ಬುಧವಾರ, ಅಕ್ಟೋಬರ್ 16, 2019
28 °C

ಏಕರೂಪ ಶಿಕ್ಷಣ ಜಾರಿಯಾಗಲಿ: ಶಿವಪ್ರಸಾದ್

Published:
Updated:

ಚಿಂತಾಮಣಿ: ಸರ್ಕಾರದ ಶಿಕ್ಷಣ ನೀತಿ ತಾರತಮ್ಯದಿಂದ ಕೂಡಿದ್ದು, ಪಠ್ಯ ಪುಸ್ತಕ ಗಳಲ್ಲಿ ಮೇಲು- ಕೀಳು, ಸವಲತ್ತು ಉಳ್ಳ ವರಿಗೆ ಒಂದು ರೀತಿ ಪಠ್ಯ, ಸೌಲಭ್ಯವಿಲ್ಲ ದವರಿಗೆ ಮತ್ತೊಂದು ರೀತಿ ಪಠ್ಯ. ಇದನ್ನು ಹೋಗಲಾಡಿಸಿ ಒಂದೇ ರೀತಿ ಶಿಕ್ಷಣ ಪದ್ಧತಿ ಜಾರಿಯಾಗಬೇಕು ಎಂದು ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಒತ್ತಾಯಿಸಿದರು.ವಿವಿಧ ಪಠ್ಯಕ್ರಮಗಳಿದ್ದರೂ ಅಂಕಗಳ ವಿಚಾರಕ್ಕೆ ಬಂದಾಗ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಯಾವ ನ್ಯಾಯ? ಅಮೆರಿಕಾದಲ್ಲಿ ರಾಷ್ಟ್ರದ ಅಧ್ಯಕ್ಷನ ಮಗನಿಂದ ಹಿಡಿದು ಬೀದಿ ಗುಡಿಸುವವನ ಮಗನವರೆಗೂ ಏಕ ಶಿಕ್ಷಣ ಪದ್ಧತಿ ಇದೆ. ನಮ್ಮಲ್ಲೂ ಇದು ಜಾರಿಯಾಗಬೇಕು. ಸರ್ಕಾರಿ ಶಾಲೆಗಳನ್ನು ಮುಚ್ಚುವ ಆಲೋಚನೆ ಶಿಕ್ಷಣವನ್ನು ಖಾಸಗಿಯವರಿಗೆ ಒಪ್ಪಿಸುವ ಹುನ್ನಾರ ಎಂದು ಟೀಕಿಸಿದರು.ಸಾಹಿತ್ಯವು ನದಿಯಂತೆ ಉಕ್ಕಿ ಹರಿದಾಗ ಮಾತ್ರ ಅದಕ್ಕೆ ಶ್ರೇಷ್ಠತೆ ಬರುತ್ತದೆ. ಕಲೆ ಸಾಹಿತ್ಯ ಎಂದಿಗೂ ಸೀಮಿತವಾಗಬಾರದು, ಅದು ಗಡಿಗಳನ್ನು ದಾಟಬೇಕಿದೆ. ಕಲೆ ಸಾಹಿತ್ಯ ಸಮಾಜದ ನಿರ್ಮಾಣಕ್ಕಾಗಿ ಎಂಬುದನ್ನು ಮನಗಾಣಬೇಕು ಎಂದರು.ಯಾವುದೇ ಭಾಷೆಯಿರಲಿ ಒಳ್ಳೆಯದಿದ್ದರೆ ಸ್ವೀಕರಿಸುವ ಔದಾರ್ಯ ನಮ್ಮದಾಗಬೇಕು. ಭೂ ಸಂಪತ್ತು ಲೂಟಿ, ದಾನ ಧರ್ಮದ ಹೆಸರಿನಲ್ಲಿ ಕಪ್ಪು ಹಣ ಚೆಲ್ಲಿ ರಾಜಕಾರಣಿಗಳಾದವರು ವಿಧಾನಸೌಧ ಒಳಹೊಕ್ಕು ಏನು ಮಾಡುತ್ತಾರೆ. ಅಲ್ಲಿಯೂ ತಮ್ಮ ವ್ಯಾಪಾರ ಮುಂದವರೆಸುತ್ತಾರೆ ಎಂದು ವ್ಯಂಗ್ಯವಾಡಿದರು.ಪ್ರಜಾಪ್ರಭುತ್ವವನ್ನು ಜಾತಿ ಮತ್ತು ಹಣದಿಂದ ನಿರ್ಧರಿಸುವ ಅಂಟು ರೋಗವನ್ನು ಕಿತ್ತೆಸೆಯಬೇಕು. ರೈತ, ದಲಿತ, ಶೋಷಿತನ ಸಂಕಷ್ಠ ಅರಿವಿರುವವರು ಜನಪ್ರತಿನಿಧಿಗಳಾಗಬೇಕು. ಪ್ರಜಾ ಸಾಹಿತ್ಯ, ಪ್ರಜಾ ಕವಿಗಳು. ಪ್ರಜಾ ಗಾಯಕರು ಇಂದಿನ ಅಗತ್ಯ. ಏಷ್ಯಾ ಖಂಡದಲ್ಲೆ ಹೆಚ್ಚು ಕೆರೆ, ಕುಂಟೆ, ಗೋ ಕುಂಟೆಗಳನ್ನು ಹೊಂದಿದ್ದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಸ್ಥಿತಿ ಇಂದು ದುಃಸ್ಥಿತಿಯಲ್ಲಿ ಎಂದು ವಿಷಾದಿಸಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಎಂ. ಸಿ.ಸುಧಾಕರ್ ಮಾತನಾಡಿ, ಕನ್ನಡ ಶಾಲೆ ಗಳನ್ನು ಮುಚ್ಚಲು ಅವಕಾಶ ನೀಡಬಾ ರದು. ಆಂಗ್ಲ ಭಾಷೆಯ ಅವಶ್ಯಕತೆ ಇದೆ. ಆದರೆ ಎಲ್ಲವೂ ಆಂಗ್ಲ ಭಾಷೆಯಿಂದಲೇ ಸಾಧ್ಯವಿಲ್ಲ. ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ಕೇಂದ್ರ ಸರ್ಕಾರ ಕ್ರಮಕೈ ಗೊಂಡಿದೆ ಎಂದರು.ಸಾಹಿತಿ ದೊಡ್ಡರಂಗೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜರಾವ್, ಜಿ.ಪಂ. ಸದಸ್ಯ ಚಿನ್ನಪ್ಪ, ಉತ್ತನೂರು ರಾಜಮ್ಮ, ಗಾಯಕ ಪಿಚ್ಚಹಳ್ಳಿ ಶ್ರೀನಿವಾಸ್, ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಮುನಿಕೃಷ್ಣಪ್ಪ ಮಾತನಾಡಿದರು.ಜಿ.ಪಂ. ಸದಸ್ಯರಾದ ಉಮಾದೇವಿ, ವೀಣಾ ಗಂಗುಲಪ್ಪ, ಮಂಜುಳಮ್ಮ, ತಾ.ಪಂ. ಅಧ್ಯಕ್ಷ ಶೇಖರಬಾಬು, ಉಪಾಧ್ಯಕ್ಷೆ ಕೆ.ವಿ. ಮೀನಾ, ನಗರಸಭೆ ಅಧ್ಯಕ್ಷೆ  ನಾಗರತ್ನಮ್ಮ, ಉಪಾಧ್ಯಕ್ಷ ಚೌಡರೆಡ್ಡಿ, ಕೃಷಿಕ ಸಮಾಜದ ಅಧ್ಯಕ್ಷ ಗೋವಿಂದಪ್ಪ, ಸುಬ್ಬಾರೆಡ್ಡಿ, ದಲಿತ ಸಂಘಟನೆಯ ಕೆ.ಸಿ.ರಾಜಾಕಾಂತ್,  ಎನ್.ವೆಂಕಟೇಶ್, ಎನ್.ಮುನಿಸ್ವಾಮಿ ಎಎಸ್ಪಿ ರಮೇಶ್‌ಬಾನೂತ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣರೆಡ್ಡಿ, ಪೌರಾಯುಕ್ತ ಡಾ.ರಾಮೇಗೌಡ ಇನ್ನಿತರರು ಉಪಸ್ಥಿತರಿದ್ದರು. ತಹಶೀಲ್ದಾರ್ ಕೃಷ್ಣಮೂರ್ತಿ ಸ್ವಾಗತಿಸಿ, ಬಿಇಒ ಬೈಲಾಂಜನೇಯಪ್ಪ ವಂದಿಸಿದರು.

Post Comments (+)