ಶನಿವಾರ, ಮೇ 15, 2021
25 °C
ರಾಜ್ಯಮಟ್ಟದ ವ್ಯಂಗ್ಯಚಿತ್ರಕಾರರ ಕಾರ್ಯಾಗಾರ

`ಏಕಾಗ್ರತೆ, ನಿಖರತೆಯಿಂದ ಯಶಸ್ಸು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಏಕಾಗ್ರತೆ, ನಿಖರತೆಯಿಂದ ಯಶಸ್ಸು'

ಶಿವಮೊಗ್ಗ: ವ್ಯಂಗ್ಯಚಿತ್ರಕಾರ ಏಕಾಗ್ರತೆ, ವೇಗ ಮತ್ತು ನಿಖರತೆ ಮೈಗೂಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಹಂ.ಪ.ನಾಗರಾಜಯ್ಯ ಅಭಿಪ್ರಾಯಪಟ್ಟರು.ತೀರ್ಥಹಳ್ಳಿಯ ಕುಪ್ಪಳಿಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ ಹಾಗೂ ವಾರ್ತಾ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ವ್ಯಂಗ್ಯಚಿತ್ರಕಾರರ ಮೂರು ದಿನಗಳ ಕಾರ್ಯಾಗಾರವನ್ನು ಶುಕ್ರವಾರ, ವ್ಯಂಗ್ಯಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ವ್ಯಂಗ್ಯಚಿತ್ರಕಾರನ ಕಣ್ಣು ಕ್ಯಾಮೆರಾ ಆಗಿರಬೇಕು. ವ್ಯಕ್ತಿಯ ವೈಶಿಷ್ಟ್ಯ, ಸ್ವಾರಸ್ಯಗಳನ್ನು ಕ್ಷಣಮಾತ್ರದಲ್ಲಿ ಗುರುತಿಸಿ ಗೆರೆಗಳಲ್ಲಿ ಮೂಡಿಸುವ ಕಲೆ ಕರಗತವಾಗಿರಬೇಕು ಎಂದು ಹೇಳಿದರು.`ಪತ್ರಿಕೆಗೂ ವ್ಯಂಗ್ಯಚಿತ್ರಕ್ಕೂ ಅವಿನಾಭಾವ ಸಂಬಂಧ ಇದೆ. ಪತ್ರಿಕೆಯಲ್ಲಿ ವ್ಯಂಗ್ಯಚಿತ್ರ ಇಲ್ಲದಿದ್ದರೆ ಅದು ಒಣಭೂಮಿಯಾಗುತ್ತದೆ; ವ್ಯಂಗ್ಯಚಿತ್ರ ಇದ್ದರೆ ಕಲ್ಪವೃಕ್ಷ ನೆಟ್ಟಂತೆ ಆಗುತ್ತದೆ' ಎಂದು ವಿಶ್ಲೇಷಿಸಿದರು.ಗೆರೆಗಳಲ್ಲಿ ಲೋಕಸೃಷ್ಟಿಸುವ ವ್ಯಂಗ್ಯಚಿತ್ರಕಾರರು ವಕ್ರೋಕ್ತಿಜೀವಿಗಳು ಎಂದು ಕರೆದ ಪ್ರೊ.ನಾಗರಾಜಯ್ಯ, ವಕ್ರದ ಮೂಲ ಅರ್ಥ ಸೌಂದರ‌್ಯ. ಅಂಕು-ಡೊಂಕು, ಬಾಹು-ಬಳಕುಗಳಲ್ಲಿ ಸೌಂದರ್ಯ ಅಡಗಿದ್ದು ಅದನ್ನು ಬಿಂಬಿಸುವವರು ವ್ಯಂಗ್ಯಚಿತ್ರಕಾರರು. ಒಂದು ರೀತಿಯಲ್ಲಿ ಸಾಹಿತಿಗಳು, ವ್ಯಂಗ್ಯಚಿತ್ರಕಾರರು ಅಣ್ಣ-ತಮ್ಮ ಇದ್ದಂತೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ.ಪೊನ್ನಪ್ಪ ಮಾತನಾಡಿ, ದಕ್ಷಿಣ ವಲಯ ವ್ಯಂಗ್ಯಚಿತ್ರಕಾರರ ಕಾರ್ಯಾಗಾರವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳುವ ಚಿಂತನೆ ಇದೆ. ಕೇರಳ, ಚೆನ್ನೈನಲ್ಲಿ ಹೆಚ್ಚಿನ ಸಂಖ್ಯೆಯ ವ್ಯಂಗ್ಯಚಿತ್ರಕಾರರಿದ್ದಾರೆ. ಅವರೆಲ್ಲರನ್ನು ಸೇರಿಸಿ ಕಾರ್ಯಾಗಾರ ನಡೆಸುವ ಆಲೋಚನೆ ಮಾಧ್ಯಮ ಅಕಾಡೆಮಿಗೆ ಇದೆ ಎಂದರು.ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷ ಎಸ್.ವಿ.ಪದ್ಮನಾಭ ಮಾತನಾಡಿ, ವ್ಯಂಗ್ಯಚಿತ್ರ ಕ್ಷೇತ್ರಕ್ಕೆ ಹೊಸ ಪ್ರತಿಭೆಗಳು ಬರಲಿ ಎನ್ನುವ ದೃಷ್ಟಿಯಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.ಸಮಾರಂಭದಲ್ಲಿ ವ್ಯಂಗ್ಯಚಿತ್ರಕಾರ ಬಿ.ಜಿ.ಗುಜ್ಜಾರಪ್ಪ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳು ಪ್ರಕಾಶ್, ಖಜಾಂಚಿ ಮನುದೇವ್ ಉಪಸ್ಥಿತರಿದ್ದರು.ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಹಮೀದ್ ಖಾನ್ ವಂದಿಸಿದರು. ವ್ಯಂಗ್ಯಚಿತ್ರಕಾರ ನಟರಾಜ ಅರಳಿಸುರಳಿ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.