. ಮೊದಲ ಸ್ಥಾನದಿಂದ 21 ನೇ ಸ್ಥಾನಕ್ಕೆ ಇಳಿದಿದೆ. ಇದಕ್ಕೆ ಪರಿಹಾರ?ಈ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಸಾರ್ವಜನಿಕ ಶಿಕ್ಷಣ ಇಲಾಖೆ ವಿನೂತನ ತಂತ್ರ ಪ್ರಯೋಗ ಮಾಡಿದೆ. ಓದದೇ ಮಲಗಿರುವ ವಿದ್ಯಾರ್ಥಿಗಳನ್ನು ಎಬ್ಬಿಸಿ ಇಲಾಖೆ ಶಿಕ್ಷಣ ದತ್ತು ಪಡೆಯುತ್ತಿದೆ!ಆರಂಭದಿಂದಲೂ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶಗಳಲ್ಲಿ ಮೊದಲ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ 2010-11ರಲ್ಲಿ ರಾಜ್ಯದಲ್ಲಿ 21ನೇ ಸ್ಥಾನಕ್ಕೆ ಇಳಿದ ಮೇಲೆ, ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚೆತ್ತಿದೆ. ಪುಂಖಾನುಪುಂಖವಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡರೂ ಮಕ್ಕಳು ಓದದೇ ಕುಳಿತಿದ್ದರೆ ಏನು ಮಾಡುವುದು? ಅದಕ್ಕಾಗಿಯೇ ಈ ವಿನೂತನ ಯೋಜನೆ.ಜಿಲ್ಲೆಯ ಎಲ್ಲ ಶಾಲೆಗಳಿಂದ ಪೋಷಕರ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಪಡೆದಿರುವ ಇಲಾಖೆ ಮೊದಲೇ ಪೋಷಕರನ್ನು ಸಂಪರ್ಕಿಸಿ, ಮಕ್ಕಳನ್ನು ಓದಲು ಬೆಳಿಗ್ಗೆ 4ಕ್ಕೇ ಎಚ್ಚರಿಸಬೇಕು. ಬೆಳಿಗ್ಗೆ 7 ಗಂಟೆಯಾದರೂ ಮಕ್ಕಳೇನಾದರೂ ಮಲಗಿಯೇ ಇದ್ದಲ್ಲಿ, ಅವರನ್ನು ದತ್ತು ಪಡೆಯಲಾಗುತ್ತದೆ ಎಂದು ತಿಳಿಸಿರುತ್ತದೆ. ಅದರಂತೆ ಬೇರೆ ಬೇರೆ ಸಮಯದಲ್ಲಿ ಅನಿರೀಕ್ಷಿತವಾಗಿ ಇಲಾಖೆ ಸಿಬ್ಬಂದಿ ಕರೆ ಮಾಡುತ್ತಾರೆ. ಬೆಳಿಗ್ಗೆ 4ಕ್ಕೆ ಒಮ್ಮೆ, 5 ಗಂಟೆಗೆ, 6ಕ್ಕೆ, 7ಕ್ಕೆ ಹೀಗೆ ಕರೆ ಮಾಡಿದಾಗ ಬೆಳಿಗ್ಗೆ 7 ಗಂಟೆ ಆದರೂ ಮಲಗಿಯೇ ಇರುವ ವಿದ್ಯಾರ್ಥಿ ಮರುದಿನದಿಂದ ಶಿಕ್ಷಣ ಇಲಾಖೆಯ ದತ್ತು!ಈ ವಿನೂತನ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಇಲಾಖೆ ಜಾರಿಗೊಳಿಸಿದೆ. 2011-12ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಸ್ಥಾನ ಗಳಿಸಲೇಬೇಕು ಎಂಬುದೇ ಈ ಹೊಸ ಆಲೋಚನೆಯ ಹಿಂದಿನ ಉದ್ದೇಶ.ಫಲಿತಾಂಶದಲ್ಲಿ ಮೊದಲ ಸ್ಥಾನಕ್ಕಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಪೈಪೋಟಿ ನಡೆಸುತ್ತಿದ್ದ ಕಾಲ ಮರೆತಂತಾಗಿ ಫಲಿತಾಂಶ ದಿಢೀರನೆ 21ನೇ ಸ್ಥಾನಕ್ಕೆ ಕುಸಿದಿರುವುದು ಇಲಾಖೆಯನ್ನು ಚಿಂತೆಗೀಡು ಮಾಡಿದೆ. ಅದಕ್ಕಾಗಿಯೇ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಂಪೂರ್ಣವಾಗಿ ಸಜ್ಜುಗೊಳಿಸಲು ಇಂಥ ಕಾರ್ಯಕ್ರಮ ಹಮ್ಮಿಕೊಂಡಿದೆ.ಈ ನಿಟ್ಟಿನಲ್ಲಿ ಜಿಲ್ಲೆಯ ಹಲವು ಪ್ರೌಢಶಾಲೆಗಳ ವಿದ್ಯಾರ್ಥಿಗಳ ಬುದ್ಧಿಮತ್ತೆ ಅಧ್ಯಯನ ಮಾಡಿರುವ ಇಲಾಖೆ, ಓದಿನಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ.

ಕಾರ್ಯಾಚರಣೆ ಹೇಗೆ?: ಈಗಾಗಲೇ ಅಸ್ತಿತ್ವದಲ್ಲಿರುವ ಶೈಕ್ಷಣಿಕ ಬ್ಲಾಕ್‌ಗಳಲ್ಲಿ ಇಲಾಖಾ ಸಿಬ್ಬಂದಿಯನ್ನು ಈ ಸಂಬಂಧ ತರಬೇತುಗೊಳಿಸಲಾಗಿದೆ. ಶಿಕ್ಷಕರನ್ನೂ ಇದರಲ್ಲಿ ಸೇರಿಸಿಕೊಳ್ಳಲಾಗಿದೆ. ಪೋಷಕರ ಒಪ್ಪಿಗೆಯನ್ನೂ ಪಡೆಯಲಾಗಿದೆ. ಓದಿನಲ್ಲಿ ಹಿಂದೆಬಿದ್ದ ಮಕ್ಕಳಿಂದಲೇ ಫಲಿತಾಂಶ ಕಡಿಮೆಯಾಗಿರುವುದು ಎನ್ನುತ್ತಾರೆ ಇಲಾಖೆಯ ಅಧಿಕಾರಿ.ವಿದ್ಯಾರ್ಥಿಗೆ ತರಬೇತಿ: ಪ್ರತಿ ಬ್ಲಾಕ್‌ಗೆ 10 ವಿದ್ಯಾರ್ಥಿಗಳಂತೆ ದತ್ತು ಸ್ವೀಕಾರ ಆರಂಭವಾಗಿದ್ದು, ಇಲಾಖೆಯಿಂದ ನಿಯೋಜಿಸಲ್ಪಟ್ಟ ಶಿಕ್ಷಕರು ಆಯಾ ವ್ಯಾಪ್ತಿಯ ಶಾಲೆಯಲ್ಲಿ ವಿಶೇಷ ತರಗತಿ ತೆಗೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ವಿಧಾನ, ಸಮಯದ ಸದ್ಬಳಕೆ, ಕೈಬರಹ ಉತ್ತಮ ಪಡಿಸಿಕೊಳ್ಳುವ ಕುರಿತು ಪಾಠ ಹೇಳಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಏಪ್ರಿಲ್‌ನಲ್ಲಿ ಆರಂಭಗೊಳ್ಳಲಿದ್ದು, ಅಷ್ಟರೊಳಗೆ ಸಜ್ಜುಗೊಳಿಸುವ ಗುರಿ ಹೊಂದಲಾಗಿದೆ ಎಂದು ಡಿಡಿಪಿಐ ಮೋಸೆಸ್ ಜಯಶೇಖರ್ `ಪ್ರಜಾವಾಣಿ~ಗೆ ಮಂಗಳವಾರ ತಿಳಿಸಿದರು.ಇಲಾಖೆ ಇದಕ್ಕೆ ಪೂರಕವಾಗಿ ಮತ್ತಷ್ಟು ತರಬೇತಿ ಕಾರ್ಯಕ್ರಮಗಳನ್ನೂ ಜಾರಿಗೊಳಿಸಿದ್ದು, ಶಿಕ್ಷಕರಿಗೂ ತರಬೇತಿ, ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಯ ಸಿದ್ಧತೆಗಾಗಿ ಪರೀಕ್ಷಾ ಮಾದರಿ ಪ್ರಶ್ನೆಪತ್ರಿಕೆ ಗುಚ್ಛ ಸಿದ್ಧಪಡಿಸುವುದು, ಬ್ಲಾಕ್ ಮಟ್ಟದಲ್ಲಿ 500-1000 ವಿದ್ಯಾರ್ಥಿಗಳಿಗೆ 1 ದಿನದ ಪರೀಕ್ಷಾ ಸಿದ್ಧತೆ ಕಾರ್ಯಾಗಾರ ಹಮ್ಮಿಕೊಂಡಿದೆ. ಇದಕ್ಕಾಗಿ ಸಂಪನ್ಮೂಲ ವ್ಯಕ್ತಿಗಳನ್ನು ಬೆಂಗಳೂರಿನಿಂದಲೂ ಕರೆಸಿಕೊಳ್ಳಲಾಗಿದೆ ಎಂದರು.

ಪಿಯು ಪರೀಕ್ಷೆ ಮಾ. 15ರಿಂದ

ರಾಜ್ಯದಾದ್ಯಂತ ಪಿಯುಸಿ ಪರೀಕ್ಷೆ ಮಾ. 15ರಿಂದ ಆರಂಭಗೊಳ್ಳಲಿದ್ದು, ದಕ್ಷಿಣ ಕನ್ನಡ ಜಿಲ್ಲೆ ಸಜ್ಜಾಗಿದೆ. ಜಿಲ್ಲೆಯಲ್ಲಿ ಒಟ್ಟು 167 ಪದವಿ ಪೂರ್ವ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಪೂರ್ವ ಸಿದ್ಧತಾ ಪರೀಕ್ಷೆಗಳು ಆರಂಭಗೊಂಡಿವೆ. ಅಲ್ಲದೇ ಪದವಿ ಪೂರ್ವ ಶಿಕ್ಷಣ ಇಲಾಖೆಯು ಎಲ್ಲ ಕಾಲೇಜುಗಳ ಪ್ರಾಂಶುಪಾಲರನ್ನು ಸಭೆ ಕರೆದು ವಿಶೇಷ ತರಗತಿ ತೆಗೆದುಕೊಳ್ಳುವಂತೆ ಮನವಿ ಮಾಡಿದೆ.ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಮೊದಲ ಸ್ಥಾನ ಕಾಪಾಡಿಕೊಂಡಿದೆ. ಉಡುಪಿ ಜಿಲ್ಲೆಯೂ ಪೈಪೋಟಿ ನೀಡುತ್ತಿದೆ. ಮೊದಲ ಸ್ಥಾನ ಬಿಟ್ಟುಕೊಡಬಾರದೆಂದು ಇಲಾಖೆ ಅಧಿಕಾರಿಗಳ ತಂಡ ಕಾಲೇಜುಗಳಿಗೆ ದಿಢೀರ್ ಭೇಟಿ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ. ವಿಶೇಷ ತರಬೇತಿ ನಡೆಸುವಂತೆಯೂ ಕಾಲೇಜುಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡುತ್ತದೆ.

 

`ಉತ್ತಮ ಫಲಿತಾಂಶ ನಿರೀಕ್ಷೆ~

ಪಿಯು ಪರೀಕ್ಷೆಗೆ ಸಿದ್ಧಗೊಳ್ಳುವ ಅಂತಿಮ ಹಂತದಲ್ಲಿದ್ದೇವೆ. ಈಗಾಗಲೇ ಸಾಕಷ್ಟು ಸಿದ್ಧತೆ ನಡೆದಿದೆ. ವಿಜ್ಞಾನ ವಿಷಯವಾದ್ದರಿಂದ ಪ್ರಾಯೋಗಿಕ ತರಗತಿಗಳಿಗೂ ಸಿದ್ಧತೆ ನಡೆಸಿದ್ದೇವೆ. ಉತ್ತಮ ಫಲಿತಾಂಶದ ನಿರೀಕ್ಷೆಯಿದೆ.

- ಸುಹಾನ್ ಚಂದ್ರ, ದ್ವಿತೀಯ ಪಿಯು, ಸೇಂಟ್ ಸೆಬಾಸ್ಟಿಯನ್ ಕಾಂಪೋಸಿಟ್ ಪಿಯು ಕಾಲೇಜ್.`ಜೀವನ ನಿರ್ಧರಿಸುವ ಪರೀಕ್ಷೆ~

`ದ್ವಿತೀಯ ಪಿಯುಸಿ ಪರೀಕ್ಷೆ ಜೀವನ ನಿರ್ಧರಿಸುತ್ತದೆ. ಹಾಗಾಗಿ ಗಂಭೀರ ಸಿದ್ಧತೆಯಲ್ಲಿದ್ದೇವೆ. ಪರೀಕ್ಷೆ ಹತ್ತಿರವಾಗುತ್ತಿದ್ದು, ಓದುವ ಅವಧಿಯನ್ನೂ ಹೆಚ್ಚಿಸಿಕೊಂಡಿದ್ದೇನೆ. ವಿಜ್ಞಾನ ವಿಷಯಗಳಿಗೆ ಒತ್ತು ನೀಡಿದರೆ ಸಾಲದು, ಭಾಷೆಗೂ ಪ್ರಾಮುಖ್ಯತೆ ನೀಡಿ ಸಿದ್ಧತೆ ನಡೆಸಿದ್ದೇನೆ~.

- ಓಂಕಾರ್ ಬಸವ ಪ್ರಭು, ಶಾರದಾ ಪಿಯು ಕಾಲೇಜ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry