ಎಸ್‌ಟಿಗೆ ಸೇರಿಸಲು ಗಂಗಾಮತಸ್ಥರಿಂದ ರಸ್ತೆತಡೆ

7

ಎಸ್‌ಟಿಗೆ ಸೇರಿಸಲು ಗಂಗಾಮತಸ್ಥರಿಂದ ರಸ್ತೆತಡೆ

Published:
Updated:

ಬೆಳಗಾವಿ: ಕೋಲಿ, ಕಬ್ಬಲಿಗ ಸಮಾಜದ ಇತರೆ 39 ಪರ್ಯಾಯ ಪದ ಬಳಕೆಯಲ್ಲಿರುವ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಆಶ್ರಯದಲ್ಲಿ ನೂರಾರು ಗಂಗಾಮತಸ್ಥರು ನಗರದ ಕೇಂದ್ರ ಬಸ್‌ನಿಲ್ದಾಣ ವೃತ್ತದಲ್ಲಿ ಮಂಗಳವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.ಪರಿಶಿಷ್ಟ ಪಂಗಡಕ್ಕೆ ತಮ್ಮ ಸಮಾಜವನ್ನು ಸೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಳೆದ ಆರು ದಿನಗಳಿಂದ ಧರಣಿ ನಡೆಸುತ್ತಿದ್ದ ಗಂಗಾಮತಸ್ಥರ ಬೇಡಿಕೆಗೆ ಸರ್ಕಾರ ಸ್ಪಂದಿಸದೇ ಇದ್ದುದರಿಂದ ಆಕ್ರೋಶಗೊಂಡ ಪ್ರತಿಭಟನಾಕರರು ಅರೆಬೆತ್ತಲೆ ಮೆರವಣಿಗೆಯಲ್ಲಿ ಕೇಂದ್ರ ಬಸ್ ನಿಲ್ದಾಣ ವೃತ್ತಕ್ಕೆ ಆಗಮಿಸಿದರು. ಮಧ್ಯಾಹ್ನ ಸುಮಾರು 2.30ರ ಹೊತ್ತಿಗೆ ವೃತ್ತದಲ್ಲಿ ಧರಣಿ ಕುಳಿತು ರಸ್ತೆ ತಡೆ ನಡೆಸಲು ಆರಂಭಿಸಿದರು.ಸುಮಾರು 40 ವರ್ಷಗಳಿಂದ ಕೋಲಿ, ಕಬ್ಬಲಿಗ ಸಮಾಜದ ಇತರೆ 39 ಪರ್ಯಾಯ ಪದ ಬಳಸುತ್ತಿರುವ ಸಮಾಜದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಹೋರಾಟ ನಡೆಸಲಾಗುತ್ತಿದೆ. 2004ರಲ್ಲಿ ಕೇಂದ್ರ ಸರ್ಕಾರವು ಪರ್ಯಾಯ ಪದ ಬಳಕೆ ಇರುವ ಸಮಾಜವನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದರೂ, ಇದುವರೆಗೂ ರಾಜ್ಯ ಸರ್ಕಾರ ವರದಿ ಸಲ್ಲಿಸದೇ ನಿರ್ಲಕ್ಷ್ಯ ತೋರಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.ನ್ಯಾಯಮೂರ್ತಿ ಜಗನ್ನಾಥ ಮಿಶ್ರ ವರದಿಯಂತೆ ರಾಜ್ಯದಲ್ಲಿ ನಮ್ಮ ಜನಾಂಗದ ಪರ್ಯಾದ ಪದಗಳಾದ ಕೋಯಾ, ಟೋಕ್ರಿ, ಕೋಲಿ, ರಾಜಕೋಯಾ, ಬಿನೇಕೋಯಾ, ಕೋಲಗಾ, ಕೋಲಚಾಗಳನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸಲಾಗಿದೆ. ಯಾವುದೇ ಒಂದು ಜಾತಿಯು ಪರಿಶಿಷ್ಟ ಪಂಗಡದಲ್ಲಿದ್ದರೆ, ಅದರ ಪರ್ಯಾಯ ಪದಗಳನ್ನೂ ಪರಿಶಿಷ್ಟ ಪಂಗಡಗಳಲ್ಲಿ ಸೇರಿಸಲು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವನ್ನೂ ನೀಡಿದೆ. ಕೋಲಿ, ಕಬ್ಬಲಿಗ, ಟೊಕ್ರೆಕೋಲಿ ಮತ್ತು ಕೋಯಾ ಒಂದೇ ಜಾತಿಗಳೆಂದು ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಹೀಗಿದ್ದರೂ ರಾಜ್ಯದಲ್ಲಿ ಸುಮಾರು 70 ಲಕ್ಷ ಜನರು ಹೊಂದಿರುವ ನಮ್ಮ ಸಮಾಜದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದೇ ಸಂವಿಧಾನ ಬದ್ಧ ಹಕ್ಕಿನಿಂದ ವಂಚಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದರು.ಸುಮಾರು ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ಬಳಿಕ ಸರ್ಕಾರದ ಪರವಾಗಿ ಮೀನುಗಾರಿಕೆ ಸಚಿವ ಆನಂದ ಅಸ್ನೋಟಿಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. `ಗಂಗಾಮತಸ್ಥ ಸಮಾಜದ ಕುರಿತು ನಡೆಸಿದ ಅಧ್ಯಯನದ ವರದಿಯನ್ನು ಕೂಡಲೇ ಪರಿಶೀಲಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು' ಎಂದು ಅಸ್ನೋಟಿಕರ್ ಭರವಸೆ ನೀಡಿದರು.ಗಂಗಾಮತಸ್ಥರ ಸಂಘದ  ರಾಜ್ಯ ಘಟಕದ ಅಧ್ಯಕ್ಷ ಮೋಹನ್ ಕುಮಾರ, `ಪರಿಶಿಷ್ಟ ಪಂಗಡಕ್ಕೆ ಸೇರಿಸುವವರೆಗೂ ನಮ್ಮ ಹೋರಾಟವನ್ನು ನಿಲ್ಲಿಸುವುದು ಬೇಡ. ಕೇಂದ್ರ ಸರ್ಕಾರಕ್ಕೆ      ಶೀಘ್ರದಲ್ಲೇ ವರದಿ ಕಳುಹಿಸಿಕೊಡು ವುದಾಗಿ ಸಚಿವರು ಭರವಸೆ ನೀಡಿದ   ಹಿನ್ನೆಲೆಯಲ್ಲಿ ಸದ್ಯ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯೋಣ' ಎಂದು ಹೇಳಿದರು.ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ನಿಜಶರಣ ಅಂಬಿಗರ ಚೌಡಯ್ಯ ಸಮಾಜದ ಅಧ್ಯಯನ ಅಕಾಡೆಮಿ ಅಧ್ಯಕ್ಷ ಅವ್ವಣ್ಣ ಮ್ಯಾಕೇರಿ, ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ಗಂಗಾರಾಮ ತಳವಾರ, ಗಂಗಾ ಮತಸ್ಥರ ನೌಕರರ ಸಂಘದ ಅಧ್ಯಕ್ಷ ಬಾಬುರಾವ್ ಜಮಾದಾರ, ಜಿ.ಟಿ. ವೆಂಕಟೇಶ, ಬಸವರಾಜ ಬೂದಿಹಾಳ, ಸಂತೋಷ ಹರನಾಳ, ಅಪ್ಪಾಸಾಹೇಬ ಪೂಜಾರಿ ವಹಿಸಿದ್ದರು.ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry