ಏಕದಿನ ಸರಣಿಯಲ್ಲಿ ರಾಜ್ಯದ ಅರವಿಂದ್‌ಗೆ ಸ್ಥಾನ

7

ಏಕದಿನ ಸರಣಿಯಲ್ಲಿ ರಾಜ್ಯದ ಅರವಿಂದ್‌ಗೆ ಸ್ಥಾನ

Published:
Updated:
ಏಕದಿನ ಸರಣಿಯಲ್ಲಿ ರಾಜ್ಯದ ಅರವಿಂದ್‌ಗೆ ಸ್ಥಾನ

ಚೆನ್ನೈ (ಪಿಟಿಐ): ದೇಶಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ತೋರುತ್ತಿರುವ ಕರ್ನಾಟಕದ ಎಡಗೈ ವೇಗದ ಬೌಲರ್ ಎಸ್.ಅರವಿಂದ್ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಆದರೆ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅವರನ್ನು ಕೈಬಿಡಲಾಗಿದೆ. ಇತ್ತೀಚೆಗೆ ಕೊನೆಗೊಂಡ ಇಂಗ್ಲೆಂಡ್ ಪ್ರವಾಸದ ವೇಳೆ ಕಳಪೆ ಪ್ರದರ್ಶನ ತೋರಿದ್ದು ಅದಕ್ಕೆ ಮುಖ್ಯ ಕಾರಣ. ಎರಡು ಟೆಸ್ಟ್ ಪಂದ್ಯ ಆಡಿದ್ದ ಅವರು ಹೊಟ್ಟೆ ನೋವಿನ ಸಮಸ್ಯೆ ಕಾರಣ ಸರಣಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಎರಡು ಟೆಸ್ಟ್‌ಗಳಲ್ಲಿ ಕೇವಲ ಎರಡು ವಿಕೆಟ್ ಪಡೆದಿದ್ದರು.ಗುರುವಾರ ಇಲ್ಲಿ ಸಭೆ ಸೇರಿದ್ದ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರು 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದರು. ಉತ್ತರ ವಲಯದಿಂದ ಯಶ್ಪಾಲ್ ಶರ್ಮ ಬದಲಿಗೆ ನೇಮಕವಾಗಿರುವ ಮೋಹಿಂದರ್ ಅಮರ್‌ನಾಥ್‌ಗೆ ಇದು ಮೊದಲ ಸಭೆಯಾಗಿತ್ತು.ಭಜ್ಜಿ ಬದಲಿಗೆ ಪಂಜಾಬ್‌ನ ಲೆಗ್ ಸ್ಪಿನ್ನರ್ ರಾಹುಲ್ ಶರ್ಮ ಅವರಿಗೆ ಸ್ಥಾನ ನೀಡಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಗೌತಮ್ ಗಂಭೀರ್ ತಂಡಕ್ಕೆ ವಾಪಸಾಗಿದ್ದಾರೆ.ಆದರೆ ಗಾಯದ ಸಮಸ್ಯೆಯಿಂದ ಪೂರ್ಣವಾಗಿ ಚೇತರಿಸಿಕೊಳ್ಳದ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ವೇಗಿಗಳಾದ ಜಹೀರ್ ಖಾನ್ ಹಾಗೂ ಇಶಾಂತ್ ಶರ್ಮ ಅವರನ್ನು ಪರಿಗಣಿಸಿಲ್ಲ.27 ವರ್ಷ ವಯಸ್ಸಿನ ಅರವಿಂದ್ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗಲು ಪ್ರಮುಖ ಕಾರಣ ರಣಜಿ ಹಾಗೂ ಐಪಿಎಲ್ ಟೂರ್ನಿಯಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನ. ರಾಜ್ಯದ ಮತ್ತೊಬ್ಬ ವೇಗಿ ಆರ್.ವಿನಯ್ ಕುಮಾರ್ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.

 

ಆದರೆ ಆರ್.ಪಿ.ಸಿಂಗ್, ಎಸ್.ಶ್ರೀಶಾಂತ್ ಹಾಗೂ ಆಶಿಶ್ ನೆಹ್ರಾ ಅವರನ್ನು ಪರಿಗಣಿಸಿಲ್ಲ. ಅವರ ಬದಲಿಗೆ ಉದಯೋನ್ಮುಖ ವೇಗಿಗಳಾದ ವರುಣ್ ಆ್ಯರನ್ ಹಾಗೂ ಉಮೇಶ್ ಯಾದವ್‌ಗೆ ಅವಕಾಶ ನೀಡಿದ್ದಾರೆ.ಇಂಗ್ಲೆಂಡ್ ವಿರುದ್ಧದ ಪದಾರ್ಪಣೆ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಬ್ಯಾಟ್ಸ್‌ಮನ್ ಆಜಿಂಕ್ಯ ರಹಾನೆ, ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್, ಆಲ್‌ರೌಂಡರ್ ರವೀಂದ್ರ ಜಡೇಜಾ ಹಾಗೂ ಮನೋಜ್ ತಿವಾರಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

 

ರಾಹುಲ್ ಶರ್ಮ ಅವರ ಅದೃಷ್ಟ ಖುಲಾಯಿಸಿದೆ. ಕೇವಲ 9 ಪ್ರಥಮ ದರ್ಜೆ ಪಂದ್ಯ ಆಡಿರುವ ಅವರು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರ್ದ್ದಿದರು. ಅದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಅವರ ಕನಸನ್ನು ನನಸು ಮಾಡಿದೆ.`ತಂಡ ಸಮತೋಲನದಿಂದ ಕೂಡಿದೆ. ಎಲ್ಲರೂ ಫಿಟ್ ಆಗಿದ್ದಾರೆ~ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಕೆ.ಶ್ರೀಕಾಂತ್ ನುಡಿದಿದ್ದಾರೆ. ಅಕ್ಟೋಬರ್ 14ರಿಂದ 29ರವರೆಗೆ ನಡೆಯಲಿರುವ ಈ ಸರಣಿಯಲ್ಲಿ ಐದು ಏಕದಿನ ಹಾಗೂ ಒಂದು ಟ್ವೆಂಟಿ-20 ಪಂದ್ಯ ಇರುತ್ತದೆ.ನೆಹ್ರಾ ಅಸಮಾಧಾನ (ನವದೆಹಲಿ ವರದಿ): ತಮ್ಮನ್ನು ತಂಡಕ್ಕೆ ಆಯ್ಕೆ ಮಾಡದ ಬಗ್ಗೆ ಆಶಿಶ್ ನೆಹ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. `ನನ್ನ ಫಿಟ್‌ನೆಸ್ ಪ್ರಮಾಣ ಪತ್ರವನ್ನು ಬಿಸಿಸಿಐಗೆ ನೀಡಿದ್ದೇನೆ. ಆದರೆ ನನ್ನನ್ನು ಪದೇಪದೇ ಕಡೆಗಣಿಸುತ್ತಿದ್ದಾರೆ. ಚಾಲೆಂಜರ್ ಟ್ರೋಫಿ ಟೂರ್ನಿಗೆ ಕೂಡ ಪರಿಗಣಿಸಿಲ್ಲ~ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಭಾರತ ತಂಡ ಇಂತಿದೆ

ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್,  ಪಾರ್ಥಿವ್   ಪಟೇಲ್, ಆಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ರವೀಂದ್ರ ಜಡೇಜಾ, ಆರ್.ಅಶ್ವಿನ್, ವರುಣ್ ಆ್ಯರನ್, ಉಮೇಶ್ ಯಾದವ್, ಆರ್. ವಿನಯ್ ಕುಮಾರ್, ಎಸ್.ಅರವಿಂದ್, ರಾಹುಲ್ ಶರ್ಮ, ಮನೋಜ್ ತಿವಾರಿ ಹಾಗೂ ಪ್ರವೀಣ್ ಕುಮಾರ್.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳಾಪಟ್ಟಿ: ಮೊದಲ ಪಂದ್ಯ: ಅಕ್ಟೋಬರ್ 14 (ಹೈದರಾಬಾದ್), ಎರಡನೇ ಪಂದ್ಯ: ಅ.17 (ನವದೆಹಲಿ). ಮೂರನೇ ಪಂದ್ಯ: ಅ.20 (ಮೊಹಾಲಿ), ನಾಲ್ಕನೇ ಪಂದ್ಯ: ಅ.23 (ಮುಂಬೈ) ಹಾಗೂ ಐದನೇ ಪಂದ್ಯ: ಅ.25 (ಕೋಲ್ಕತ್ತ). ಒಂದು ಟ್ವೆಂಟಿ-20 ಪಂದ್ಯ: ಅ.29 (ಕೋಲ್ಕತ್ತ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry