ಶನಿವಾರ, ಜೂನ್ 19, 2021
26 °C
ಕಾಂಗ್ರೆಸ್‌ ಅಭ್ಯರ್ಥಿ ಅಧಿಕೃತವಾಗಿ ಕಣಕ್ಕೆ, ರಂಗೇರುತ್ತಿದೆ ಚುನಾವಣೆ

ಎಸ್‌.ಎಸ್‌.ಮಲ್ಲಿಕಾರ್ಜುನ್‌ ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಲೋಕಸಭಾ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಉತ್ತರ ಕ್ಷೇತ್ರದ ಶಾಸಕ ಎಸ್‌.ಎಸ್‌.ಮಲ್ಲಿಕಾರ್ಜುನ್ ಶುಕ್ರವಾರ ನಾಮಪತ್ರ ಸಲ್ಲಿಸಿದರು.ಮಧ್ಯಾಹ್ನ 1.55ಕ್ಕೆ ಸರಿಯಾಗಿ ಜಿಲ್ಲಾ ಚುನಾವಣಾ ಅಧಿಕಾರಿಯೂ ಆದ ಜಿಲ್ಲಾಧಿಕಾರಿ ಎಸ್‌.ಟಿ.  ಅಂಜನಕುಮಾರ್‌ ಅವರಿಗೆ ಬಿ–ಫಾರಂ ಸಹಿತ ನಾಮಪತ್ರ ಸಲ್ಲಿಸಿದರು. ಅದಕ್ಕೂ ಮೊದಲು ನಗರದೇವತೆ ದುಗ್ಗಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು.ಅವರಿಗೆ ತಂದೆ, ಸಚಿವ ಶಾಮನೂರು ಶಿವಶಂಕರಪ್ಪ, ಪತ್ನಿ ಪ್ರಭಾ ಮಲ್ಲಿಕಾರ್ಜುನ್‌, ಸೊಪ್ಪಿನ ಮರಿಯಪ್ಪ, ಮಾಜಿ ಶಾಸಕ ಕೆ.ಮಲ್ಲಪ್ಪ ಸಾಥ್‌ ನೀಡಿದರು.ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಿದ ಬಳಿಕ ಹೊರಬಂದ ಮಲ್ಲಿಕಾರ್ಜುನ ಮಾಧ್ಯಮದವರ ಜತೆಗೆ ಮಾತನಾಡಿ, ಜಿಲ್ಲೆಯ ವಿವಿಧ ಕ್ಷೇತ್ರಗಳ ಶಾಸಕರು, ಪಕ್ಷದ ಕಾರ್ಯಕರ್ತರ ಜತೆಗೆ ಮಾರ್ಚ್‌ 26ರಂದು ಮತ್ತೊಮ್ಮೆ ತೆರಳಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಮಾಹಿತಿ ನೀಡಿದರು.‘ಜಿಲ್ಲೆಯಲ್ಲಿ ಪ್ರಚಾರ ಕಾರ್ಯ ಉತ್ತಮವಾಗಿ ಸಾಗುತ್ತಿದೆ. ಗೆಲ್ಲುವ ಭರವಸೆ ಇದೆ’ ಎಂದು ಹೇಳಿದರು. ‘ಜನರ ಪ್ರೀತಿ, ವಿಶ್ವಾಸವೇ ನನ್ನ ಗೆಲುವಿಗೆ ಶ್ರೀರಕ್ಷೆ ಆಗಲಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆಯೂ ಜನರು ವಿಶ್ವಾಸವಿಟ್ಟು ಗೆಲ್ಲಿಸಿದ್ದರು. ಅದೇ ವಿಶ್ವಾಸ ಈಗಲೂ ಇದೆ’ ಎಂದು ಅವರು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ. ಕೇಂದ್ರದಲ್ಲೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬಂದರೆ ನಗರದ ಅಭಿವೃದ್ಧಿಗೆ ಸಹಕಾರಆಗಲಿದೆ ಎಂದ ಅವರು, ಬಿಜೆಪಿಯ ಆರೋಪಗಳಿಗೆ ಉತ್ತರಿಸುವ ಅಗತ್ಯ ಇಲ್ಲ’ ಎಂದು ಹೇಳಿದರು.ಎಪಿಎಂಸಿ ಹಾಗೂ ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ನಮ್ಮ

ಪಕ್ಷವೇ ಗೆಲುವು ಸಾಧಿಸಲಿದೆ. ಬಿಜೆಪಿಗೆ ಆಪಾದನೆ ಮಾಡುವುದೇ ಕೆಲಸ ಎಂದು ದೂರಿದರು.ಲೆಕ್ಕಕ್ಕೆ ಇಲ್ಲ...: ಮಹಿಮ ಪಟೇಲ್‌ ಜೆಡಿಎಸ್‌ ಸೇರಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಲೆಕ್ಕಕ್ಕೆ ಇಲ್ಲ. ಯಾರು ಯಾವ ಪಕ್ಷದಿಂದ ಸ್ಪರ್ಧೆ ಮಾಡಿದರೂ ಕಾಂಗ್ರೆಸ್‌ ಗೆಲುವು ಪಡೆಯಲಿದೆ ಎಂದು ಹೇಳಿದರು.ಸಿದ್ದೇಶ್ವರ–ಮಲ್ಲಿಕಾರ್ಜುನ್ ಮುಖಾಮುಖಿ...

ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಶುಕ್ರವಾರ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಅವರು ಜಿಲ್ಲಾಧಿಕಾರಿ ಎಸ್‌.ಟಿ.ಅಂಜನಕುಮಾರ್‌ಗೆ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಯಶವಂತರಾವ್‌ ಜಾಧವ್‌, ಡಿ.ಎಸ್‌.ಶಿವಶಂಕರ್‌, ಮಾಡಾಳ್‌ ವಿರೂಪಾಕ್ಷಪ್ಪ ಇದ್ದರು. ಅದೇ ವೇಳೆಗೆ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಕೂಡ ಬಂದರು. ಆಗ ಇಬ್ಬರು ಅಭ್ಯರ್ಥಿಗಳೂ ಮುಖಾಮುಖಿ ಆದರು.ಮೂವರಿಂದ ಏಳು ನಾಮಪತ್ರ...

ಶುಕ್ರವಾರ ಮೂವರಿಂದ ಒಟ್ಟು ಏಳು ನಾಮಪತ್ರ ಸಲ್ಲಿಕೆಯಾದವು. ಜೆ.ಸಿ.ಪಟೇಲ್‌ ಸರ್ವ ಜನತಾ ಪಕ್ಷದಿಂದ ಎರಡು ನಾಮಪತ್ರ ಸಲ್ಲಿಸಿದರೆ; ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಮತ್ತೊಂದು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರೂ ಒಟ್ಟು ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.