ಏಕೀಕರಣದ ರೂವಾರಿ ಕೆಂಗಲ್: ಪ್ರಣವ್

7

ಏಕೀಕರಣದ ರೂವಾರಿ ಕೆಂಗಲ್: ಪ್ರಣವ್

Published:
Updated:

ಬೆಂಗಳೂರು: ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಪ್ರಾಂತ್ಯಗಳಾಗಿ ಹಂಚಿಹೋಗಿದ್ದ ಭಾರತದ ಏಕೀಕರಣ ಪೂರ್ಣಗೊಳ್ಳುವ ಮುನ್ನವೇ ಕರ್ನಾಟಕದ ಏಕೀಕರಣ ಸಾಧ್ಯವಾಗಿಸಿದ ರೂವಾರಿ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮುಕ್ತ ಕಂಠದಿಂದ ಶ್ಲಾಘಿಸಿದರು.ಕೆಂಗಲ್ ಹನುಮಂತಯ್ಯ ಸ್ಮಾರಕ ಟ್ರಸ್ಟ್ ವಿಧಾನಸೌಧದಲ್ಲಿ ಶನಿವಾರ ಆಯೋಜಿಸಿದ್ದ ಹನುಮಂತಯ್ಯನವರ 104ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಮುಖರ್ಜಿ, `ಕೆಂಗಲ್ ಅವರು ತಮ್ಮ 44ನೇ ವಯಸ್ಸಿನಲ್ಲೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.ಆ ಕಾಲಘಟ್ಟದಲ್ಲಿ ದೇಶದ ಇತರ ರಾಜ್ಯಗಳ ಮುಖ್ಯಮಂತ್ರಿಗಳು ಕೆಂಗಲ್ ಅವರಿಗಿಂತ ಹಿರಿಯರಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ಮುಖ್ಯಮಂತ್ರಿಯ ಸ್ಥಾನಕ್ಕೇರಿದ್ದು ಕೆಂಗಲ್ ಅವರ ಪ್ರತಿಭೆಗೆ ಸಾಕ್ಷಿ~ ಎಂದು ನೆನಪಿಸಿಕೊಂಡರು.ದೇಶಕ್ಕೆ ದೊರೆತ ಸ್ವಾತಂತ್ರ್ಯವನ್ನು ಬಳಸುವುದು ಹೇಗೆ ಎಂಬ ಕುರಿತು ಮಹಾತ್ಮ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರೂ ಅವರು ಆಡಿರುವ ಮಾತುಗಳನ್ನು ಸಾಕಾರಗೊಳಿಸಲು ಬೆಂಗಳೂರಿನಲ್ಲಿ ವಿಧಾನಸೌಧ ನಿರ್ಮಿಸಿದರು. ಇದನ್ನು ನಾಡಿನ ವಾಸ್ತುಶಿಲ್ಪದ ಭವ್ಯತೆಯನ್ನು ಪ್ರದರ್ಶಿಸುವುದಕ್ಕೆ ಮಾತ್ರ ಸೀಮಿತವಾಗಿಸಲಿಲ್ಲ, ಆಗಷ್ಟೇ ಸ್ವಾತಂತ್ರ್ಯ ಪಡೆದಿದ್ದ ನಾಡಿನ ಜನತೆಯ ಅಭಿವೃದ್ಧಿಗಾಗಿ ಕೆಂಗಲ್ ಇದನ್ನು ಬಳಸಿದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.`1979ರಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ನಲ್ಲಿ ಸಮಸ್ಯೆ ಎದುರಾದಾಗ ಕೆಂಗಲ್ ಅವರ ಜೊತೆ ಮಾತುಕತೆ ನಡೆಸಲು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ನನ್ನನ್ನು ಇಲ್ಲಿಗೆ (ಬೆಂಗಳೂರಿಗೆ) ಕಳುಹಿಸುತ್ತಿದ್ದರು. ಹಸಿವು, ಕಂದಾಚಾರ, ಅನೈಕ್ಯತೆಗಳಿಂದ ಮುಕ್ತವಾದ ಭಾರತದ ನಿರ್ಮಾಣವೇ ಅವರ ಗುರಿ ಎಂಬುದು ಆ ದಿನಗಳಲ್ಲಿ ನನ್ನ ಮತ್ತು ಅವರ ಭೇಟಿಯಿಂದ ತಿಳಿಯಿತು~ ಎಂದು ಹೇಳಿದರು.ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲೇ ಅವರು ಜನಪ್ರತಿನಿಧಿಗಳ ಉತ್ತದಾಯಿತ್ವ ಕುರಿತು ಚಿಂತನೆ ನಡೆಸಿದ್ದರು. ಆಗ ಕೇವಲ ಶಾಸನ ಸಭೆಗೆ ಮಾತ್ರ ಉತ್ತರದಾಯಿ ಆಗಿದ್ದ ಜನಪ್ರತಿನಿಧಿಗಳು ಜನಸಾಮಾನ್ಯರಿಗೂ ಉತ್ತರದಾಯಿ ಆಗುವಂಥ ಸ್ಥಿತಿ ನಿರ್ಮಾಣವಾಗಬೇಕು ಎಂಬ ಅಂಶ ಅವರು ಆಯೋಗದ ಅಧ್ಯಕ್ಷರಾಗಿ ನೀಡಿದ ವರದಿಯಲ್ಲಿ ಇತ್ತು ಎಂದರು.`ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಿಂದ ಬಂದ ಕೆಂಗಲ್ ಅವರಿಗೆ ಸರ್ಕಾರದ ಕೆಲಸ ದೇವರ ಕೆಲಸ ಎಂದು ಘೋಷಿಸುವ ನೈತಿಕ ಶಕ್ತಿ ಇತ್ತು. ಆದರೆ ರಾಜಕಾರಣಿಗಳು ಜೈಲು ಪಾಲಾಗುತ್ತಿರುವ ಈ ಕಾಲದಲ್ಲಿ ಅಂಥ ಶಕ್ತಿ ಯಾರಿಗಿದೆ? ಕೆಂಗಲ್ ಮಾರ್ಗದರ್ಶನದಂತೆ ಸಾಗುವುದೇ ಅವರಿಗೆ ತೋರಬಹುದಾದ ಗೌರವ~ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.ಕೆಂಗಲ್ ಅವರ ನೆನಪಿನಲ್ಲಿ ಅಂಚೆ ಚೀಟಿ ಹೊರತರುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಟ್ರಸ್ಟ್‌ನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, `ಈ ಕುರಿತು ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧ~ ಎಂದು ಪ್ರಕಟಿಸಿದರು. ಆದರೆ, `ಕೆಂಗಲ್ ಜನ್ಮದಿನವನ್ನು ರೈತರ ದಿನ ಎಂದು ಘೋಷಿಸಬೇಕು~ ಎಂಬ ಮನವಿಗೆ ಮುಖ್ಯಮಂತ್ರಿಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯಿಲಿ ಮಾತನಾಡಿ, `ಕೆಂಗಲ್ ಅವರು ಐವತ್ತು ವರ್ಷ ನಿರಂತರವಾಗಿ ದಿನಚರಿ ಬರೆದಿದ್ದಾರೆ. ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು~ ಎಂದು ಮುಖ್ಯಮಂತ್ರಿಗಳನ್ನು ಕೋರಿದರು.ಕೆಂಗಲ್ ಅವರ ಮೊಮ್ಮಗ ಹಾಗೂ ಟ್ರಸ್ಟ್‌ನ ಸಂಚಾಲಕ ಕೆಂಗಲ್ ಶ್ರೀಪಾದ ರೇಣು ಮಾತನಾಡಿ, `ರಾಷ್ಟ್ರೀಯವಾದಿ ಮನೋಭಾವದ ಅವರು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದರು. ಕನ್ನಡ ಮತ್ತು ಸಂಸ್ಕೃತಿಗಾಗಿ ಪ್ರತ್ಯೇಕ ಇಲಾಖೆ ಆರಂಭಿಸಿದ ಮೊದಲಿಗರೂ ಅವರೇ~ ಎಂದು ಸ್ಮರಿಸಿದರು.ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಸಂಸದ ಧ್ರುವನಾರಾಯಣ್, ಕಾಂಗ್ರೆಸ್ ಮುಖಂಡರಾದ ಅಲ್ಲಂ ವೀರಭದ್ರಪ್ಪ, ಎಚ್.ಎಂ. ರೇವಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸಭಾಂಗಣಕ್ಕೆ ಪ್ರವೇಶಿಸಲು ಪೊಲೀಸರು ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಕೆಲವರು ಘೋಷಣೆ ಕೂಗಿದ ಪ್ರಸಂಗವೂ ನಡೆಯಿತು. ಸಭಾಂಗಣ ಕಿಕ್ಕಿರಿದು ತುಂಬಿದ್ದ ಕಾರಣ ಕೆಲವರಿಗೆ ಪ್ರವೇಶ ನಿರಾಕರಿಸಲಾಯಿತು ಎಂದು ಪೊಲೀಸರು ಸ್ಪಷ್ಟನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry