ಏಕರೂಪ ಶಿಕ್ಷಣ ಪದ್ಧತಿ ಇಂದಿನ ಅಗತ್ಯ: ದೇವನೂರ

7

ಏಕರೂಪ ಶಿಕ್ಷಣ ಪದ್ಧತಿ ಇಂದಿನ ಅಗತ್ಯ: ದೇವನೂರ

Published:
Updated:

ಗುಲ್ಬರ್ಗ: ‘ಎಲ್ಲ ಜಾತಿಗಳ ಮಕ್ಕಳ ನಡುವೆ ಸಾಮಾಜಿಕ ಸಂಬಂಧ ಬೆಸೆಯುವ ಏಕರೂಪದ ಶಿಕ್ಷಣ ಪದ್ಧತಿ ಹಾಗೂ ಮಗುವಿನ ಮನೆಯ ಸಮೀ­ಪವೇ ಶಿಕ್ಷಣ ಲಭಿಸುವ ವ್ಯವಸ್ಥೆ ಇಂದಿನ ಅಗತ್ಯ’ ಎಂದು ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು.ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಕಲಾ ಮತ್ತು ವಾಣಿಜ್ಯ ಮಹಾ­ವಿದ್ಯಾಲಯದಲ್ಲಿ ಸೋಮವಾರ ಡಾ.ಅಂಬೇಡ್ಕರ್‌ ವಿಚಾರ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.ಹಿಂದೆ ಏಕರೂಪದ ಶಾಲೆಗಳು ಅಸ್ತಿತ್ವದಲ್ಲಿದ್ದವು. ಪಟೇಲ, ಪೊಲೀಸ್‌, ಗುಮಾಸ್ತ ಎಲ್ಲರ ಮಕ್ಕಳು ಒಂದಾಗಿ ಕಲಿಯುತ್ತಿದ್ದರು.ಮೇಲ್ವರ್ಗ, ಕೆಳವರ್ಗದ ಮಕ್ಕಳಲ್ಲಿ ಸಾಮಾಜಿಕ ಸಂಬಂಧ ಏರ್ಪಡುತ್ತಿತ್ತು. ಈ ಸಂಬಂಧವೇ ಮಕ್ಕಳು ಕಲಿಯಬೇಕಾದ ದೊಡ್ಡ ವಿದ್ಯೆ. ಆದರೆ, ಇಂದು ಬಣ್ಣ ಬಣ್ಣದ ಕಟ್ಟಡಗಳಲ್ಲಿ, ಹಲವು ಸ್ತರದ ಶಿಕ್ಷಣ ಪದ್ಧತಿ ಜಾರಿಯಲ್ಲಿದೆ. ಇಂತ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಸಾಮಾಜಿಕ ಸಂಬಂಧಗಳ ಮಹತ್ವದ ಅರಿವು ಬೆಳೆಯುದಾರು ಹೇಗೆ?. ಈ ಶಾಲೆಯಲ್ಲಿ ಕಲಿತವರು ಸಂವಿಧಾನ ವಿರೋಧಿ ಭಾರತದ ನಿರ್ಮಾತೃಗಳಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.ನಮ್ಮ ಪ್ರಾಥಮಿಕ ಶಿಕ್ಷಣ ಪದ್ಧತಿ ತಾರತಮ್ಯದಿಂದ ಕೂಡಿದೆ. ಬಡವರಿಗೆ ಒಂದು ಶಾಲೆ, ಶ್ರೀಮಂತರಿಗೆ ಮತ್ತೊಂದು ಶಾಲೆ ಎಂದು ವಿಭಜಿಸಲಾಗಿದೆ. ಮಕ್ಕಳು ಶಾಲೆಯನು್ನ ತಲುಪಲು ಶಾಲಾ ಬಸ್ಸುಗಳನ್ನು ಅವಲಂಬಿಸಿವೆ. ಇಂತಹ ತಾರತಮ್ಯ ಎಸಗುವ ಶಾಲೆಗಳು ದೇಶಕ್ಕೆ ಶಾಪವಾಗಿವೆ. ಈ ಮಾದರಿಯ ಶಿಕ್ಷಣ ಪದ್ಧತಿ ವಿರುದ್ಧ ವಿದ್ಯಾರ್ಥಿಗಳೇ ಚಳವಳಿ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.ನಾಳೆಗೆ ಏನನ್ನೂ ಉಳಿಸಬಾರದು, ಇರುವುದೆಲ್ಲವನ್ನು ಇಂದೇ ಅನುಭವಿಸಬೇಕು ಎಂಬ ಧಾವಂತದಲ್ಲಿ ಬದುಕು ಸಾಗುತ್ತಿದೆ. ಲಭ್ಯವಿರುವ ಸಂಪನ್ಮೂಲ ಖಾಲಿ ಮಾಡುವ ತೀವ್ರತೆ ಎಲ್ಲೆಡೆ ಮನೆಮಾಡಿದೆ. ಈ ಪ್ರವೃತ್ತಿ ಮಕ್ಕಳಲ್ಲಿ ಆತಂಕ ಮೂಡಿಸಿದೆ. ನಾಳಿನ ಬದುಕು ಹೇಗಿರುತ್ತದೆ ಎಂಬ ತಳಮಳ ಹುಟ್ಟುಹಾಕಿದೆ. ಕ್ಲಿಷ್ಟಕರ ಬದುಕಿನ ನಡುವೆಯೂ ಹೊಸ ಸಾಧ್ಯತೆಗಳಿವೆ. ಜಗತ್ತು ಬದಲಾಯಿಸುವ ಶಕ್ತಿ ವಿದ್ಯಾರ್ಥಿ ಸಮೂಹದಲ್ಲಿದೆ. ಸಮಸ್ಯೆಗಳಿಗೆ ಬೆನ್ನು ತೋರಿಸಬೇಡಿ. ಕಷ್ಟಗಳಿಗೆ ಮುಖಾಮುಖಿಯಾಗಿ. ಆತ್ಮವಿಶ್ವಾಸ, ಸವಾಲಿಗೆ ಎದೆಯೊಡ್ಡಿದರೆ ನಿಮ್ಮೊಳಗಿಂದ ಮೇಧಾವಿ ಹುಟ್ಟಿಬರುತ್ತಾರೆ ಎಂದು ಹೇಳಿದರು.ಮಹಾ ಮಾನವತಾವಾದಿ ಬುದ್ಧನ ನೀತಿ ಮರೆತ ಭಾರತ ಶಾಪಗ್ರಸ್ತವಾಗಿದೆ. ಈ ಶಾಪಕ್ಕೆ ವಿಮೋಚನೆ ಸಿಗಬೇಕು. ಜಾತಿ-ಜಾತಿಗಳ ನಡುವಿನ ಕಂದಕ ನಾಶವಾಗಬೇಕು. ಮೇಲ್ವರ್ಗ–ಕೆಳವರ್ಗ ಎಂಬ ಕಲ್ಪನೆಯೇ ಅರ್ಥಹೀನ. ಇಂತಹ ಸಮಾಜ ಕಟ್ಟುವ ಹೊಣೆಗಾರಿಕೆ ಮಕ್ಕಳ ಮೇಲಿದೆ. ಇವರಿಂದ ಮಾತ್ರ ಭಾರತಕ್ಕೆ ಉಳಿಗಾಲ ಎಂದರು.ಭೂಗಳ್ಳರ ಹಾವಳಿ: ಜಾಗತೀಕರಣದ ಪರಿಣಾಮ ಭೂಮಿ ಧ್ವಂಸವಾಗುತ್ತಿದೆ. ಚಿನ್ನದ ಮೊಟ್ಟೆ ಇಡುವ ಭೂಮಿ ಗಣಿಧಣಿಗಳು ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಪಾಲಾಗುತ್ತಿದೆ. ರಾಸಾಯನಿಕ ಬಳಸಿ ಭೂಮಿಯ ಫಲವತ್ತತೆ ಹಾಳು ಮಾಡುತ್ತಿದ್ದೇವೆ. ಮುಂದಿನ ಪೀಳಿಗೆಯವರೂ ಹಕ್ಕು ಹೊಂದಿರುವ ಈ ಭೂಮಿ ವಿನಾಶದತ್ತ ಸಾಗಿದೆ ಎಂದರು.

ಕೆ.ಪಿ.ಇ ಸಂಸ್ಥೆಯ ಕಾರ್ಯದರ್ಶಿ ಮಾರುತಿರಾವ ಡಿ.ಮಾಲೆ, ಪ್ರಾಂಶುಪಾಲ ಡಾ.ಬಸವರಾಜ ಕುಮ್ನೂರ, ಸಂಸ್ಥೆಯ ಸಂಯೋಜಕ ಡಾ.ಎಂ.ಎಸ್‌. ಖರ್ಗೆ, ಮರಿಯಪ್ಪ ಹಳ್ಳಿ, ಶಾಂತಪ್ಪ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry