ಮಂಗಳವಾರ, ಮೇ 18, 2021
22 °C

ಎಸ್‌ಎಸ್‌ಎಲ್‌ಸಿ ಮಗಳಿಗೊಂದು ಕಿವಿಮಾತು

ತುರುವೇಕೆರೆ ಪ್ರಸಾದ್ Updated:

ಅಕ್ಷರ ಗಾತ್ರ : | |

ಪ್ರೀತಿಯ ಮಗಳೇ,

ನಿನ್ನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದು ಆರಂಭವಾಗಿದೆ. ಆದರೆ ಬಹಳ ದಿನಗಳಿಂದ ನಿನಗೆ ಕೆಲವು ವಿಷಯಗಳನ್ನು ಹೇಳಬೇಕೆಂದಿದ್ದೆವು. ಅದನ್ನು ಈಗ ಹೇಳುತ್ತಿದ್ದೇವೆ.

ಮಗಳೇ, ಎಸ್‌ಎಸ್‌ಎಲ್‌ಸಿ ಏನೋ ಮಹಾ ದೊಡ್ಡ ಪರೀಕ್ಷೆ; ಅದರಲ್ಲಿ ಸಿಕ್ಕಾಪಟ್ಟೆ ಮಾರ್ಕ್ಸ್ ತೆಗೆಯಲೇಬೇಕು, ಇಲ್ಲದಿದ್ದರೆ ಮರ್ಯಾದೆಗೆ ಕಮ್ಮಿ ಅಂತಲೋ, ಗೌರವಕ್ಕೆ ಕುಂದು ಅಂತಲೋ ಭಾವಿಸುವುದು ಬೇಡ. ನಾವು ವರ್ಷದಲ್ಲಿ ಓದಿದ್ದನ್ನು ನೆನಪು ಮಾಡಿಕೊಂಡು ಒಂದು ನಿಗದಿತ ಸಮಯದಲ್ಲಿ ಮತ್ತೆ ಬರೆಯುವ ಒಂದು ಪ್ರಕ್ರಿಯೆಯೇ ಪರೀಕ್ಷೆ.

 

ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದರೆ `ಹೊಸ ಜಾಗದಲ್ಲಿ ಬರೆಯುವುದು, ಆತ್ಮವಿಶ್ವಾಸದಿಂದ ಇರುವುದು, ವಿಷಯವನ್ನು ನೆನೆಪಿಸಿಕೊಳ್ಳುವುದು, ಹೆದರದೆ ನಿರಾಳವಾಗಿರುವುದು, ಬೇಗ ಬೇಗ ಬರೆಯುವುದು, ಬರೆಯುವುದನ್ನು ಸ್ಪಷ್ಟವಾಗಿ ಗೊಂದಲವಿಲ್ಲದಂತೆ ಬರೆಯುವುದು~ ಇಷ್ಟೇ!

 ನಿನಗೆ ಪರೀಕ್ಷೆ ಬರೆಯಲು ಹೆದರಿಕೆ ಇರುವುದಿಲ್ಲ. ಏಕೆಂದರೆ-

* ನಿನಗೆ ನಿನ್ನ ಮೇಲೆ, ನಿನ್ನ ಶ್ರಮದ ಮೇಲೆ, ಪ್ರಯತ್ನದ ಮೇಲೆ ಅಖಂಡವಾದ ನಂಬಿಕೆಯಿದೆ. ಜೊತೆಗೆ ದೇವರ ಮೇಲೆಯೂ ನಂಬಿಕೆ ಇದೆ. ನಿನ್ನ ಪ್ರಯತ್ನಕ್ಕೆ ತಕ್ಕ ಪ್ರತಿಫಲವನ್ನು ದೇವರು ಕೊಡುತ್ತಾನೆ ಎಂಬ ಅಚಲ ವಿಶ್ವಾಸ ನಿನ್ನಲ್ಲಿದೆ.



* ನೀನು ಈಗಾಗಲೇ ಬೇಕಾದಷ್ಟು ಪರೀಕ್ಷೆ ಬರೆದಿರುವೆ. ಇದೂ ಅದೇ ತರಹದ ಒಂದು ಪರೀಕ್ಷೆ ಅಷ್ಟೇ!



* ನವೋದಯ ಪರೀಕ್ಷೆಯಲ್ಲಿ ಜಿಲ್ಲೆಗೆ 12ನೆಯವಳಾಗಿ ಪಾಸಾಗಿರುವೆ (ಈ ರೀತಿ ಮಗನ/ ಮಗಳ ಹಿಂದಿನ ಸಾಧನೆಯನ್ನು ಅವರಿಗೆ ನೆನಪು ಮಾಡಿಕೊಡಿ).



* ಹಲವು ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬರೆದ ಅಭ್ಯಾಸ ನಿನಗಿದೆ.



* ನಿನಗೆ ಎಕ್ಸಾಮ್ ಹೇಗೆ ಎದುರಿಸಬೇಕು ಎಂಬುದು ಗೊತ್ತಿದೆ.



* ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆ ಹೇಗಿರುತ್ತೆ ಎಂದು ನಿನಗೆ ಗೊತ್ತಿದೆ (ಏಕೆಂದರೆ ಅದನ್ನು ನೀನು ಅಭ್ಯಾಸ ಮಾಡಿದ್ದೆ).



* ಪ್ರಾಮಾಣಿಕವಾಗಿ ಬರೀತೀನಿ ಅನ್ನೋ ಸಂಕಲ್ಪ, ಆತ್ಮವಿಶ್ವಾಸ ನಿನ್ನಲ್ಲಿದೆ.



* ಅಕಸ್ಮಾತ್ ನೀನು ಒಂದೆರಡು ಪ್ರಶ್ನೆಗೆ ಉತ್ತರಿಸದೇ ಹೋದರೆ ಅಪ್ಪ, ಅಮ್ಮ ಯಾರೂ ಅದರ ಬಗ್ಗೆ ಆಕ್ಷೇಪಿಸುವುದಿಲ್ಲ ಎಂದು ನಿನಗೆ ಚೆನ್ನಾಗಿ ಗೊತ್ತಿದೆ ( ನಾವು ಯಾವತ್ತೂ ಹಾಗೆ ಮಾಡಿಲ್ಲ ಎಂಬುದನ್ನು ನೆನಪಿಟ್ಟುಕೋ).



* ಈ ಹಿಂದೆ ನೆನಪಿನ ಸ್ಪರ್ಧೆಯಲ್ಲಿ ಒಮ್ಮೆ ನೀನು ಮೊದಲ ಬಹುಮಾನ ಪಡೆದಿದ್ದೆ. ಹಾಗಾಗಿ ನಿನಗೆ ಅದ್ಭುತ ನೆನಪಿನ ಶಕ್ತಿ ಇದೆ ಎಂಬುದನ್ನು ಮರೆಯಬೇಡ. ನಿನ್ನ ನೆನಪಿನ ಶಕ್ತಿ ಖಂಡಿತಾ ಕೈಕೊಡುವುದಿಲ್ಲ (ಇದು ವಿದ್ಯಾರ್ಥಿನಿಯ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ).



* ಯಾರೋ ಬೇರೆಯವರು ಬೇಗ ಬರೆಯುತ್ತಾರೆ, ಹೆಚ್ಚು ಓದಿದ್ದಾರೆ, ಹೆಚ್ಚು ಅಡಿಶನಲ್ ಶೀಟ್ ತಗೋತಾರೆ ಎಂಬ ಯಾವ ಅಳುಕೂ ನಿನಗೆ ಬೇಡ. ಅವರ ಬಗ್ಗೆ ನೀನು ಪರೀಕ್ಷಾ ಕೋಣೆಯಲ್ಲಿ ಯೋಚಿಸಲು ಹೋಗಬೇಡ.



ಇನ್ನು ಅಂಕಗಳ ವಿಚಾರಕ್ಕೆ ಬರೋಣ. ಅಂಕ ಹೆಚ್ಚು ಪಡೆದವರು ಮಾತ್ರ ಬುದ್ಧಿವಂತರು, ಮಹಾ ಮೇಧಾವಿಗಳು, ಪ್ರತಿಭಾವಂತರು ಎಂದು ಹೇಳಲಾಗುವುದಿಲ್ಲ. ಹಾಗೆ ಕಡಿಮೆ ಅಂಕ ಪಡೆದವರು ದಡ್ಡರೂ ಅಲ್ಲ. ಪರೀಕ್ಷಾ ಪ್ರಕ್ರಿಯೆಯ ಸಿದ್ಧತೆಯಲ್ಲಿ ಹೆಚ್ಚು ಕೌಶಲ ತೋರಿದವರು, ಹೆಚ್ಚು ಮಾರ್ಗದರ್ಶನ, ತರಬೇತಿ ಪಡೆದವರು ಹೆಚ್ಚು ಅಂಕ ಪಡೆಯುತ್ತಾರೆ. ಯಾರಿಗೆ ಪ್ರಶ್ನೆಪತ್ರಿಕೆಯ ಮಾದರಿ ಚೆನ್ನಾಗಿ ಗೊತ್ತಿರುತ್ತದೋ ಅವರಿಗೂ ಹೆಚ್ಚು ಅಂಕ ಸಿಗುತ್ತದೆ. ನೀನೂ ಕೂಡ ಹತ್ತಾರು ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿರುವೆ.

 

ಅವುಗಳಲ್ಲಿ ನಿನಗೆ 90ಕ್ಕೂ ಹೆಚ್ಚು ಅಂಕಗಳು ಬಂದಿವೆ. ಆದರೂ ಈಗ ಈ ಮಹಾ ಪರೀಕ್ಷೆಯಲ್ಲಿ ಶೇ 90ರ ಮೇಲೆ ಅಂಕಗಳನ್ನು ಪಡೆಯಬೇಕು ಅನ್ನೋ ಒತ್ತಡ ನಿನ್ನ ಮೇಲಿರುತ್ತದೆ. ನನಗೆ ಗೊತ್ತು ಇದೇ ಆತಂಕಕ್ಕೆ ಕಾರಣ ಪುಟ್ಟಿ. ನೆನಪಿಡು. ಇಂಥ ಒತ್ತಡವನ್ನು ನಾವ್ಯಾರೂ ನಿನ್ನ ಮೇಲೆ ಹಾಕಿಲ್ಲ. ಹಾಗಾದರೆ ಈ ಒತ್ತಡ ನಿನ್ನ ಮೇಲೆ ಬಂದದ್ದು ಹೇಗೆ?



ನೀನು ಮೊದಲಿನಿಂದಲೂ ಸ್ಕೂಲ್‌ಗೆ ಫಸ್ಟ್ ಬರುತ್ತಿದ್ದೆ. ವೇದಿಕೆಯ ಮೇಲೆ ಬಹುಮಾನ ಗಿಟ್ಟಿಸುತ್ತಿದ್ದೆ. ಈಗಲೂ ಅಂತಹ ಒಂದು ಉತ್ತಮ ಸಾಧನೆ ಮಾಡಬೇಕು ಎನ್ನುವುದು ನಿನ್ನ ಮನಸ್ಸಿನ ಹಂಬಲ. ಹಾಗಾಗಿ ಅದು ನೀನೇ ತೀರ್ಮಾನಿಸಿಕೊಂಡ ಒಂದು ನಿರೀಕ್ಷೆ/ ಶ್ರೇಷ್ಠ ಪರಿಕಲ್ಪನೆಯೇ ಹೊರತು ನಮ್ಮ ಹೇರಿಕೆಯಲ್ಲ. ನಿನ್ನ ಬಗ್ಗೆ ಅಪಾರ ನಿರೀಕ್ಷೆ ಇರುವ ಶಿಕ್ಷಕರು, ಸ್ನೇಹಿತೆಯರು ನೀನು ಶೇ 90 ಅಂಕ ಗಳಿಸುತ್ತೀಯ ಎಂದುಕೊಂಡಿರಬಹುದು.

 

ಆದರೆ ಅದು ನಿನ್ನೊಳಗಿನ ಅದಮ್ಯ ಆಸೆ, ಹಂಬಲ, ಮಹದಾಕಾಂಕ್ಷೆಯೇ ಹೊರತು ನಮ್ಮ ಯಾರ ಬಲವಂತದ ಮಾಘಸ್ನಾನವಲ್ಲ ಎಂಬುದು ನೆನಪಿರಲಿ. ನಿನ್ನದೇ ಗುರಿ, ನಿನ್ನದೇ ಆಸೆಯಾದ್ದರಿಂದ ಅದನ್ನು ಒತ್ತಡ ಎಂದುಕೊಳ್ಳಬೇಡ. ಪ್ರೀತಿಯಿಂದ ಪರೀಕ್ಷೆಯನ್ನೂ ಒಂದು ಅನುಭವ ಎಂಬಂತೆ ಸ್ವೀಕರಿಸು. ನೀನು ಖಂಡಿತಾ ಗೆಲ್ಲುತ್ತೀಯ!

ನಿನಗೆ ಉತ್ತಮ ಅಂಕಗಳು ಯಾಕೆ ಬೇಕು?

* ಅಪ್ಪ, ಅಮ್ಮನನ್ನು ಮೆಚ್ಚಿಸಲಿಕ್ಕೆ ಖಂಡಿತಾ ಅಲ್ಲ ಅಥವಾ ನಾವು ಬೈತೀವಿ ಅನ್ನೋ ಕಾರಣಕ್ಕೆ ಅಂಕಗಳನ್ನ ಪಡೆಯಬೇಕಿಲ್ಲ. ನಾವೂ ಎಂದೂ ಈ ಕಾರಣಕ್ಕೆ ಬೈದೇ ಇಲ್ಲ ಎಂದು ನಿನಗೆ ಗೊತ್ತು. ನಮಗೆ ಉತ್ತಮ ಅಂಕಗಳ ನಿರೀಕ್ಷೆ ಏನೋ ಇರುತ್ತದೆ. ಆದರೆ ಅದಕ್ಕಾಗಿ ನಾವು ಒತ್ತಡ ಹಾಕುವುದಿಲ್ಲ. ನೀನು ಬುದ್ಧಿವಂತೆ, ಯಾವುದೋ ಕಾರಣಕ್ಕೆ ಸ್ವಲ್ಪ ಕಡಿಮೆ ಅಂಕ ಬಂದರೂ ಅದಕ್ಕಾಗಿ ನಾವು ಕೊರಗುವುದಿಲ್ಲ ಅಂತ ನಿನಗೆ ಗೊತ್ತಿರಲಿ. ಆದರೂ ನಿನಗೆ ಒಳ್ಳೇ ಅಂಕ ಬಂದರೆ ನಮಗೆ ಸಂತೋಷವೇ!



* ನಿನ್ನ ಸಾಮರ್ಥ್ಯವನ್ನು ನೀನು ಸಾಬೀತು ಪಡಿಸಲು ನಿನಗೆ ಉತ್ತಮ ಅಂಕಗಳು ಬೇಕು.



* ಮುಂದಿನ ಓದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ನಿನಗೆ ಉತ್ತಮ ಅಂಕಗಳು ಬೇಕು.



* ಉತ್ತಮ ಕಾಲೇಜಿನಲ್ಲಿ ಪ್ರವೇಶ ಪಡೆಯಲು/ ನಿನ್ನ ಇಷ್ಟದ ವಿಷಯಗಳನ್ನು ಅಭ್ಯಸಿಸಲು ಈ ಅಂಕಗಳು ಮಾನದಂಡ ಆಗಬಹುದು (ನೆನಪಿಡು ಅದೂ ನಿನ್ನ ಇಚ್ಛೆಯೇ! ಸಲಹೆ, ಮಾರ್ಗದರ್ಶನ ಮಾತ್ರ ನಮ್ಮದು).



* ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಸೀಮಿತ ಸೌಲಭ್ಯಗಳ ನಡುವೆಯೂ ದೊಡ್ಡ ಸಾಧನೆ ಮಾಡಿದ ಅನುಕರಣೀಯ ಮಾದರಿ ಆಗಲಿಕ್ಕೆ, ಬೇರೆ ಮಕ್ಕಳಿಗೆ ಸ್ಫೂರ್ತಿ, ಪ್ರೋತ್ಸಾಹ ತುಂಬಲಿಕ್ಕೆ ನಿನಗೆ ಹೆಚ್ಚಿಗೆ ಅಂಕಗಳು ಬೇಕಾಗಬಹುದು.



* ನಿನ್ನ ತಂಗಿ, ತಮ್ಮನಿಗೆ ಮಾದರಿ ಆಗಲಿಕ್ಕೆ ಈ ಅಂಕಗಳು ಬೇಕಾಗಬಹುದು.



* ಜನ್ಮ ದಿನಾಂಕದ ಖಾತರಿಗಾಗಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯನ್ನು ಎಲ್ಲಾ ಕಡೆ ಕೇಳುವುದರಿಂದ ಕಡಿಮೆ ಅಂಕಗಳಿವೆಯೆಂದು ಮುಜುಗರವಾಗದಿರಲು/ ಕೀಳರಿಮೆ ಬಾರದಿರಲು ನಿನಗೆ ಒಳ್ಳೇ ಅಂಕಗಳು ಬೇಕು.



* ಸಮಸ್ಯೆಯಲ್ಲಿರುವ ಮಕ್ಕಳಿಗೆ ಅಕಸ್ಮಾತ್ ಅವಕಾಶ ಸಿಕ್ಕರೆ ಮಾರ್ಗದರ್ಶನ ಮಾಡಲು, ಅವರು ನಿನ್ನನ್ನು ಮಾರ್ಗದರ್ಶಿ ಎಂದು ಸ್ವೀಕರಿಸಲು ನಿನಗೆ ಒಳ್ಳೇ ಅಂಕಗಳು ಬೇಕು.



* ನಿಮ್ಮ ಶಾಲೆಯ ಶಿಕ್ಷಕರ ಹಾಗೂ ಬೋಧನಾ ಮಟ್ಟದ ಶ್ರೇಷ್ಠತೆ ಕಾಪಾಡಲು ಒಳ್ಳೆಯ ಅಂಕಗಳು ಬೇಕು.



* ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ಎಸ್‌ಎಸ್‌ಎಲ್‌ಸಿ ಕೆರಿಯರ್, ಶಾಲಾ ದಿನಗಳು, ನಿನ್ನ ಪ್ರಯತ್ನ ಎಲ್ಲವೂ ಸಿಹಿ ನೆನಪಾಗಿ ಉಳಿಯಲು ಒಂದಿಷ್ಟು ಉತ್ತಮ ಅಂಕಗಳು ಬೇಕು.

ಎಲ್ಲಾ ಮಕ್ಕಳಿಗೆ, ಅವರ ಪೋಷಕರಿಗೆ, ಶಿಕ್ಷಕರಿಗೆ ಉತ್ತಮ ಅಂಕಗಳೇನೋ ಬರಬೇಕು ಎಂದು ಆಸೆಯಿರುತ್ತದೆ. ಬೋಧನೆಯಲ್ಲಿ ಗುಣಮಟ್ಟದ ಕೊರತೆ, ಪರೀಕ್ಷಾ ಸಿದ್ಧತೆ ಕೊರತೆ, ಅನಾರೋಗ್ಯ, ಕೌಟುಂಬಿಕ ಸಮಸ್ಯೆಗಳು, ಪರೀಕ್ಷಾ ಕೋಣೆಯಲ್ಲಿನ ಗೊಂದಲ, ಭಯ ಹೀಗೆ ಯಾವುದೋ ಕಾರಣಕ್ಕೆ ಕಡಿಮೆ ಅಂಕಗಳು ಬರಬಹುದು.

ಅಕಸ್ಮಾತ್ ನಿರೀಕ್ಷೆಗಿಂತ ಒಂದಿಷ್ಟು ಕಡಿಮೆ ಅಂಕಗಳು ಬಂದರೆ...?



* ಕಡಿಮೆ ಅಂಕ ಸೋಲಲ್ಲ. ನಾವಂತೂ ನಿನ್ನನ್ನ ಖಂಡಿತಾ ದೂಷಿಸುವುದಿಲ್ಲ. ನೀನು ಗರಿಷ್ಠ ಹಾಗೂ ಪ್ರಾಮಾಣಿಕ  ಪ್ರಯತ್ನ ಮಾಡಿರುವುದು ನಮಗೆ ಗೊತ್ತಿರುವುದರಿಂದ ನಮಗೆ ನಿನ್ನ ಗಳಿಕೆಯ ಬಗ್ಗೆ ಗೌರವ, ಸಂತೋಷ, ಸಂತೃಪ್ತಿ ಖಂಡಿತಾ ಇರುತ್ತದೆ. ನಾವು ಆ ಬಗ್ಗೆ ಎಲ್ಲರಲ್ಲೂ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ.



* ಅದಕ್ಕಾಗಿ ಕೊರಗುವ ಅಗತ್ಯವಿಲ್ಲ. ಅದರಿಂದ ಯಾವ ಅನರ್ಥವೂ ಆಗುವುದಿಲ್ಲ. ತಲೆ ಮೇಲೆ ಆಕಾಶ ಬಿದ್ದ ಹಾಗೆ ಒದ್ದಾಡುವ, ಹತಾಶಳಾಗುವ ಅಗತ್ಯವಿಲ್ಲ.



* ಅವಶ್ಯಕತೆ ಇದೆ ಎನಿಸಿದರೆ ಮರು ಎಣಿಕೆ/ ಮರು ಮೌಲ್ಯಮಾಪನಕ್ಕೆ ಹಾಕಬಹುದು (ಅದೂ ನೀನು ಇಷ್ಟಪಟ್ಟರೆ).



* ಎಲ್ಲಾ ಪ್ರಯತ್ನಗಳ ನಂತರವೂ ಅದೇ ಅಂಕಗಳು ಉಳಿದರೆ `ನನ್ನ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನಾನು ಬರೀ ಪುಸ್ತಕದ ಹುಳುವಾಗಿ ಕೂತವಳಲ್ಲ, ಎಲ್ಲಾ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೆ. ಹಾಗಾಗಿ ಈ ಫಲಿತಾಂಶ ನನಗೆ ತೃಪ್ತಿಕರವೇ~ ಎಂದು ಸಮಾಧಾನ ಪಟ್ಟುಕೊ.



* ಕಡಿಮೆ ಅಂಕ ಬಂದರೆ ಕಡಿಮೆ ಸಾಮರ್ಥ್ಯ ಎಂದೇನಲ್ಲ! ಅದೊಂದು ಪ್ರಯತ್ನದಲ್ಲಿ ಸ್ವಲ್ಪ ಹಿನ್ನಡೆ ಅಷ್ಟೇ!



* ಬೇರೆ ವಿದ್ಯಾರ್ಥಿಗಳ ಅಂಕ ಗಳಿಕೆಯೊಂದಿಗೆ ಹೋಲಿಸುವ ಅಗತ್ಯವಿಲ್ಲ. ಯಾವುದೇ ಇಬ್ಬರು ವಿದ್ಯಾರ್ಥಿಗಳು ಒಂದೇ ಪಡಿಯಚ್ಚಲ್ಲ. ನಿನ್ನ ಪ್ರತಿಭೆ, ಸಾಧನೆಯ ಕ್ಷೇತ್ರ ಬೇರೆಯೇ ಇರಬಹುದು. ಅದನ್ನು ಅಂಕಗಳಲ್ಲಿ ಅಳೆಯಲಾಗದಿರಬಹುದು ಅಷ್ಟೇ!



* ತಪ್ಪುಗಳನ್ನು ತಿದ್ದಿಕೊಂಡು ಪಿಯುಸಿಯಲ್ಲಿ ಇನ್ನೂ ಹೆಚ್ಚು ಅಂಕ ಗಳಿಸುತ್ತೇನೆಂದು ಸಂಕಲ್ಪ ಮಾಡಲು ಸಕಾಲ!



* ಕಡಿಮೆ ಅಂಕ ಯಾವ ವಿಷಯದಲ್ಲಿ, ಯಾವ ಕಾರಣಕ್ಕೆ ಬಂದಿದೆ ಎಂದು ನಮ್ಮ ಜೊತೆ ಚರ್ಚಿಸಿ ಮನಸ್ಸನ್ನು ಹಗುರವಾಗಿಸಿಕೊ. ಇದರಿಂದ ಮುಂದಿನ ಗುರಿ ನಿರ್ಧರಿಸಲು ಅನುಕೂಲ.



* ಯಾರೊಂದಿಗೂ ಅಂಕಗಳನ್ನು ಮುಚ್ಚಿಡಲು ಪ್ರಯತ್ನಿಸದೇ ಇದ್ದದ್ದನ್ನು ಇದ್ದ ಹಾಗೇ ಹೇಳು. ಇದರಿಂದ ಅನವಶ್ಯಕ ಸುಳ್ಳುಗಳು, ಗೊಂದಲ, ಕೀಳರಿಮೆ ತಪ್ಪುತ್ತದೆ.



* ಎಲ್ಲಕ್ಕಿಂತ ಮುಖ್ಯವಾಗಿ `ನನ್ನ ಇತಿಮಿತಿಯಲ್ಲಿ ನಾನು ಶ್ರೇಷ್ಠ ಸಾಧನೆ ಮಾಡಿದ್ದೇನೆ~ ಎಂದು ನಿನಗೆ ನೀನೇ ಹೆಮ್ಮೆ ಪಡು.

 

ಆದರೆ ಯಾವುದೇ ಕಾರಣಕ್ಕೂ ಕಡಿಮೆ ಅಂಕ ಬಂದರೆ ಅದು ನಿನ್ನ ಸೋಲು ಅಂದುಕೊಳ್ಳಬೇಡ. ಅದು ಸೋಲಾದರೆ ಅದಕ್ಕೆ ಕೊಡುವ ಕಾರಣಗಳೆಲ್ಲಾ ನೆವವಾಗುತ್ತವೆ. ನೆನಪಿಡು: success requires no explanations; Failure permits no alibis.



ಈಗ ನಿನಗೆ ಎಲ್ಲಾ ಅರ್ಥವಾಗಿದೆ ಅಲ್ಲವಾ ಮಗಳೇ! ಇನ್ನು ಧೈರ್ಯವಾಗಿ, ಖುಷಿಯಾಗಿ ಸಂಭ್ರಮದಿಂದ ಯುಗಾದಿಯ ನಂತರ ಬಂದ ಈ ಪರೀಕ್ಷೆಯ ಹಬ್ಬಕ್ಕೆ ಸಿದ್ಧಳಾಗು. ನಿನಗೆ ಶುಭವಾಗಲಿ.



ನಿನ್ನ ಪ್ರೀತಿಯ

ಅಪ್ಪ-ಅಮ್ಮ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.