ಮಂಗಳವಾರ, ಆಗಸ್ಟ್ 20, 2019
27 °C

ಎಸ್‌ಎಸ್‌ಸಿಯಿಂದ 3 ಸಾವಿರ ಸಿಬ್ಬಂದಿ ನೇಮಕ

Published:
Updated:

ಧಾರವಾಡ: ಸಿಬ್ಬಂದಿ ನೇಮಕಾತಿ ಆಯೋಗ (ಸ್ಟಾಫ್ ಸೆಲೆಕ್ಷನ್ ಕಮಿಷನ್-ಎಸ್‌ಎಸ್‌ಸಿ)ವು ದೇಶದಾದ್ಯಂತ ಒಟ್ಟು ಮೂರು ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಇದಕ್ಕೆ ಉತ್ತರ ಕರ್ನಾಟಕದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಹಾಕಬೇಕು ಎಂದು ಆಯೋಗದ ಕರ್ನಾಟಕ ಹಾಗೂ ಕೇರಳ ವಲಯದ ಪ್ರಾದೇಶಿಕ ನಿರ್ದೇಶಕ ಎಸ್.ಗೋಪಾಲನ್ ಮನವಿ ಮಾಡಿದರು.ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ಹುದ್ದೆಗಳಿಗಾಗಿ ಆಯೋಗವು ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ ಪರೀಕ್ಷೆ ನಡೆಸಲಿದ್ದು, ಆಗಸ್ಟ್ 16ರ ಒಳಗಾಗಿ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬೇಕು.ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಬಹುತೇಕ ಸಂದರ್ಭದಲ್ಲಿ ಆಯೋಗವು ನಡೆಸಿದ ಪರೀಕ್ಷೆಗಳಲ್ಲಿ ಉತ್ತರ ಭಾರತದ ಅಭ್ಯರ್ಥಿಗಳೇ ಹೆಚ್ಚಿಗೆ ಪರೀಕ್ಷೆ ಬರೆದು ಉದ್ಯೋಗ ಪಡೆಯುತ್ತಾರೆ. ಆದರೆ, ಬಹುತೇಕ ಕರ್ನಾಟಕದ ವಿವಿಧ ಕೇಂದ್ರೀಯ ಕಚೇರಿಗಳಲ್ಲಿ ಉದ್ಯೋಗ ದೊರೆಯುವ ಅವಕಾಶಗಳು ಹೆಚ್ಚಿದ್ದು, ಯಾವುದಕ್ಕೂ ಹಿಂಜರಿಯದೇ ಕರ್ನಾಟಕದ ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದು. ಆಯ್ಕೆ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಯಲಿದ್ದು, ಯಾವುದೇ ಪ್ರಭಾವಗಳ ಒತ್ತಡಕ್ಕೆ ಮಣಿಯುವುದಿಲ್ಲ' ಎಂದರು.ರಾಜ್ಯದ ಬೆಂಗಳೂರು, ಧಾರವಾಡ, ಮಂಗಳೂರು ಹಾಗೂ ಗುಲ್ಬರ್ಗ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 100ಕ್ಕಿಂತ ಕಡಿಮೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರೆ ಈ ಕೇಂದ್ರಗಳಲ್ಲಿ ಪರೀಕ್ಷೆ ನಡೆಸುವುದಿಲ್ಲ. ಕಳೆದ ವರ್ಷ ಕಡಿಮೆ ಅರ್ಜಿಗಳು ಬಂದಿದ್ದರಿಂದ ಉತ್ತರ ಕರ್ನಾಟಕದ ಈ ಕೇಂದ್ರಗಳನ್ನು ರದ್ದುಪಡಿಸಲಾಗಿತ್ತು' ಎಂದರು.`ಆರನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬಂದ ಬಳಿಕ ಕೇಂದ್ರ ಸರ್ಕಾರದ ನೌಕರರಿಗೆ ಉತ್ತಮ ವೇತನ ಲಭ್ಯವಾಗುತ್ತಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ವಿವಿಧ ಇಲಾಖೆಗಳ ಡೇಟಾ ಎಂಟ್ರಿ ಆಪರೇಟರ್ (ಗ್ರೇಡ್ ಪೇ 2,400), ಲೋವರ್ ಡಿವಿಷನ್ ಕ್ಲರ್ಕ್ (ಗ್ರೇಡ್ ಪೇ 1,900) ಹುದ್ದೆಗಳಿಗೆ ಭರ್ತಿ ಮಾಡಲಾಗುವುದು. ಗ್ರೇಡ್ ಪೇ 2,400 ಇದ್ದವರು ಎಲ್ಲ ಭತ್ಯೆಗಳು ಸೇರಿ ರೂ 21 ಸಾವಿರ ಹಾಗೂ 1,900 ಇದ್ದವರು 17 ಸಾವಿರ ರೂಪಾಯಿ ವೇತನ ಪಡೆಯ ಬಹುದು' ಎಂದು ಗೋಪಾಲನ್ ವಿವರಿಸಿದರು.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು http: //ssconline.nic.in ಅಥಾವ http://ssconline2. gov.in ವೆಬ್‌ಸೈಟ್ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ 94838 62020, 080 2550 2520 ಸಂಖ್ಯೆಗೆ ಸಂಪರ್ಕಿಸಬಹುದು.

Post Comments (+)