ಬುಧವಾರ, ಮೇ 12, 2021
19 °C
ಮೇಯರ್, ಉಪ ಮೇಯರ್ ಮೀಸಲಾತಿ ವಿವಾದ

ಏಕಸದಸ್ಯ ಪೀಠಕ್ಕೆ ಮತ್ತೆ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳ ಮೀಸಲಾತಿ ವಿವಾದ ಹೈಕೋರ್ಟ್‌ನ ದ್ವಿಸದಸ್ಯ ಪೀಠದಿಂದ ಏಕಸದಸ್ಯ ಪೀಠಕ್ಕೆ ಮತ್ತೆ ವರ್ಗಾವಣೆಗೊಂಡಿದೆ.ಬಿಬಿಎಂಪಿಯ ಮೇಯರ್ ಅಥವಾ ಉಪ ಮೇಯರ್ ಹುದ್ದೆಗಳಲ್ಲಿ ಯಾವುದಾದರೂ ಒಂದನ್ನು ಪರಿಶಿಷ್ಟ ಜಾತಿಗಳ ಅಭ್ಯರ್ಥಿಗೆ ಮೀಸಲಿಡಬೇಕು ಎಂದು ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ಮಧ್ಯಂತರ ಆದೇಶ ಪ್ರಶ್ನಿಸಿ ಬಿಬಿಎಂಪಿ ಸದಸ್ಯಬಿ.ಎಸ್. ಸತ್ಯನಾರಾಯಣ ಅವರು ಮೇಲ್ಮನವಿ ಸಲ್ಲಿಸಿದ್ದರು.ಇದರ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಏಕಸದಸ್ಯ ನ್ಯಾಯಪೀಠದ ಮುಂದೆಯೇ ವಾದ ಮಂಡಿಸುವಂತೆ ಅರ್ಜಿದಾರರ ಪರ ವಕೀಲರಿಗೆ ನಿರ್ದೇಶನ ನೀಡಿದೆ. `ಏಕಸದಸ್ಯ ಪೀಠ ನೀಡಿರುವುದು ಮಧ್ಯಂತರ ಆದೇಶ ಮಾತ್ರ. ಅದನ್ನು ಪ್ರಶ್ನಿಸಿ ಸತ್ಯನಾರಾಯಣ ಅವರು ಅಲ್ಲಿಯೇ ಅರ್ಜಿ ಸಲ್ಲಿಸಲಿ. ಅರ್ಜಿಯನ್ನು ಪೀಠ ತ್ವರಿತ ವಿಚಾಣೆಗೆ ಕೈಗೆತ್ತಿಕೊಳ್ಳುತ್ತದೆ' ಎಂದು ಆದೇಶದಲ್ಲಿ ಹೇಳಲಾಗಿದೆ.ಪ್ರಕರಣ ಏನು: ಲೋಕೇಶ ವಿ. ನಾಯಕ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರು, `ಮೇಯರ್ ಅಥವಾ ಉಪ ಮೇಯರ್ ಹುದ್ದೆಗಳಲ್ಲಿ ಯಾವುದಾದರೂ ಒಂದನ್ನು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಿಡಬೇಕು' ಎಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯವರಿಗೆ ಏಪ್ರಿಲ್ 19ರಂದು ನಿರ್ದೇಶನ ನೀಡಿದ್ದರು.ಇದನ್ನು ಪ್ರಶ್ನಿಸಿದ ಸತ್ಯನಾರಾಯಣ, `ಮೇಯರ್ ಹುದ್ದೆಯನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮೀಸಲಿಟ್ಟು ಸರ್ಕಾರ ಫೆಬ್ರುವರಿ 8ರಂದೇ ಆದೇಶ ಹೊರಡಿಸಿದೆ. ಆದರೆ ನಾಯಕ್ ಅವರು ಏಕಸದಸ್ಯ ಪೀಠಕ್ಕೆ (ನ್ಯಾ. ಬೋಪಣ್ಣ) ಈ ವಿಚಾರ ತಿಳಿಸಿಲ್ಲ. ಅದಲ್ಲದೆ, ಮೇಯರ್ ಮತ್ತು ಉಪ ಮೇಯರ್ ಹುದ್ದೆಗೆ ಚುನಾವಣಾ ಪ್ರಕ್ರಿಯೆ ಆರಂಭವಾದ ನಂತರ ಅದರಲ್ಲಿ ಮಧ್ಯಪ್ರವೇಶ ಮಾಡುವ ಮೂಲಕ, ಏಕಸದಸ್ಯ ಪೀಠ ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘಿಸಿದೆ' ಎಂದು ದೂರಿದರು.`ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳನ್ನು ಒಂದೇ ಘಟಕವಾಗಿ ಪರಿಗಣಿಸಿ, ಜನಸಂಖ್ಯೆಯ ಪ್ರಮಾಣ ಆಧರಿಸಿ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಕಲ್ಪಿಸಬೇಕಾಗುತ್ತದೆ. ಬಿಬಿಎಂಪಿಯನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಮೀಸಲಾತಿ ಪಟ್ಟಿ ಸಿದ್ಧಪಡಿಸುವುದು ನಿಯಮದ ಉಲ್ಲಂಘನೆ. ಶೇಕಡ 5ಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಸಮುದಾಯಕ್ಕೆ ಮಾತ್ರ ಮೀಸಲಾತಿ ದೊರೆಯುತ್ತದೆ' ಎಂದು ಅರ್ಜಿದಾರರ ಪರ ವಕೀಲ ಅಶೋಕ ಹಾರನಹಳ್ಳಿ ವಾದಿಸಿದರು. ಮೇಲ್ಮನವಿಯನ್ನು ಇತ್ಯರ್ಥಪಡಿಸಲಾಗಿದೆ.ಮೇಲ್ಮನವಿಯನ್ನು ಹಿಂಪಡೆದ ಸರ್ಕಾರ

ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಸರ್ಕಾರ ಕೂಡ ಮೇಲ್ಮನವಿ ಸಲ್ಲಿಸಿತ್ತು. ಸತ್ಯನಾರಾಯಣ ಅವರ ಅರ್ಜಿಯ ಜೊತೆಗೇ ವಿಭಾಗೀಯ ಪೀಠ ಇದನ್ನೂ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಆದರೆ ವಿಚಾರಣೆ ವೇಳೆ ಹಾಜರಾದ ಸರ್ಕಾರದ ಪರ ವಕೀಲರು, ಮೇಲ್ಮನವಿಯನ್ನು ಹಿಂಪಡೆಯುವುದಾಗಿ ತಿಳಿಸಿದರು. ಇದನ್ನು ಪೀಠ ಮಾನ್ಯ ಮಾಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.