ಎಸ್‌ಬಿಎಂ: ಚಿನ್ನದ ನಾಣ್ಯ ಮಾರಾಟಕ್ಕೆ ಚಾಲನೆ

7

ಎಸ್‌ಬಿಎಂ: ಚಿನ್ನದ ನಾಣ್ಯ ಮಾರಾಟಕ್ಕೆ ಚಾಲನೆ

Published:
Updated:
ಎಸ್‌ಬಿಎಂ: ಚಿನ್ನದ ನಾಣ್ಯ ಮಾರಾಟಕ್ಕೆ ಚಾಲನೆ

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್‌ಮೈಸೂರು (ಎಸ್‌ಬಿಎಂ) ತನ್ನ ಶಾಖೆಗಳ ಮೂಲಕ ಚಿನ್ನದ ನಾಣ್ಯಗಳ ಚಿಲ್ಲರೆ ಮಾರಾಟ ಮಾಡಲಿದ್ದು, ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಜತೆ ಒಪ್ಪಂದ ಮಾಡಿಕೊಂಡಿದೆ.ಸೋಮವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಎಸ್‌ಬಿಐ’ನ ವ್ಯವಸ್ಥಾಪಕ ನಿರ್ದೇಶಕ ಆರ್. ಶ್ರೀಧರನ್ ‘ಗೋಲ್ಡ್ ಬ್ಯಾಂಕಿಂಗ್’ ಸೇವೆಯನ್ನು  ಅಧಿಕೃತವಾಗಿ ಉದ್ಘಾಟಿಸಿದರು.‘ಅಸ್ಸೆ’ ಪ್ರಮಾಣೀಕೃತ ಈ ಚಿನ್ನದ ನಾಣ್ಯಗಳು 2,4,5,8,10,20 ಮತ್ತು 50 ಗ್ರಾಂಗಳಲ್ಲಿ ಲಭ್ಯವಿದ್ದು, 999.9 ಪರಿಶುದ್ಧತೆ ಹೊಂದಿವೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಆಧರಿಸಿ, ದಿನದಿಂದ ದಿನಕ್ಕೆ ಈ ನಾಣ್ಯಗಳ ಬೆಲೆ ಪರಿಷ್ಕೃತಗೊಳ್ಳುತ್ತಿರುತ್ತದೆ. ಖರೀದಿದಾರರು ‘ಎಸ್‌ಬಿಎಂ’ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬೆಲೆಯನ್ನು ದಿನಂಪ್ರತಿ ನೋಡಿ ಖಚಿತಪಡಿಸಿಕೊಳ್ಳಬಹುದು ಎಂದು ಶ್ರೀಧರ್ ಹೇಳಿದರು. ‘ಹೆಚ್ಚುತ್ತಿರುವ ಗ್ರಾಹಕ ಬೇಡಿಕೆಗಳಿಗೆ ಅನುಗುಣವಾಗಿ ಬ್ಯಾಂಕುಗಳು ಒಂದೇ ಸೂರಿನಡಿ ಹಲವು ಆರ್ಥಿಕ ಸೇವೆಗಳನ್ನು ಒದಗಿಸಲು ಮುಂದಾಗಿವೆ. ಭವಿಷ್ಯದಲ್ಲಿ ಚಿನ್ನದ ಠೇವಣಿ ಯೋಜನೆಯೂ ಬ್ಯಾಂಕುಗಳಲ್ಲಿ ಜಾರಿಗೆ ಬರಲಿದೆ’ ಎಂದರು.

‘ಆರಂಭದಲ್ಲಿ ‘ಎಸ್‌ಬಿಎಂ’ನ ಆಯ್ದ 100 ಖಾಖೆಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು. ವರ್ಷಾಂತ್ಯಕ್ಕೆ 100 ಕೆ.ಜಿ ಚಿನ್ನದ ನಾಣ್ಯಗಳನ್ನು ಈ ಮೂಲಕ ವಹಿವಾಟು ನಡೆಸುವ ಯೋಜನೆ ಹೊಂದಿದ್ದೇವೆ. ಒಮ್ಮೆ ಮಾರಾಟವಾದ ಚಿನ್ನದ ನಾಣ್ಯಗಳನ್ನು ಬ್ಯಾಂಕು ಮರಳಿ ಖರೀದಿಸುವುದಿಲ್ಲ’ ಎಂದು ‘ಎಸ್‌ಬಿಎಂ’ ನ ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಮಾವಿನಕುರ್ವೆ  ಮಾಹಿತಿ ನೀಡಿದರು.‘ಎಸ್‌ಬಿಐ’ನಲ್ಲಿ ‘ಎಸ್‌ಬಿಎಂ’ ವಿಲೀನ ಪ್ರಕ್ರಿಯೆಯ ಕುರಿತು ಪ್ರತಿಕ್ರಿಯಿಸಿದ ಉಭಯ ಬ್ಯಾಂಕುಗಳ ವ್ಯವಸ್ಥಾಪಕ ನಿರ್ದೇಶಕರು, ಇದು ಸುದೀರ್ಘ ಪ್ರಕ್ರಿಯೆ, ಪ್ರಯತ್ನಗಳು ನಡೆಯುತ್ತಿವೆ, ಅಂತಿಮವಾಗಿ ಸರ್ಕಾರ ಇದನ್ನು ನಿರ್ಧರಿಸಲಿದ್ದು, ಈಗಲೇ ನಿಗದಿತ ಗುಡುವು ನಿಗಡಿಪಡಿಸಲು ಸಾಧ್ಯವಿಲ್ಲ ಎಂದರು. ಸಾಲ, ಹೂಡಿಕೆ ನೀತಿಗಳಲ್ಲಿ ಎರಡೂ ಬ್ಯಾಂಕುಗಳ ನಡುವೆ ಸಾಮ್ಯತೆ ಇದೆ. ವಿಲೀನದ ನಂತರ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳನ್ನು ಪರಿಶೀಲಿಸಬೇಕು. ವಿಲೀನದಿಂದ ಗ್ರಾಹಕರಿಗೆ, ಷೇರುದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry