ಏಕೀಕರಣಕ್ಕೆ ಶ್ರಮಿಸಿದವರು ಸ್ಮರಣೀಯ

7

ಏಕೀಕರಣಕ್ಕೆ ಶ್ರಮಿಸಿದವರು ಸ್ಮರಣೀಯ

Published:
Updated:
ಏಕೀಕರಣಕ್ಕೆ ಶ್ರಮಿಸಿದವರು ಸ್ಮರಣೀಯ

ಬಳ್ಳಾರಿ: ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದವರನ್ನೂ ಸದಾ ಸ್ಮರಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್ ಸಲಹೆ ಅಭಿಪ್ರಾಯಪಟ್ಟರು.ನಗರದ ಮುನಿಸಿಪಲ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ  ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಜತೆಗೆ ಕರ್ನಾಟಕದ ಏಕೀಕರಣಕ್ಕೆ ನಡೆದ ಹೋರಾಟವೂ ಪ್ರಮುಖ. ಕನ್ನಡ ಮಾತನಾಡುವ ಜನರನ್ನು ಒಂದೇ ಆಡಳಿತದ ಅಡಿ ತರಲು ನಡೆದ ಏಕೀಕರಣ ಹೋರಾಟವನ್ನು ಮರೆಯ ಬಾರದು ಎಂದು ಅವರು ಸಹೆ ನೀಡಿದರು.ಬೇರೆಬೇರೆ ಆಡಳಿತ ವಿಭಾಗಗಳಲ್ಲಿ ಹಂಚಿಹೋಗಿದ್ದ ಕನ್ನಡ ನಾಡಿನಲ್ಲಿ ಕನ್ನಡ ಮಾತನಾಡುವ ಜನರೇ ಹೆಚ್ಚಾಗಿದ್ದ ಪ್ರದೇಶಗಳೆಲ್ಲಾ ಒಂದಾಗಿ, 1956ರ ನವೆಂಬರ್ 1ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದು, ಈಗ ಕರ್ನಾಟಕ ವಾಗಿದೆ.  ಏಕೀಕರಣ ಹೋರಾಟದಲ್ಲಿ ಹುತಾತ್ಮರಾದ ರಾಜ್ಯದ ಏಕೈಕ ವ್ಯಕ್ತಿ ಬಳ್ಳಾರಿ ಜಿಲ್ಲೆಯ  ಕಪ್ಪಗಲ್ ರಂಜಾನ್‌ಸಾಬ್ ಎಂಬುದು ಅವಿಸ್ಮರಣೀಯ ಎಂದು ಅವರು ತಿಳಿಸಿದರು.ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ದೊರೆತಿರುವುದು ಅಭಿಮಾನದ ಸಂಗತಿ. ಕನ್ನಡಕ್ಕೆ 2000 ವರ್ಷಗಳ ಇತಿಹಾಸವಿದ್ದು, ಕರ್ನಾಟಕ ಕೇವಲ ಒಂದು ಭೂ- ಪ್ರದೇಶಕ್ಕಷ್ಟೇ ಸೀಮಿತ ವಾಗಿಲ್ಲ. ಕರ್ನಾಟಕವೆಂದರೆ ಒಂದು ಸಂಸ್ಕೃತಿ, ಜನ ಸಮುದಾಯ, ಜೀವನ ಪದ್ಧತಿಯಾಗಿದೆ ಎಂದು ಅವರು ಹೇಳಿದರು.ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಅಪಾರವಾಗಿದ್ದು, ಅಂತೆಯೇ 8 ಜನ ಕನ್ನಡ ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿರುವುದು ಕನ್ನಡದ ಹೆಮ್ಮೆ ಎಂದರು.ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಹುಯಿಲಗೋಳ ನಾರಾಯಣರಾವ್, ಆಚಾರ್ಯ ಬಿ.ಎಂ. ಶ್ರೀಕಂಠಯ್ಯ, ಕುವೆಂಪು, ಅ.ನ. ಕೃಷ್ಣರಾಯರು, ಆಲೂರು ವೆಂಕಟ ರಾಯರು, ಗಂಗಾಧರ ದೇಶಪಾಂಡೆ, ಡೆಪ್ಯುಟಿ ಚೆನ್ನಬಸಪ್ಪ, ಮಂಗಳವೇಡೆ ಶ್ರೀನಿವಾಸರಾಯರು, ಚಿತ್ರದುರ್ಗದ ಎಸ್. ನಿಜಲಿಂಗಪ್ಪ, ಹುಲ್ಲೂರು ಶ್ರೀನಿವಾಸ್ ಜೋಯಿಸರು, ಕೆಂಗಲ್ ಹನುಮಂತಯ್ಯ, ಗೋರೂರು ರಾಮ ಸ್ವಾಮಿ ಅಯ್ಯಂಗಾರ್, ಹಾರನಹಳ್ಳಿ ರಾಮಸ್ವಾಮಿ, ಕಡಿದಾಳ್ ಮಂಜಪ್ಪ, ಪಾಟೀಲ್ ಪುಟ್ಟಪ್ಪ, ಎಚ್.ಎಸ್. ದೊರೆಸ್ವಾಮಿ ಮತ್ತಿತರರ ಹೋರಾಟ ಶ್ಲಾಘನೀಯ. ಜಿಲ್ಲೆಯ ಕಡಪ ರಾಘವೇಂದ್ರರಾವ್, ಹರಗಿನಡೋಣಿ ಸಣ್ಣಬಸವನ ಗೌಡ, ಟೇಕೂರು ಸುಬ್ರಮಣ್ಯ, ಉತ್ತಂಗಿ ಚೆನ್ನಪ್ಪ, ಕೋ. ಚೆನ್ನಬಸಪ್ಪ,  ವೈ.ಮಹಾಬಲೇಶ್ವರಪ್ಪ, ಅಲ್ಲಂ ಸುಮಂಗಳಮ್ಮ, ಟಿ.ಎಚ್.ಎಂ. ಸದಾಶಿವಯ್ಯ ಮತ್ತಿತರ ಏಕೀಕರಣ ಹೋರಾಟಗಾರರನ್ನು, ಲೇಖಕರನ್ನು, ಸಂಘ- ಸಂಸ್ಥೆಗಳನ್ನು, ಪತ್ರಿಕೋದ್ಯಮಿ ಗಳನ್ನು ಸ್ಮರಿಸುವುದು ಎಲ್ಲರ ಕರ್ತವ್ಯ ಎಂದು ಅವರು ತಿಳಿಸಿದರು.ಬಳ್ಳಾರಿ ಜಿಲ್ಲೆಯು ಪ್ರಾಗೈತಿಹಾಸಿಕ ಕಾಲದಿಂದಲೂ ಮಾನವನ ವಾಸ ಸ್ಥಳವಾಗಿತ್ತು ಎನ್ನುವುದಕ್ಕೆ ಸಂಗನಕಲ್ಲು ಬೆಟ್ಟದ ಅವಶೇಷಗಳೇ ಸಾಕ್ಷಿ. ಜಿಲ್ಲೆಯು ಶಾಸನ, ದೇವಾಲಯ, ಸಾಹಿತ್ಯಿಕ, ಸಾಂಸ್ಕೃತಿಕ, ಆರ್ಥಿಕ ಸಂಪತ್ತನ್ನು ಹೊಂದಿ ರಾಜ್ಯದಲ್ಲೇ ಪ್ರಮುಖ ಜಿಲ್ಲೆ ಯಾಗಿದೆ. ಗಡಿ ಜಿಲ್ಲೆಯಾದ ಬಳ್ಳಾರಿಯು ದ್ವಿಭಾಷಾ ಸಂಸ್ಕೃತಿಗೆ ಒಳಗಾಗಿ ಭಾಷಾ ಸಾಮರಸ್ಯ ಬದುಕಿನ ದ್ಯೋತಕವಾಗಿದೆ ಎಂದು ಅವರು ಹೇಳಿದರು.ಕನ್ನಡದ ಪ್ರಥಮ ಗದ್ಯಕೃತಿಯನ್ನು ರಚಿಸಿದ ಶಿವಕೋಟಾಚಾರ್ಯರು ಬಳ್ಳಾರಿ ಜಿಲ್ಲೆಯ ಕೋಗಳಿಯವರು ಎನ್ನುವುದು ಬಹುಜನ ವಿದ್ವಾಂಸರ ಅಭಿಪ್ರಾಯವಾಗಿದ್ದು, ವಚನ ಸಾಹಿತ್ಯವನ್ನು ಮೊದಲ ಬಾರಿಗೆ ಬಳ್ಳಾರಿಯಲ್ಲಿಯೇ ಪ್ರಕಟಿಸಲಾಯಿತು. ಮಂಗಳೂರು ಸಮಾಚಾರ ಕನ್ನಡ ಪತ್ರಿಕೆ ಬಳ್ಳಾರಿಯಲ್ಲಿಯೇ ಪ್ರಥಮ ಮುದ್ರಣ ಕಂಡಿತ್ತು ಎನ್ನುವುದು ಹೆಮ್ಮೆಯ ವಿಷಯ. ಚಾಮರಸ, ಲಕ್ಕಣ್ಣ ದಂಡೇಶ, ಮೊಗ್ಗೆಯ ಮಾಯಿದೇವ ಹಾಗೂ ಹರಿಹರ, ರಾಘವಾಂಕ, ಪುರಂದರ ದಾಸರು, ಕನಕದಾಸರು- ಇತ್ತೀಚಿನ ಬೀಚಿಯವರು, ವೈ.ನಾಗೇಶ ಶಾಸ್ತ್ರಿ, ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಯವರು, ಜನಪದ ತಜ್ಞರಾದ ಮುದೇನೂರು ಸಂಗಣ್ಣ, ಕುಂ. ವೀರಭದ್ರಪ್ಪ ಬಳ್ಳಾರಿ ಜಿಲ್ಲೆಯ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಸರಳವಾದ ಸಂಸ್ಕೃತಿ, ಪರಿಸರ ಕಾಳಜಿ, ಪ್ರಾಮಾಣಿಕತೆ ಹಾಗೂ ಸಮಭಾವಗಳ ಮೌಲ್ಯ ನಾವು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದು ಅವರು ಕಿವಿಮಾತು ಹೇಳಿದರು.ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ಸ್ತಬ್ಧಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದರು.

ವಿಧಾನ ಪರಿಷತ್ ಸದಸ್ಯರಾದ ಎನ್. ತಿಪ್ಪಣ್ಣ, ಕೆ.ಸಿ. ಕೊಂಡಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅರುಣಾ ತಿಪ್ಪಾರೆಡ್ಡಿ, ಮೇಯರ್ ಪಾರ್ವತಿ ಇಂದುಶೇಖರ್, ಬುಡಾ ಅಧ್ಯಕ್ಷ ಡಿ.ವಿನೋದ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ  ಮಂಜುನಾಥ ನಾಯ್ಕ, ಉಪ ವಿಭಾಗಾಧಿಕಾರಿ ಶಶಿಕಾಂತ್ ಸೆಂಥಿಲ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಮತ್ತಿತರರು ಉಪಸ್ಥಿತರಿದ್ದರು. ಸುಬ್ಬಣ್ಣ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry