ಏಕರೂಪದ ಮಾನದಂಡ ಅಗತ್ಯ

7

ಏಕರೂಪದ ಮಾನದಂಡ ಅಗತ್ಯ

Published:
Updated:

ಹಿಂದುಳಿದ ಜಾತಿಗಳ ಕಡು ಬಡವರಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಸೌಲಭ್ಯ ಇರಬೇಕು ಎನ್ನುವುದೇ ಸಾಮಾಜಿಕ ನ್ಯಾಯದ ಉದ್ದೇಶ. ಆದರೆ ಹಿಂದುಳಿದ ಜಾತಿಗಳಲ್ಲೇ ಆರ್ಥಿಕವಾಗಿ ಬಲಾಢ್ಯರಾದವರಿಗೆ ಮೀಸಲಾತಿ ಅಗತ್ಯ ಇಲ್ಲ.ಅಂಥವರನ್ನು ಈ ಸೌಲಭ್ಯದಿಂದ ಹೊರಗಿಡುವ ಉದ್ದೇಶದಿಂದ ಅವರನ್ನು `ಕೆನೆಪದರ~ ವ್ಯಾಪ್ತಿಯಲ್ಲಿ ಬರುವ ಜನರೆಂದು ಗುರುತಿಸುವ ಪರಿಪಾಠವಿದೆ. ಕೆನೆಪದರ ವ್ಯಾಪ್ತಿಗೆ ಬರುವ ಜನರನ್ನು ಗುರುತಿಸಲು ಸರ್ಕಾರ ಅವರ ಆದಾಯವನ್ನೇ ಮಾನದಂಡವಾಗಿ ಪರಿಗಣಿಸಿದೆ. ರಾಜ್ಯದಲ್ಲಿ ವಾರ್ಷಿಕ ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಆದಾಯವಿರುವ ಹಿಂದುಳಿದ ಜಾತಿ, ವರ್ಗಗಳ ಜನರು ಕೆನೆಪದರ ವ್ಯಾಪ್ತಿಯಲ್ಲಿ ಬರುತ್ತಾರೆ.

 

ಇತ್ತೀಚಿನ ವರ್ಷಗಳಲ್ಲಿ ಹಣದುಬ್ಬರ ಹಾಗೂ ಇತರ ಕಾರಣಗಳಿಂದ ಹಣದ ಮೌಲ್ಯ ಕುಸಿದಿದೆ. ಆದರೆ, ಜನರ ಒಟ್ಟಾರೆ ಆದಾಯ ಹೆಚ್ಚಿದೆ. ಈ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯ ಸರ್ಕಾರ ಕೆನೆಪದರ ವ್ಯಾಪ್ತಿಯನ್ನು ಗುರುತಿಸುವ ಆದಾಯ ಮಿತಿಯನ್ನು ಎರಡು ಲಕ್ಷದಿಂದ ಮೂರೂವರೆ ಲಕ್ಷರೂಪಾಯಿಗಳಿಗೆ ಏರಿಸಿದೆ.

 

ಕೇಂದ್ರ ಸರ್ಕಾರ 2008ರ್ಲ್ಲಲೇ ಈ ಮಿತಿಯನ್ನು 4.5ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದೆ. ಕೆನೆ ಪದರ ವ್ಯಾಪ್ತಿಗೆ ಬರುವವರನ್ನು  ಗುರುತಿಸುವ ಆದಾಯ ಮಿತಿಯಲ್ಲಿ ಈ ತಾರತಮ್ಯಕ್ಕೆ ಏನು ಕಾರಣ ಎಂಬುದು ಅರ್ಥವಾಗುತ್ತಿಲ್ಲ.ಆದಾಯವೊಂದನ್ನೇ ಮಾನದಂಡವಾಗಿ ಪರಿಗಣಿಸುವ ಕ್ರಮವೂ ಸಮರ್ಥನೀಯ ಅಲ್ಲ. ಈ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವ್ಯಾಪಕ ಚರ್ಚೆ ನಡೆಸಿ ಏಕರೂಪ ಆದಾಯ ಮಿತಿಯನ್ನು ನಿಗದಿಪಡಿಸುವ ಬಗ್ಗೆ ಚಿಂತನೆ ನಡೆಸಬೇಕು.ಕೆನೆಪದರ ವರ್ಗದ ಆದಾಯ ಮಿತಿ ಹೆಚ್ಚಿಸಿರುವ ಕ್ರಮದಿಂದ ಸುಮಾರು 120ಕ್ಕೂ ಹೆಚ್ಚು ಹಿಂದುಳಿದ ಜಾತಿ ವರ್ಗಗಳ ಜನರಿಗೆ ಅನುಕೂಲ ಆಗಲಿದೆ ಎನ್ನಲಾಗಿದೆ. ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಲಾಢ್ಯರಾದ ಹಾಗೂ ಸಂಖ್ಯೆಯಲ್ಲಿ ಹೆಚ್ಚಿರುವ ಕೆಲವೇ ಜಾತಿಗಳ ಮುಖಂಡರು ಒಟ್ಟಾರೆ ಹಿಂದುಳಿದ ವರ್ಗಗಳಿಗೆ ನಿಗದಿ ಮಾಡಿದ ಉದ್ಯೋಗ ಮತ್ತಿತರ ಸೌಲಭ್ಯಗಳನ್ನು ತಮ್ಮ ಜಾತಿಯ ಜನರೇ ಕಬಳಿಸಲು ಅವಕಾಶ ಮಾಡಿಕೊಡುತ್ತಿರುವುದು ಗುಟ್ಟೇನಲ್ಲ.ನಿಜವಾಗಿಯೂ ಹಿಂದುಳಿದ, ಅಕ್ಷರ ಸಂಸ್ಕೃತಿಗೆ ಒಳಗಾಗದ ಹತ್ತಾರು ಜಾತಿಗಳ ಜನರು ಎಲ್ಲ ಬಗೆಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದಾಯ ಪ್ರಮಾಣ ಪತ್ರ ಸಲ್ಲಿಕೆಯೊಂದೇ ಮೀಸಲಾತಿ ಸೌಲಭ್ಯಕ್ಕೆ ಅರ್ಹತೆಯಾಗಿರುವುದರಿಂದ ಅಂತಹ ಪ್ರಮಾಣ ಪತ್ರ ತರುವುದು ಈಗ ಕಷ್ಟದ ಕೆಲಸವೇನಲ್ಲ.

 

ಈ ಹಿನ್ನೆಲೆಯಲ್ಲಿ ಅರ್ಹ ಹಿಂದುಳಿದವರನ್ನು ಗುರುತಿಸುವ ವಿಷಯದಲ್ಲಿ ಸರ್ಕಾರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮರುಚಿಂತನೆ ನಡೆಯಬೇಕಿದೆ. ಹಿಂದುಳಿದ ವರ್ಗಗಳಿಗೆ ಒಳ ಮೀಸಲಾತಿ ಕಲ್ಪಿಸುವುದರಿಂದ ನಿರ್ಲಕ್ಷ್ಯಕ್ಕೆ ಒಳಗಾದ ಜಾತಿಗಳಿಗೆ ಸಾಮಾಜಿಕ ನ್ಯಾಯ ಸಿಗಬಹುದು.  ಈ ಕುರಿತು ರಾಷ್ಟ್ರ ಮಟ್ಟದಲ್ಲಿ  ಚಿಂತನೆ ನಡೆಯಬೇಕಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry