ಮಂಗಳವಾರ, ಮೇ 18, 2021
24 °C

ಏಕರೂಪ ಟೋಲ್ ಶುಲ್ಕ ನೀತಿ ಜಾರಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕರಿಂದ ಬೇಕಾಬಿಟ್ಟಿ ಟೋಲ್ ಶುಲ್ಕ ವಸೂಲಿ ಮಾಡುತ್ತಿದ್ದು, ಕೇಂದ್ರ ಸರ್ಕಾರ ಟೋಲ್ ನೀತಿ ಜಾರಿಗೆ ಮುಂದಾಗಿರುವುದು ಸೂಕ್ತವಾಗಿದೆ. ಆದರೆ, ಸರ್ಕಾರ ಏಕರೂಪ ಟೋಲ್ ಶುಲ್ಕ ನೀತಿ ಜಾರಿಗೆ ತರಬೇಕು ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಜಂಟಿ ಕಾರ್ಯದರ್ಶಿ ಸೈಯದ್ ಸೈಫುಲ್ಲಾ ಒತ್ತಾಯಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಿಂದ 2,400 ಲಾರಿಗಳು ಬೆಂಗಳೂರು, ಮುಂಬೈಯಂತಹ ಮಹಾನಗರಗಳಿಗೆ ಸರಕು ಪೂರೈಕೆ ಮಾಡುತ್ತಿವೆ. ಬೆಂಗಳೂರಿನಿಂದ ಮುಂಬೈವರೆಗೆ ಒಟ್ಟು 18 ಸ್ಥಳಗಳಲ್ಲಿ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತಿದೆ.ಆದರೆ, ಮನಸೋಇಚ್ಛೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಒಂದು ಲಾರಿಗೆ ಕನಿಷ್ಠ ರೂ 4,032 ನಷ್ಟು ಟೋಲ್ ಶುಲ್ಕ ನೀಡಬೇಕಿದೆ. ಯೋಜನಾ ವೆಚ್ಚ ತುಂಬಿದ ಮೇಲೆ ಟೋಲ್‌ಗೇಟ್ ತೆಗೆದು ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಿತ್ತು.ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ವಸೂಲಿಯನ್ನು ಗುತ್ತಿಗೆ ನೀಡುತ್ತ ಬರುತ್ತಿದ್ದು, ಲಾರಿ ಮಾಲೀಕರಿಗೆ ಟೋಲ್ ಶುಲ್ಕದಿಂದ ಮುಕ್ತಿ ಸಿಗದಂತಾಗಿದೆ.ಜಿಲ್ಲೆಯ ಹೆಬ್ಬಾಳು ಟೋಲ್‌ಗೇಟ್‌ನಲ್ಲಿ ರೂ 115, ಹಿರಿಯೂರು ಬಳಿ ರೂ  280, ತುಮಕೂರು ಬಳಿ ರೂ 107 ನೆಲಮಂಗಳ ಬಳಿ ರೂ 55 ಹೀಗೆ ಬೇಕಾಬಿಟ್ಟಿ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಲಾರಿ ಟರ್ಮಿನಲ್ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದ್ದು, ಜಿಲ್ಲಾಡಳಿತ ಕೂಡಲೇ ಲಾರಿ ಟರ್ಮಿನಲ್ ನಿರ್ಮಿಸಬೇಕು ಎಂದು ಆಗ್ರಹಪಡಿಸಿದರು.ಜಿಲ್ಲಾ ಮಾಲೀಕರ ಸಂಘದ ಅಧ್ಯಕ್ಷ ವಾಲಿ ಮೋಹನ್‌ಕುಮಾರ್ ಮಾತನಾಡಿ, ಬೇಕಾಬಿಟ್ಟಿ ಟೋಲ್ ಶುಲ್ಕ ಒಂದೆಡೆಯಾದರೆ; ಅಲ್ಲಿನ ಸಿಬ್ಬಂದಿ ಲಾರಿ ಚಾಲಕರ ಮೇಲೆ ಹಲ್ಲೆ ನಡೆಸುವಂತಹ ಘಟನೆಗಳು ನಡೆಯುತ್ತಿವೆ. ಅಲ್ಲದೇ ಚಿತ್ರದುರ್ಗ ಜಿಲ್ಲೆಯ ಹಿರಿಯೂರು-ಚಳ್ಳಕೆರೆ ಸಂಪರ್ಕ ಸೇವಾರಸ್ತೆಯಲ್ಲಿ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತಿದೆ.ಹೆದ್ದಾರಿ ಪ್ರಾಧಿಕಾರದ ಅಧಿನಿಯಮದ ಪ್ರಕಾರ ಸೇವಾ ರಸ್ತೆಯಲ್ಲಿ ಶುಲ್ಕ ವಸೂಲಿ ಮಾಡುವಂತಿಲ್ಲ. ಆದರೂ ಪ್ರಾಧಿಕಾರ ಕಣ್ಮುಚ್ಚಿ ಕುಳಿತಿದೆ ಎಂದರು.ಜಿಲ್ಲಾ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಮಹಾನಂದಸ್ವಾಮಿ, ಜಿಲ್ಲಾ ಲಾರಿ ಮಾಲೀಕರ ಸಂಘದ ಜಂಟಿ ಕಾರ್ಯದರ್ಶಿ ಜಿ.ಸಿದ್ದೇಶ, ಮನ್ಸೂರು, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.