ಎಸ್‌ಡಿಎಂಸಿ ಹೊಣೆ: ಜಿ.ಪಂ.

7
ಬಿಸಿಯೂಟ ಅಡುಗೆ ಕೋಣೆಗಳ ಕಾಮಗಾರಿ

ಎಸ್‌ಡಿಎಂಸಿ ಹೊಣೆ: ಜಿ.ಪಂ.

Published:
Updated:

ಉಡುಪಿ: ‘ಅಕ್ಷರ ದಾಸೋಹ ಅಡುಗೆ ಕೋಣೆಗಳ ನಿರ್ಮಾಣ ಕಾಮಗಾರಿಯ ನಿರ್ವಹಣೆಯನ್ನು  ಶಾಲಾ ಮೇಲುಸ್ತುವಾರಿ ಸಮಿತಿಗಳೇ ನೋಡಿ­ಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಉಪೇಂದ್ರ ನಾಯಕ್‌ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗುಣಮಟ್ಟದ ಕಾಮಗಾರಿ ಆಗಲಿ ಎಂಬ ಉದ್ದೇಶದಿಂದ ಎಸ್‌ಡಿಎಂಸಿ ಗಳಿಗೆ ನೇರವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಕೆಲವೆಡೆ ಇದನ್ನು ಗುತ್ತಿಗೆದಾರರ ಮೂಲಕ ನಿರ್ಮಿಸುವುದು ಕಂಡುಬಂದಿದ್ದು, ಇದನ್ನು ತಪ್ಪಿಸಿ ಎಂದು ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಅಂಗವಿಕಲರಿಗೆ ಶೇ 3ರಷ್ಟು ಅನುದಾನವನ್ನು ಮೀಸಲಿಟ್ಟು ಉಳಿದ ಹಣ ಖರ್ಚು ಮಾಡಬೇಕು. ಹೀಗೆ ಮಾಡದಿದ್ದರೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಎಲ್ಲಾ ಇಲಾಖೆಗಳು ಈ ಸಂಬಂಧ ಅಂಗವಿಕಲರ ಇಲಾಖೆಗೆ ಮಾಸಿಕ ವರದಿ ನೀಡಬೇಕು. ಅಂಗವಿಕಲರನ್ನು ಗುರುತಿಸಲು ನಡೆಸುತ್ತಿರುವ ಸಮೀಕ್ಷೆಯಲ್ಲಿ ಅರ್ಹ ಫಲಾನುಭವಿಗಳು ಬಿಟ್ಟು ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.ಸರ್ಕಾರ ಕೊಳೆರೋಗಕ್ಕೆ ಪರಿಹಾರ ಘೋಷಿಸಿದೆ. ತೋಟಗಾರಿಕೆ ,ಕಂದಾಯ ಇಲಾಖೆಯ ಜಂಟಿ ಸಮೀಕ್ಷೆ ನಡೆಸಿ ಅರ್ಹ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಿ ಎಂದು ಅವರು ಹೇಳಿದರು.ದೊಡ್ಡ ಮರಗಳಿಂದಾಗಿ ಜಿಲ್ಲೆಯ ಕೆಲವು ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ­ಯಾಗು­ತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿ­ಕೊಡಬೇಕು ಎಂದರು.ವಾಹನಗಳಲ್ಲಿ ಚಾಲಕರಾಗಿ ದುಡಿಯುತ್ತಿರುವ­ವರಿಗೆ ಕಾರ್ಮಿಕ ಇಲಾಖೆಯಿಂದ 2 ಲಕ್ಷ ರೂ. ವರೆಗೆ ವಿಮಾ ರಕ್ಷಣೆ ಇದೆ. ಅಪಘಾತ ಚಿಕಿತ್ಸಾ ವೆಚ್ಚವು ಇದರಲ್ಲಿ ಸೇರಿದೆ. ಈಗಾಗಲೇ ಜಿಲ್ಲೆಯಲ್ಲಿ 6,500 ಚಾಲಕರು ಇಲಾಖೆಯಲ್ಲಿ ಹೆಸರು ನೋಂದಾ­ಯಿಸಿದ್ದಾರೆ. ಇನ್ನೂ ಹೆಚ್ಚಿನ ಚಾಲಕರಗೆ ಈ ಸೌಲಭ್ಯ ಸಿಗುವಂತೆ ನೋಡಿಕೊಳ್ಳಿ ಎಂದು ಹೇಳಿದರು.ಉಪಾಧ್ಯಕ್ಷೆ ಮಮತಾ ಶೆಟ್ಟಿ ಮಾತನಾಡಿ, ಜಿಲ್ಲೆಯ ಕೆಲವು ಶಾಲೆಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದೊರಕಬೇಕು ಎಂದು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಅವರಿಗೆ ತಿಳಿಯದಂತೆ ಖಾಸಗಿಯಾಗಿ ಪರೀಕ್ಷೆ ಬರೆಯಿಸುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲೆಯ 9ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳ ಮಾಹಿತಿ ಪಡೆದು, ಅವರು 10ನೇ ತರಗತಿಯಲ್ಲಿ ಸಮರ್ಪಕವಾಗಿ ಕಲಿಯು­ತ್ತಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಡಿಡಿಪಿಐಗೆ ಸೂಚಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎ. ಪ್ರಭಾಕರ್ ಶರ್ಮ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಉದಯ ಕೋಟ್ಯಾನ್, ಅರುಣ್ ಶೆಟ್ಟಿ, ಉಪ ಕಾರ್ಯದರ್ಶಿ ಪ್ರಾಣೇಶ್ ರಾವ್, ಮುಖ್ಯ ಯೋಜನಾಧಿಕಾರಿ ವಿಜಯಕುಮಾರ್ ಶೆಟ್ಟಿ, ಲೆಕ್ಕಾಧಿಕಾರಿ ತಿಮ್ಮಪ್ಪ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry