ಮಂಗಳವಾರ, ಮೇ 24, 2022
30 °C

ಏಕಸದಸ್ಯಪೀಠದ ಆದೇಶ ರದ್ದು: ಭೂಮಾಲೀಕರಿಗೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ನೆಲಗೆದರನಹಳ್ಳಿ ಗ್ರಾಮದ ಸುಮಾರು 40 ಎಕರೆ ಜಮೀನನ್ನು ಕರ್ನಾಟಕ ಗೃಹ ನಿರ್ಮಾಣ ಸಹಕಾರ ಸಂಘವು ಸ್ವಾಧೀನ ಪಡಿಸಿಕೊಂಡು ಹೊರಡಿಸಿದ್ದ ಎರಡು ಅಧಿಸೂಚನೆಗಳನ್ನು ಹೈಕೋರ್ಟ್ ಸೋಮವಾರ ಊರ್ಜಿತಗೊಳಿಸಿದೆ.1988ರ ನ.22 ಹಾಗೂ 1989ರ ಡಿ.4ರಂದು ಹೊರಡಿಸಿದ್ದ ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆಗಳನ್ನು ರದ್ದು ಮಾಡಿ ಏಕಸದಸ್ಯಪೀಠ ಹೊರಡಿಸಿದ್ದ ಆದೇಶವನ್ನು ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ಅಧಿಸೂಚನೆಗಳನ್ನು ಎತ್ತಿಹಿಡಿದಿದೆ.ಇದನ್ನು ಸಂಘದ ಸದಸ್ಯರಿಗಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಇದೇ ವೇಳೆ, ಲಗ್ಗೆರೆ ಬಳಿಯ 39 ಗುಂಟೆ ಜಾಗವನ್ನೂ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಭೂಮಾಲೀಕರು ಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ 2007ರಲ್ಲಿ ಪ್ರತ್ಯೇಕ ಅರ್ಜಿಗಳನ್ನು ಏಕಸದಸ್ಯಪೀಠದ ಮುಂದೆ ಸಲ್ಲಿಸಿದ್ದರು.ಸ್ವಾಧೀನ ಪ್ರಕ್ರಿಯೆ ನಡೆದು ಸುಮಾರು 20 ವರ್ಷಗಳ ಬಳಿಕ ಅರ್ಜಿ ಸಲ್ಲಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದ ಏಕಸದಸ್ಯಪೀಠ, ಲಗ್ಗೆರೆ ಬಳಿಯ ಸ್ವಾಧೀನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಆದರೆ ನೆಲಗೆದರನಹಳ್ಳಿ ಗ್ರಾಮಸ್ಥರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿ, ಅಧಿಸೂಚನೆಗಳನ್ನು ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಂಘವು ಮೇಲ್ಮನವಿ ಸಲ್ಲಿಸಿತ್ತು.ಎರಡು ಪ್ರತ್ಯೇಕ ಅರ್ಜಿಗಳಲ್ಲಿ ವಿಭಿನ್ನ ನಿಲುವು ತೋರಿರುವ ಏಕಸದಸ್ಯಪೀಠದ ಕ್ರಮಕ್ಕೆ ವಿಭಾಗೀಯ ಪೀಠ ಅಚ್ಚರಿ ವ್ಯಕ್ತಪಡಿಸಿದೆ. ಎರಡು ದಶಕಗಳ ನಂತರ ಭೂಮಾಲೀಕರು ಸಲ್ಲಿಸಿರುವ ಅರ್ಜಿಗೆ ಮಾನ್ಯತೆ ಇಲ್ಲ ಎಂದ ನ್ಯಾಯಮೂರ್ತಿಗಳು ಸಂಘದ ಪರವಾಗಿ ಆದೇಶ ಹೊರಡಿಸಿದರು.ನಿತ್ಯಾನಂದ ಭಕ್ತೆ ಅರ್ಜಿ ವಜಾ

ರಾಮನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನಿತ್ಯಾನಂದ ಸ್ವಾಮೀಜಿಗೆ ಗುರುವಾರ ಜಾಮೀನು ಮಂಜೂರು ಮಾಡಿದ್ದರೂ ಪುನಃ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ದೂರಿ ಸ್ವಾಮೀಜಿ ಭಕ್ತೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿತು.ಸ್ವಾಮೀಜಿಯನ್ನು ಅಕ್ರಮ ಬಂಧನದಲ್ಲಿ ಇರಿಸಲಾಗಿದ್ದು, ಅವರನ್ನು ಹಾಜರು ಪಡಿಸಲು ಪೊಲೀಸರಿಗೆ ಆದೇಶಿಸುವಂತೆ ಕೋರಿ ವಳ್ಳಿ ರಾಮನಾಥನ್ ಅರ್ಜಿ ಸಲ್ಲಿಸಿದ್ದರು. ಆದರೆ ಭಾನುವಾರವೇ ಸ್ವಾಮೀಜಿಯನ್ನು ಬಿಡುಗಡೆಗೊಳಿಸಿದ ಕಾರಣ, ಅರ್ಜಿಗೆ ಮಾನ್ಯತೆ ಇಲ್ಲ ಎಂದು ವಜಾಗೊಳಿಸಲಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.