ಮಂಗಳವಾರ, ನವೆಂಬರ್ 19, 2019
24 °C

ಎಸ್‌ಸ್ಯಾಂಗ್ ರೆಕ್ಸ್ಟನ್: ಅದ್ದೂರಿ ಎಸ್‌ಯುವಿ

Published:
Updated:

ಮಹಿಂದ್ರಾ ಮತ್ತು ಮಹಿಂದ್ರಾ ಕಂಪೆನಿ ಇತ್ತೀಚೆಗೆ ಕೇವಲ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್‌ಗಳ ಬಗ್ಗೆ ಮಾತ್ರ ಗಮನ ಹರಿಸುತ್ತಿರುವಂತಿದೆ. ಬೊಲೆರೊ ಮೂಲಕ ಎಸ್‌ಯುವಿ ಉತ್ಪಾದನೆ ಶುರು ಮಾಡಲು ಆರಂಭಿಸಿದಾಗ ಸ್ವತಃ ಮಹಿಂದ್ರಾ ಕಂಪೆನಿಯೇ ಈ ಮಟ್ಟದ ಸಾಧನೆಯನ್ನು ನಿರೀಕ್ಷಿಸಿರಲಿಲ್ಲ ಎಂದು ತೋರುತ್ತದೆ. ಆ ನಂತರ ಅತ್ಯಾಧುನಿಕ ಎಸ್‌ಯುವಿಯಾದ ಸ್ಕಾರ್ಪಿರ್ಯೊ, ಅದರ ಯಶಸ್ಸಿನ ನಂತರ ಕ್ಸೈಲೊ ಪರಿಚಯಿಸಿದ ಮೇಲೂ ಎಕ್ಸ್‌ಯುವಿ 500 ಸೂಪರ್ ಎಸ್‌ಯುವಿ ಪರಿಚಯಿಸಿ ತಾನು ಎಸ್‌ಯುವಿ ಕ್ಷೇತ್ರದ ದಿಗ್ಗಜ ಎಂದು ಮಹಿಂದ್ರಾ ಸಾಬೀತು ಮಾಡಿತು.ಆದರೆ ಇತ್ತೀಚಿನ ದಿನಗಳಲ್ಲಿ ಹೊಸತೊಂದು ಟ್ರೆಂಡ್ ಬೆಳೆದುಬಿಟ್ಟಿದೆ. ಟಾಟಾ ಮಹಿಂದ್ರಾ ಮಾದರಿಯ ದೇಸೀಯ ಕಂಪೆನಿಗಳು ವಿದೇಶಿ ಕಂಪೆನಿಗಳ ಕಾರುಗಳನ್ನು ಒಡಂಬಡಿಕೆ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಮಾರುವುದು. ಅಂದರೆ ನಮ್ಮ ದೇಸೀಯ ಕಂಪೆನಿಗಳು ಕೇವಲ ಮಾರುವ ದಲ್ಲಾಳಿಗಳಂತೆ ವರ್ತಿಸುವುದು. ಹಿಂದೆ ಕೇವಲ ಸಹಯೋಗದಲ್ಲಿ ವಿದೇಶಿ ಕಾರುಗಳನ್ನು ಮಾರುವ ವಿಧಾನವಿತ್ತು.ಉದಾಹರಣೆಗೆ ಮಾರುತಿ- ಸುಜುಕಿ. ಇಲ್ಲಿ ಕಾರು ಮಾರುತಿಯದೂ ಹೌದು, ಸುಜುಕಿಯದೂ ಹೌದು. ಆದರೆ ಈಗ ಕೊಂಚ ಬದಲಾವಣೆಯ ಗಾಳಿ ಬೀಸಿದೆ. ಟಾಟಾ ಕಂಪೆನಿ ಜಾಗ್ವಾರ್, ಲ್ಯಾಂಡ್ ರೋವರ್ ಕಂಪೆನಿಗಳ ಜತೆ ಒಡಂಬಡಿಕೆ ಮಾಡಿಕೊಂಡು, ಈ ಕಂಪೆನಿಗಳ ಕಾರ್‌ಗಳನ್ನು ಮಾರಹೊರಟಿದೆ. ಈ ಪರಂಪರೆಯನ್ನು ಹುಟ್ಟಿಹಾಕಿದ್ದು ರತನ್ ಎನ್. ಟಾಟಾ. ಇದೀಗ ಮಹಿಂದ್ರಾ ಮತ್ತು ಮಹಿಂದ್ರಾ ಕಂಪೆನಿಯೂ ಈ ಪರಂಪರೆಯನ್ನು ಅಳವಡಿಸಿಕೊಂಡಿದೆ. ದಕ್ಷಿಣ ಕೊರಿಯಾ ಮೂಲದ ಬಹುರಾಷ್ಟ್ರೀಯ ಕಂಪೆನಿ ಎಸ್‌ಸ್ಯಾಂಗ್ ಜತೆ ಒಡಂಬಡಿಕೆ ಮಾಡಿಕೊಂಡು, ರೆಕ್ಸ್ಟನ್ ಎಸ್‌ಯುವಿಯನ್ನು ಭಾರತೀಯ ರಸ್ತೆಗಳಿಗೆ ಮಹಿಂದ್ರಾ ಪರಿಚಯಿಸಿದೆ.ಎಸ್‌ಸ್ಯಾಂಗ್ ರೆಕ್ಸ್ಟನ್

ಎಸ್‌ಸ್ಯಾಂಗ್ ರೆಕ್ಸ್ಟನ್ ಎಕ್ಸೆಕ್ಯುಟಿವ್ ಎಸ್‌ಯುವಿ. ಅಂದರೆ ನಮ್ಮಲ್ಲಿ ಸಾಮಾನ್ಯವಾಗಿ ಕಾಣಸಿಗುವ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್‌ಗಳಲ್ಲೇ ಅತಿ ಅದ್ದೂರಿಯಾದ ವಾಹನಗಳಿವು. ಎಸ್‌ಯುವಿಗಳೇ ಶ್ರೀಮಂತರದ್ದು. ಆದರೆ ಎಕ್ಸೆಕ್ಯುಟಿವ್ ಎಸ್‌ಯುವಿಗಳು ಕಡು ಶ್ರೀಮಂತರದ್ದು. ಸಾಧಾರಣ ಶ್ರೀಮಂತರೂ ಕೊಳ್ಳಲಾಗದ ವಾಹನಗಳು. ಅಂತಹ ಎಸ್‌ಯುವಿಯನ್ನು ಮಹಿಂದ್ರಾ ಕಂಪೆನಿ ಹೊರಬಿಟ್ಟಿರಲಿಲ್ಲ. ಬಹುಶಃ ಹೊರಬಿಡುವ ಎದೆಗಾರಿಕೆಯೂ ಇಲ್ಲ. ಏಕೆಂದರೆ ಎಕ್ಸೆಕ್ಯುಟಿವ್ ಎಸ್‌ಯುವಿಗಳು ಕೊಳ್ಳುವವರಿಗೆ ಮಾತ್ರ ಬಿಳಿ ಆನೆ ಇದ್ದಂತೆ ಅಲ್ಲ. ತಯಾರಿಸುವವರಿಗೆ, ಮಾರುವವರಿಗೂ ಬಿಳಿ ಆನೆಗಳೇ. ಹಾಗಾಗಿ ಆಮದು ಮಾಡಿಕೊಂಡು ತನ್ನ ಮಾರಾಟ ಜಾಲದ ಮೂಲಕ ಮಾರುವ ಕೆಲಸವನ್ನು ಮಾತ್ರ ಮಹಿಂದ್ರಾ ಮಾಡುತ್ತಿದೆ.ಎಸ್‌ಸ್ಯಾಂಗ್ ರೆಕ್ಸ್ಟನ್ ಎಸ್‌ಯುವಿಯೊಂದಕ್ಕೆ ಇರಬೇಕಾದ ಎಲ್ಲ ಲಕ್ಷಣಗಳನ್ನೂ, ಸೌಲಭ್ಯಗಳನ್ನೂ ಒಳಗೊಂಡಿದೆ. ಅಂದರೆ ಅತ್ಯಾಧುನಿಕ ಮತ್ತು ಭರ್ಜರಿ ನೋಟ ಹಾಗೂ ಬಹುಪಯೋಗ ಸೌಲಭ್ಯ ಹಾಗೂ ಶಕ್ತಿಶಾಲಿ ಎಂಜಿನ್. ಎಕ್ಸ್‌ಡಿಐ ಮತ್ತು ಎಸ್‌ವಿಟಿ ಎಂಬ ಡೀಸೆಲ್ ಅವತರಣಿಕೆಗಳಲ್ಲಿ ಸಿಗುವ ಎಸ್‌ಸ್ಯಾಂಗ್ ರೆಕ್ಸ್ಟನ್ ಪೆಟ್ರೋಲ್ ಅವತರಣಿಕೆಯಲ್ಲಿ ಸಿಗುವುದಿಲ್ಲ. ಅತ್ಯದ್ಭುತ 2696 ಸಿಸಿ ಎಂಜಿನ್ ಒಳಗೊಂಡಿದೆ. ಎಕ್ಸ್‌ಡಿಐ 162 ಬಿಎಚ್‌ಪಿ (4000 ಆರ್‌ಪಿಎಂ) ಹಾಗೂ 340 ಎನ್‌ಎಂ (1800 ಆರ್‌ಪಿಎಂ) ಎಂಜಿನ್ ಒಳಗೊಂಡಿದ್ದರೆ, ಎಸ್‌ವಿಟಿ 184 ಬಿಎಚ್‌ಪಿ (4000 ಆರ್‌ಪಿಎಂ) ಹಾಗೂ 402 ಎನ್‌ಎಂ (1600 ಆರ್‌ಪಿಎಂ) ಎಂಜಿನ್ ಅನ್ನು ಒಳಗೊಂಡಿದೆ.

ಈ ಎರಡೂ ವಾಹನಗಳು ಅತ್ಯದ್ಭುತ `ಲೋ ಟಾರ್ಕ್' ಎಂಜಿನ್ ಒಳಗೊಂಡಿರುವುದು ವಿಶೇಷ. ಹಾಗಾಗಿ ಎಂತಹ ಕಠಿಣ ರಸ್ತೆಯಲ್ಲೂ, ಎಂತಹ ವಿಶಾಲ ಒಳ್ಳೆಯ ರಸ್ತೆಯಲ್ಲೂ ಗಿಯರ್ ಬದಲಿಸದೇ ಚಾಲನೆ ಮಾಡಬಹುದು. ಕಡಿಮೆ ವೇಗದ ಚಾಲನೆಯಲ್ಲಿ ಟಾಪ್ ಎಂಡ್ ಗಿಯರ್‌ನಲ್ಲಿ ಇದ್ದರೂ, ಕೊಂಚವೂ ಜರ್ಕ್ ಹೊಡೆಯದೇ ವಾಹನ ಚಲಿಸುತ್ತದೆ. ಅಲ್ಲದೇ ಎಕ್ಸೆಕ್ಯುಟಿವ್ ಎಸ್‌ಯುವಿಗಳು ಗಾತ್ರದಲ್ಲಿ ದೈತ್ಯವಾಗಿರುವ ಕಾರಣ, ಅವಕ್ಕೆ ಲೋ ಟಾರ್ಕ್ ಎಂಜಿನ್ ಬೇಕೇ ಬೇಕು. ಇಲ್ಲವಾದಲ್ಲಿ ದೊಡ್ಡ ಗಾತ್ರದ ದೇಹ ಹೊತ್ತುಕೊಂಡು ಸಂಚಾರ ದಟ್ಟಣೆ ಇರುವ ಸ್ಥಳಗಳಲ್ಲಿ ಸಂಚರಿಸುವುದು ಕಷ್ಟವಾಗಿ ಬಿಡುತ್ತದೆ.ನೋಟ ಸೂಪರ್

ರೆಕ್ಸ್ಟನ್ ದೈತ್ಯ ವಾಹನ ಎಂಬುದರಲ್ಲಿ ಸಂದೇಹವೇ ಇಲ್ಲ. ಎರಡೂ ಅವತರಣಿಕೆಗಳು ಒಂದೇ ಗಾತ್ರದಲ್ಲಿರುವುದು ಸಮಾಧಾನದ ಸಂಗತಿ. ಏಕೆಂದರೆ ಎರಡು ಕಾರ್‌ಗಳ ನಡುವೆ 3 ಲಕ್ಷ ರೂಪಾಯಿಗೂ ಮೀರಿದ ಬೆಲೆಯ ಅಂತರವಿದೆ. ವಾಹನದ ಉದ್ದ 4755 ಎಂಎಂ, ಅಗಲ 1900 ಎಂಎಂ, ಎತ್ತರ 1785 ಎಂಎಂ ಇದೆ. ವ್ಹೀಲ್‌ಬೇಸ್ 2835 ಎಂಎಂ ಇದ್ದು, ಅತ್ಯದ್ಭುತ 252 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಹಾಗಾಗಿ ಮಂಡಿ ಎತ್ತರದ ಗುಂಡಿ, ಕಲ್ಲುಗಳಿಂದಲೂ ಸರಾಗವಾಗಿ ವಾಹನ ಚಾಲನೆಯಾಗುತ್ತದೆ. ಅದರ ಚಾಸಿಸ್‌ಗೆ ಕೊಂಚವೂ ಘಾಸಿಯಾಗದಂತೆ ಎತ್ತರ ಕಾಪಾಡಿಕೊಳ್ಳುತ್ತದೆ. ಇಷ್ಟು ದೊಡ್ಡ ವಾಹನವೇ ಆದರೂ, ಕೇವಲ 5.7 ಮೀಟರ್‌ನಲ್ಲಿ ಇಡೀ ವಾಹನವನ್ನೇ ತಿರುಗಿಸಬಹುದಾದ ಅವಕಾಶ ಇದೆ. ಹಾಗಾಗಿ ದೈತ್ಯ ವಾಹನಕ್ಕೆ ಕಿರಿದಾದ ವಾಹನದಲ್ಲಿ ಸಮಸ್ಯೆ ಆಗದು.ಜತೆಗೆ ಅತ್ಯುತ್ತಮ ನೋಟ ಮತ್ತು ವಿನ್ಯಾಸ ಒಳಗೊಂಡಿದೆ. ದಕ್ಷಿಣ ಕೊರಿಯಾ ಮಾದರಿಯ ವಾಹನಗಳ ನೋಟ ವಾಹನಕ್ಕೆ ಇರುವ ಕಾರಣ ಭಾರತೀಯ ರಸ್ತೆಗಳಲ್ಲಿ ವಿಶೇಷವಾಗಿ ಕಾಣುತ್ತದೆ. ಮುಂಭಾಗದಲ್ಲಿ ಸ್ಕಿಡ್ ಪ್ಲೇಟ್ ಇದ್ದು, ವಿಶಾಲವಾದ ಮುಂಭಾಗದ ಗ್ರಿಲ್ ಇದೆ. ಕ್ಲಿಯರ್ ಲೆನ್ಸ್ ಹೆಡ್‌ಲೈಟ್‌ಗಳಿದ್ದು, ಪ್ರೊಜೆಕ್ಟರ್ ದೀಪಗಳಿವೆ. ಅದಕ್ಕೆ ತಕ್ಕಂತೆ ಎದುರಿನ ಎಂಜಿನ್ ಬಾನೆಟ್, ಕ್ಲಿಯರ್ ಲೆನ್ಸ್ ಟರ್ನಿಂಗ್ ಲೈಟ್ ದೊಡ್ಡ ವಾಹನದ ಲುಕ್ ನೀಡುತ್ತದೆ. ಅಲ್ಲದೇ, ಎಸ್‌ಸ್ಯಾಂಗ್ ರೆಕ್ಸ್ಟನ್‌ನ ಲೋಗೊ ಮಜಾ ನೀಡುತ್ತದೆ. ಗರುಡ ಗುರುತಿನ ಲೋಗೊ ಹೊಸತಾಗಿ ಕಾಣುತ್ತದೆ.ವಿಶಾಲವಾದ ಬಾಡಿ ಬಂಪರ್‌ಗಳಿದ್ದು, ದೊಡ್ಡ ವಾಹನದ ಫೀಲ್ ನೀಡುತ್ತದೆ. 235 ಎಂಎಂ ಅಗಲದ ಟಯರ್‌ಗಳು ಇರುವುದು ಸಹ ವಿಶೇಷವೇ ಆಗಿದೆ. ಇದರಿಂದ ಗಾಡಿಯ ಶಕ್ತಿ ಸಾಮರ್ಥ್ಯದ ಅರಿವಾಗುತ್ತದೆ. 4 ವ್ಹೀಲ್ ಡ್ರೈವ್ ಇರುವ  ವಾಹನಗಳಿಗೆ ಇಷ್ಟು ದೊಡ್ಡ ಗಾತ್ರದ ಟಯರ್ ಇದ್ದರೇ ಚೆಂದ. 2760 ಕೆಜಿ ತೂಕ ಇರುವುದು ಕುಲುಕಾಟ ಇಲ್ಲದ ಚಾಲನೆಯ ಭರವಸೆಯನ್ನು ನೀಡುತ್ತದೆ. ಎಕ್ಸ್‌ಡಿಐ 180 ಕಿಲೋಮೀಟರ್ ಗರಿಷ್ಠ ವೇಗ ಮುಟ್ಟಿದರೆ, ಎಕ್ಸ್‌ವಿಟಿ 194 ಕಿಲೋಮೀಟರ್ ಗರಿಷ್ಠ ವೇಗ ಮುಟ್ಟುತ್ತದೆ. ಎರಡೂ ವಾಹನಗಳು 100 ಕಿಲೋಮೀಟರ್ ವೇಗವನ್ನು ಗರಿಷ್ಠ 10 ಸೆಕೆಂಡ್‌ಗಳಲ್ಲಿ ಮುಟ್ಟಬಲ್ಲವು. ಪರಿಣಿತ ಚಾಲಕ ಇನ್ನೂ ಬೇಗನೆ ಈ ವೇಗಸಾಧನೆಯನ್ನು ಮಾಡಬಲ್ಲ. ಮೈಲೇಜ್‌ಗಾಗಿ ಈ ವಾಹನ ಕೊಳ್ಳುವುದು ಜಾಣ್ಮೆಯಲ್ಲ.ಎಸ್‌ಸ್ಯಾಂಗ್ ರೆಕ್ಸ್ಟನ್ ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಿದೆ. ಕಾರ್‌ನ ಬೆಂಗಳೂರು ಎಕ್ಸ್ ಶೋರೂಂ ಬೆಲೆಗಳು- ಎಕ್ಸ್‌ಡಿಐ 18,83,624 ರೂಪಾಯಿ , ಎಕ್ಸ್‌ವಿಟಿ 21,07,176 ರೂಪಾಯಿಗಳು. ಹಣಕ್ಕೆ ತಕ್ಕ ಮೌಲ್ಯ ವಿಶೇಷ.

ಪ್ರತಿಕ್ರಿಯಿಸಿ (+)