ಎಸ್‌ಐ ಮೇಲೆ ಗ್ರಾ.ಪಂ ಉಪಾಧ್ಯಕ್ಷಹಲ್ಲೆ

7

ಎಸ್‌ಐ ಮೇಲೆ ಗ್ರಾ.ಪಂ ಉಪಾಧ್ಯಕ್ಷಹಲ್ಲೆ

Published:
Updated:
ಎಸ್‌ಐ ಮೇಲೆ ಗ್ರಾ.ಪಂ ಉಪಾಧ್ಯಕ್ಷಹಲ್ಲೆ

ಅಂಕೋಲಾ: ಬೃಹತ್ ಯಂತ್ರ ಸಾಗಿಸುವ ವಾಹನ ಮುಂದೆ ಸಾಗಬೇಕಾದರೆ ತನಗೆ ಹಣ ಕೊಡಬೇಕು ಎಂದು ಪಟ್ಟು ಹಿಡಿದು ವಾಹನ ತಡೆದ ಬೇಲೆಕೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರಹಾಸ ನಾರಾಯಣ ನಾಯಕ, ಇದನ್ನು ಪ್ರಶ್ನಿಸಿದ ಇಲ್ಲಿನ ಸಬ್‌ಇನ್‌ಸ್ಪೆಕ್ಟರ್ ಜಾಯ್ ಆಂಥೋಣಿ ಮತ್ತವರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದೆ.

ಜಾಯ್ ಆಂಥೋಣಿ ಅವರಿಗೆ ಕೈ ಮತ್ತು ಎದೆ ಭಾಗದಲ್ಲಿ ಗಾಯವಾಗಿದೆ. ಅವರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. 15 ಮಂದಿ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.

ರಾಯಚೂರಿನ ಥರ್ಮಲ್ ಸ್ಥಾವರಕ್ಕೆ ಭಾರಿ ಗಾತ್ರದ ಯಂತ್ರವೊಂದು ಬೇಲೆಕೇರಿ ಬಂದರಿಗೆ ಬಂದಿತ್ತು. ಯಂತ್ರದ ಸಾಗಣೆಗೆ ಹೆಸ್ಕಾಂ, ಪೊಲೀಸ್ ಸೇರಿದಂತೆ ಅಗತ್ಯವಾದ ಎಲ್ಲ ಇಲಾಖೆಗಳಿಂದ ಅನುಮತಿಯನ್ನೂ ಸಾಗಣೆಯ ಹೊಣೆ ಹೊತ್ತ ಮುಂಬೈನ ರೇಷ್ಮಾ ಸಿಂಗ್ ಕಂಪೆನಿ ಪಡೆದುಕೊಂಡಿತ್ತು.

ಆದರೆ ತಮ್ಮೂರಿನ ರಸ್ತೆಯಲ್ಲಿ ಈ ಭಾರಿ ಗಾತ್ರದ ಯಂತ್ರ ಸಾಗಿಸುವುದನ್ನು ಪ್ರಶ್ನಿಸಿ ಗ್ರಾಮ ಪಂಚಾಯಿತಿ ಆ ಕಂಪೆನಿಗೆ ನೋಟಿಸ್ ನೀಡಿತ್ತು.

ನಂತರ ಕಂಪೆನಿಯು ಗ್ರಾಮ ಪಂಚಾಯಿತಿಗೆ ಎರಡು ಲಕ್ಷ ರೂಪಾಯಿ ಪಾವತಿಸಿತ್ತು. ವಾಹನ ಸಂಚಾರಕ್ಕೆ ಯಾವುದೇ ಅಡೆತಡೆಯಾಗದಂತೆ ಜಿಲ್ಲೆಯಲ್ಲಿ ಸೂಕ್ತ ಭದ್ರತೆ ಒದಗಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೂಡ ಸೂಚನೆ ನೀಡಿದ್ದರು.

ವಾಹನ ಹೊರಟಿದ್ದನ್ನು ಕಂಡ ಚಂದ್ರಹಾಸ ನಾರಾಯಣ ಮತ್ತವರ ಬೆಂಬಲಿಗರು ವೈಯಕ್ತಿಕವಾಗಿ ತಮಗೆ ಹಣ ನೀಡಬೇಕು ಎಂದು ಒತ್ತಾಯಿಸಿ ವಾಹವನ್ನು ತಡೆದರು.

ಇದನ್ನು ಪ್ರಶ್ನಿಸಿದ ಜಾಯ್ ಅವರ ಮೇಲೆ ನುಗ್ಗಿದ ಚಂದ್ರಹಾಸ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದರು. ನಂತರ ಚಂದ್ರಹಾಸ ಮತ್ತವರ ಬೆಂಬಲಿಗರು ನಾಪತ್ತೆಯಾಗಿದ್ದಾರೆ. ಇನ್‌ಸ್ಪೆಕ್ಟರ್ ಎಸ್.ವಿಜಯಪ್ರಸಾದ ತನಿಖೆ ಕೈಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry