ಭಾನುವಾರ, ಜೂನ್ 13, 2021
21 °C

ಏಕಬೆಳೆ ಪದ್ಧತಿಯಿಂದ ಫಲವತ್ತತೆ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾಳಿ: ಏಕಬೆಳೆ ಪದ್ಧತಿ ಮತ್ತು ರಾಸಾಯನಿಕ ಗೊಬ್ಬರಗಳ ಅಧಿಕ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಜಿ. ಹನುಮಂತಪ್ಪ ಹೇಳಿದರು.ತಾಲ್ಲೂಕಿನ ರಾಮೇಶ್ವರ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಭೂಚೇತನ ಕಾರ್ಯಕ್ರಮದಡಿ ಶುಕ್ರವಾರ ರಾಕೇಶ್ ಅವರ ತಾಕಿನಲ್ಲಿ ಹಮ್ಮಿಕೊಂಡ ಹಿಂಗಾರಿ ಜೋಳದ ಕ್ಷೇತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಲಘು ಪೋಷಕಾಂಶಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಇದರಿಂದಾಗಿ ಇಳುವರಿ ಕೂಡಾ ದಿಗುಣಗೊಳ್ಳುತ್ತದೆ. ಕೃಷಿ ಇಲಾಖೆಯ ವತಿಯಿಂದ ಲಘು ಪೋಷಕಾಂಶಗಳನ್ನು ರಿಯಾಯ್ತಿ ದರದಲ್ಲಿ ನೀಡಲಾಗುತ್ತದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಕೃಷಿಯಲ್ಲಿ ರೈತರು ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಅಧಿಕ ಇಳುವರಿ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.ಸಹಾಯಕ ಕೃಷಿ ನಿರ್ದೇಶಕ ವಿ. ನರಸಿಂಹಮೂರ್ತಿ ಭೂಚೇತನ ಕಾರ್ಯಕ್ರಮದ ಬಗ್ಗೆ ಉಪನ್ಯಾಸ ನೀಡಿದರು. ಎಚ್.ಕೆ. ರೇವಣಸಿದ್ಧನಗೌಡ ಕೃಷಿ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಪ್ರಗತಿಪರ ರೈತ ಭೋಜರಾಜ ಮಾತನಾಡಿ, ಕೃಷಿಯಲ್ಲಿ ಲಘು ಪೋಷಕಾಂಶಗಳ ಬಳಕೆಯಿಂದ ತಾವು ಒಂದು ಎಕರೆ ಜಮೀನಿನಲ್ಲಿ 38 ಚೀಲ ಶೇಂಗಾ ಬೇಳೆದಿರುವ ಬಗ್ಗೆ ವಿವರಿಸಿದರು.ಯರಗನಾಳು ಗ್ರಾಮದ ವರ ಮಹಾಲಕ್ಷ್ಮೀ ರೈತ ಶಕ್ತಿ ಗುಂಪಿನ ಉಪ ಸಂಯೋಜಕಿ ಅಂಬಿಕಾ ಲಿಂಗಮೂರ್ತಿ ಮಾತನಾಡಿ, ಮುಯ್ಯಾಳಿನ ಪದ್ಧತಿಯಿಂದ ಕೃಷಿಯಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ಬಗೆಹರಿಸಿಕೊಂಡ ಬಗೆಯನ್ನು ವಿವರಿಸಿದರು.ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಕೃಷಿ ಪ್ರಶಸ್ತಿ ವಿಜೇತ ರೈತ ಮಲ್ಲಿಕಾರ್ಜುನಪ್ಪ, ಶಾರದಮ್ಮ, ಡಿ. ಈಶ್ವರಪ್ಪ ಹಾಗೂ ರೈತರು ಇದ್ದರು. ಆರ್.ಟಿ. ಕರಿಲಿಂಗಪ್ಪನವರ್ ಸ್ವಾಗತಿಸಿದರು. ಬಿ.ಎಚ್. ವೀರಭದ್ರಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.