ಏಕದಿನ ಕ್ರಿಕೆಟ್: ಪಾಕಿಸ್ತಾನಕ್ಕೆ ಭರ್ಜರಿ ಗೆಲುವು

7

ಏಕದಿನ ಕ್ರಿಕೆಟ್: ಪಾಕಿಸ್ತಾನಕ್ಕೆ ಭರ್ಜರಿ ಗೆಲುವು

Published:
Updated:
ಏಕದಿನ ಕ್ರಿಕೆಟ್: ಪಾಕಿಸ್ತಾನಕ್ಕೆ ಭರ್ಜರಿ ಗೆಲುವು

ಗ್ರಾಸ್ ಐಲೆಟ್, ಸೇಂಟ್ ಲೂಸಿಯ (ಎಎಫ್‌ಪಿ): ಮಿಸ್ಬಾ ಉಲ್ ಹಕ್, ಮೊಹಮ್ಮದ್ ಹಫೀಜ್ ಮತ್ತು ಅಸದ್ ಶಫೀಕ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.ಸೇಂಟ್ ಲೂಸಿಯದಲ್ಲಿರುವ ಬ್ಯುಸೆಜರ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡರೆನ್ ಸಮಿ ನೇತೃತ್ವದ ವಿಂಡೀಸ್ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 221 ರನ್ ಪೇರಿಸಿತು. ಪಾಕ್ ತಂಡ 41.3 ಓವರ್‌ಗಳಲ್ಲಿ 2 ವಿಕೆಟ್‌ಗೆ 222 ರನ್ ಗಳಿಸಿ ಗೆಲುವಿನ ನಗು ಬೀರಿತು. ಶಾಹಿದ್ ಅಫ್ರಿದಿ ಬಳಗ ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1-0 ರಲ್ಲಿ ಮುನ್ನಡೆ ಸಾಧಿಸಿತು.ಸುಲಭ ಗುರಿ ಬೆನ್ನಟ್ಟಿದ ಪಾಕ್ ತಂಡ ಗೆಲುವಿನ ಹಾದಿಯಲ್ಲಿ ಯಾವುಡೇ ಒತ್ತಡ ಅನುಭವಿಸಲಿಲ್ಲ. ಮಿಸ್ಬಾ (ಔಟಾಗದೆ 73, 90 ಎಸೆತ, 5ಬೌಂ, 1 ಸಿಕ್ಸರ್), ಅಸದ್ ಶಫೀಕ್ (ಔಟಾಗದೆ 61, 76 ಎಸೆತ, 7 ಬೌಂ) ಮತ್ತು ಹಫೀಜ್ (54, 45 ಎಸೆತ, 7 ಬೌಂ, 1 ಸಿಕ್ಸರ್) ಅವರು ಆಕರ್ಷಕ ಅರ್ಧಶತಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಹಫೀಜ್ ಅವರು ಬೌಲಿಂಗ್‌ನಲ್ಲೂ (36ಕ್ಕೆ 1) ಮಿಂಚಿದ್ದರು. ಇದರಿಂದ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಪಾಕ್ ಪರ ಔಟಾದ ಇನ್ನೊಬ್ಬ ಬ್ಯಾಟ್ಸ್‌ಮನ್ ಅಹ್ಮದ್ ಶೆಹಜಾದ್ (22). ಹಫೀಜ್ ಮತ್ತು ಶೆಹಜಾದ್ ಮೊದಲ ವಿಕೆಟ್‌ಗೆ  68 ರನ್‌ಗಳನ್ನು ಕಲೆಹಾಕಿದರು.ಆತಿಥೇಯ ತಂಡದ ಪರ ಡರೆನ್ ಬ್ರಾವೊ (67) ಮಾತ್ರ ಉತ್ತಮ ಪ್ರದರ್ಶನ ನೀಡಿದರು. ಪಾಕ್ ಪರ ವಹಾಬ್ ರಿಯಾಜ್ ಎರಡು ವಿಕೆಟ್ ಪಡೆದರೂ, 10 ಓವರ್‌ಗಳಲ್ಲಿ 62 ರನ್‌ಗಳನ್ನು ಬಿಟ್ಟುಕೊಟ್ಟರು. ಆದರೆ ಸ್ಪಿನ್ನರ್‌ಗಳು ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಕಡಿವಾಣ ತೊಡಿಸುವಲ್ಲಿ ಯಶಸ್ವಿಯಾದರು.‘ವಿಂಡೀಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಾಗ ನನಗೆ ಸಂತಸವಾಯಿತು. ಏಕೆಂದರೆ ಈ ಪಿಚ್ ನಮ್ಮ ಸ್ಪಿನ್ನರ್‌ಗಳಿಗೆ ನೆರವಾಗುವ ರೀತಿಯಲ್ಲಿತ್ತು’ ಎಂದು ಪಂದ್ಯದ ಬಳಿಕ ಪಾಕ್ ತಂಡದ ನಾಯಕ ಶಾಹಿದ್ ಅಫ್ರಿದಿ ಪ್ರತಿಕ್ರಿಯಿಸಿದರು.ಸಂಕ್ಷಿಪ್ತ ಸ್ಕೋರ್: ವೆಸ್ಟ್‌ಇಂಡೀಸ್: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 221 (ಲೆಂಡ್ಲ್ ಸಿಮೊನ್ಸ್ 24, ಡರೆನ್ ಬ್ರಾವೊ 67, ಕಿರ್ಕ್ ಎಡ್ವರ್ಡ್ಸ್ 28, ಡರೆನ್ ಸಾಮಿ 29, ವಹಾಬ್ ರಿಯಾಜ್ 62ಕ್ಕೆ 2).ಪಾಕಿಸ್ತಾನ: 41.3 ಓವರ್‌ಗಳಲ್ಲಿ 2 ವಿಕೆಟ್‌ಗೆ 222 (ಮೊಹಮ್ಮದ್ ಹಫೀಜ್ 54, ಅಸದ್ ಶಫೀಕ್ ಔಟಾಗದೆ 61, ಮಿಸ್ಬಾ ಉಲ್ ಹಕ್ ಔಟಾಗದೆ 73, ದೇವೇಂದ್ರ ಬಿಶೂ 48ಕ್ಕೆ 2)

ಫಲಿತಾಂಶ: ಪಾಕಿಸ್ತಾನಕ್ಕೆ 8 ವಿಕೆಟ್ ಗೆಲುವು; ಪಂದ್ಯಶ್ರೇಷ್ಠ: ಮೊಹಮ್ಮದ್ ಹಫೀಜ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry