ಗುರುವಾರ , ನವೆಂಬರ್ 21, 2019
26 °C

ಎಸ್‌ಪಿ ಅಭ್ಯರ್ಥಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ; ಗೃಹಬಂಧನ

Published:
Updated:

ಸಿಂದಗಿ: ಸಿಂದಗಿ ಮತಕ್ಷೇತ್ರದ ವಿಧಾನಸಭೆ ಚುನಾವಣೆಗೆ ಸಮಾಜವಾದಿ ಪಕ್ಷದಿಂದ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಸಂತೋಷ ಶಿವಪ್ಪ ಹರನಾಳ ಅವರನ್ನು ಕಾಂಗ್ರೆಸ್ ಪಕ್ಷದವರು ಗೃಹಬಂಧನದಲ್ಲಿರಿಸಿ ಥಳಿಸಿರುವ ಘಟನೆ ಬುಧವಾರ ಸಿಂದಗಿಯಲ್ಲಿ ನಡೆದಿದೆ.ಕೋಳಿ ಸಮುದಾಯಕ್ಕೆ ಸೇರಿದ ಸಂತೋಷ ಹರನಾಳ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದು ಅದೇ ಸಮುದಾಯಕ್ಕೆ ಸಂಬಂಧಿಸಿದ ಕಾಂಗ್ರೆಸ್ ಅಭ್ಯರ್ಥಿಗೆ ಚುನಾವಣೆ ಯಲ್ಲಿ ತಮ್ಮ ಸಮುದಾಯದ ಮತ ವಿಭಜನೆಯಾಗುತ್ತದೆ ಎಂಬ ಕಾರಣ ಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಆತನನ್ನು ಗೃಹಬಂಧನದಲ್ಲಿ ಇಟ್ಟು ಹಲ್ಲೆ ನಡೆಸಿದ್ದಾರೆ ಎಂದು ಹರನಾಳ ದೂರಿದ್ದಾರೆ.ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಇಂದು `ನಾನು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಶರಣಬಸು ಭೀಮರಾಯ ನಾಟೀಕಾರ, ಶಿವು ಗೊಲ್ಲಾಳಪ್ಪ ತಳವಾರ ಬಸ್ತಿಹಾಳ, ಡಾ.ಬಸವರಾಜ ಹರನಾಳ, ದಯಾನಂದ ಧೂಳಖೇಡ ಇವರು ಅಡ್ಡಿಪಡಿಸಿದರು. ಆದರೂ ನಾಮಪತ್ರ ಸಲ್ಲಿಸುತ್ತಿದ್ದಂತೆ ಯಾವುದೋ ನೆಪವೊಡ್ಡಿ ನನ್ನನ್ನು ಕರೆದೊಯ್ದು ಬಂದಾಳ ರಿಂಗ್ ರಸ್ತೆಯಲ್ಲಿನ ಪ್ರಶಾಂತ ಬಾರ್ ಮತ್ತು ರೆಸ್ಟೊರೆಂಟ್ ಮೇಲಿನ ಒಂದು ಕೋಣೆಯಲ್ಲಿ ಬಂಧಿಸಿಟ್ಟು ಥಳಿಸಿದ್ದಾರೆ.ಈ ಘಟನೆಗೆ ಹಿನ್ನೆಲೆ ಯಾಗಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಶರಣಪ್ಪ ಸುಣಗಾರ ಚಿತಾವಣೆ ಇದೆ. ನನ್ನನ್ನು ಗೃಹಬಂಧನದಲ್ಲಿರಿಸಿ ದವರು ಸುಣಗಾರ ಸಂಬಂಧಿಗಳು ಅಲ್ಲದೇ ಗೃಹಬಂಧನದಲ್ಲಿಟ್ಟ ಸ್ಥಳವೂ ಕೂಡ ಸುಣಗಾರರಿಗೆ ಸಂಬಂಧಿಸಿದೆ ಎಂದು ಸಂತೋಷ ಹರನಾಳ `ಪ್ರಜಾವಾಣಿ' ಎದುರು ಪ್ರತಿಕ್ರಿಯಿಸಿದರು.ಸ್ಥಳಕ್ಕೆ ಪೊಲೀಸರೊಂದಿಗೆ ಧಾವಿಸಿದ ಸಿಂದಗಿ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಮಂಜುನಾಥ ಕುಸುಗಲ್ ಗೃಹಬಂಧನದಲ್ಲಿದ್ದ ಹರನಾಳರನ್ನು ಬಿಡುಗಡೆಗೊಳಿಸಿ ಠಾಣೆಗೆ ಕರೆ ದೊಯ್ದು ತನಿಖೆ ಮುಂದುವರಿಸಿದ್ದಾರೆ.

ಪ್ರತಿಕ್ರಿಯಿಸಿ (+)