ಎಸ್-ಬ್ಯಾಂಡ್ ಹಂಚಿಕೆ ಹಗರಣ: ಅಲ್ಲಗಳೆದ ಪ್ರಧಾನಿ ಸಚಿವಾಲಯ

7

ಎಸ್-ಬ್ಯಾಂಡ್ ಹಂಚಿಕೆ ಹಗರಣ: ಅಲ್ಲಗಳೆದ ಪ್ರಧಾನಿ ಸಚಿವಾಲಯ

Published:
Updated:

ನವದೆಹಲಿ (ಪಿಟಿಐ): ಖಾಸಗಿ ಕಂಪೆನಿಯೊಂದಿಗೆ ಕಡಿಮೆ ಮೊತ್ತಕ್ಕೆ ಎಸ್- ಬ್ಯಾಂಡ್ ತರಂಗಾಂತರ ಹಂಚಿಕೆ ಒಪ್ಪಂದ ಮಾಡಿಕೊಂಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ ಎಂಬ ವದಂತಿಗಳನ್ನು ಪ್ರಧಾನಿ ಸಚಿವಾಲಯ ಮಂಗಳವಾರ ಅಲ್ಲಗಳೆದಿದೆ.

ಈ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲವಾದ್ದರಿಂದ ನಷ್ಟದ ಆರೋಪಗಳಿಗೆ ಆಧಾರವೇ ಇಲ್ಲವೆಂದು ಪ್ರಧಾನಿ ಸಚಿವಾಲಯದ ವಕ್ತಾರರು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಇಸ್ರೊದ ವಾಣಿಜ್ಯ ಅಂಗಸಂಸ್ಥೆಯಾದ ‘ಅಂತರಿಕ್ಷ್’ ಮತ್ತು ದೇವಾಸ್ ಮಲ್ಟಿಮೀಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆ ಜತೆ ಏರ್ಪಟ್ಟ ಎಸ್- ಬ್ಯಾಂಡ್ ತರಂಗಾಂತರ ಹಂಚಿಕೆ ಒಪ್ಪಂದದಿಂದಾಗಿ ಭಾರಿ ನಷ್ಟವಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಈ ಸಂಬಂಧ ಸಿಎಜಿ ಕಚೇರಿ ಹಾಗೂ ಅಂತರಿಕ್ಷ ಇಲಾಖೆಗಳು ಈಗಾಗಲೇ ಪತ್ರಿಕಾ ಹೇಳಿಕೆ ನೀಡಿ ವಸ್ತುಸ್ಥಿತಿ ಏನೆಂಬುದನ್ನು ವಿವರಿಸಿವೆ. ಎಸ್- ಬ್ಯಾಂಡ್ ತರಂಗಾಂತರವನ್ನು ಅಂತರಿಕ್ಷ್‌ಗಾಗಲೀ ಅಥವಾ ದೇವಾಸ್‌ಗಾಗಲೀ ಹಂಚಿಕೆ ಮಾಡುವ ಕುರಿತು ಸರ್ಕಾರ ನಿರ್ಧರಿಸಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಬಾಹ್ಯಾಕಾಶ ಇಲಾಖೆಯು 70 ಮೆಗಾಹರ್ಟ್ಸ್‌ನ ಎಸ್-ಬ್ಯಾಂಡ್ ತರಂಗಾಂತರವನ್ನು ವಾಸ್ ಮಲ್ಟಿಮೀಡಿಯಾಕ್ಕೆ ಕೇವಲ 1000 ಕೋಟಿ ರೂಪಾಯಿಗೆ ನೀಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ 2 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಮಾಧ್ಯಮ ವರದಿಗಳು ಅಭಿಪ್ರಾಯಪಟ್ಟಿದ್ದವು.

ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸ್ಪಷ್ಟನೆ ನೀಡುವಂತೆ ಪ್ರಧಾನಿ ಅವರನ್ನು ಆಗ್ರಹಿಸಿದ್ದವು. ಸಾರ್ವಜನಿಕರ ಗಮನಕ್ಕೇ ಬಾರದಂತೆ ಎಸ್-ಬ್ಯಾಂಡ್ ಹಂಚಿಕೆ ಮುಗಮ್ಮಾಗಿ ನಡೆದಿದೆ ಎಂದು ಬಿಜೆಪಿ ಆಪಾದಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry