ಮಂಗಳವಾರ, ಜೂನ್ 22, 2021
27 °C

ಏಕೆ ಈ ಮೋಹ...

ಮಹಮ್ಮದ್‌ ನೂಮಾನ್‌ Updated:

ಅಕ್ಷರ ಗಾತ್ರ : | |

‘ರಿಂಗ್‌ನೊಳಗೆ ನಿಂತು ಬಾಕ್ಸಿಂಗ್‌ ಮಾಡುವುದಕ್ಕಿಂತ ರ್‍್ಯಾಂಪ್‌ನಲ್ಲಿ ಹೆಜ್ಜೆ ಹಾಕುವುದು ಸುಲಭ. ಬಾಕ್ಸಿಂಗ್‌ನಲ್ಲಿ ಎದುರಾಳಿಯ ಜೊತೆ ಹೊಡೆದಾಡಬೇಕು. ಆದರೆ ಇಲ್ಲಿ ನಡೆದಾಡುವುದಷ್ಟೆ ಕೆಲಸ’ ಮುಂಬೈನಲ್ಲಿ ಹೋದ ವಾರ ನಡೆದ ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ಹೊಸ ವಿನ್ಯಾಸದ ವಸ್ತ್ರತೊಟ್ಟು ರ್‍್ಯಾಂಪ್‌ನಲ್ಲಿ ಹೆಜ್ಜೆಯಿಟ್ಟ ಬಾಕ್ಸಿಂಗ್‌ ತಾರೆ ವಿಜೇಂದರ್‌ ಸಿಂಗ್‌ ಹೇಳಿದ ಮಾತಿದು.2008ರ ಬೀಜಿಂಗ್‌ ಒಲಿಂಪಿಕ್ಸ್‌ ಕೂಟದಲ್ಲಿ ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ವಿಜೇಂದರ್‌ಗೆ ಬಾಕ್ಸಿಂಗ್‌ ಮೇಲಿನ ಪ್ರೀತಿ ಕಡಿಮೆಯಾಗಿದೆಯೇ? ಅಥವಾ ಫ್ಯಾಷನ್‌ ಲೋಕ ಅವರನ್ನು ಆಕರ್ಷಿಸುತ್ತಿದೆಯೇ? ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಒಲಿಂಪಿಕ್‌ ಪದಕ ತಂದಿತ್ತ ಮೊದಲ ಕ್ರೀಡಾಪಟು ಎಂಬ ಗೌರವ ವಿಜೇಂದರ್‌ ಹೆಸ ರಿನಲ್ಲಿದೆ. ಇಂತಹ ಬಾಕ್ಸರ್‌ ಇದೀಗ ಮಾಡೆಲಿಂಗ್‌ ಜಗತ್ತಿನಲ್ಲಿ ಬೇರೂರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.ವಿಜೇಂದರ್‌ ಬಾಲಿವುಡ್‌ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಅಕ್ಷಯ್‌ ಕುಮಾರ್‌ ಜೊತೆ ಅವರು ನಟಿಸಿರುವ ಚಿತ್ರ ‘ಪಗ್ಲಿ’ ಜೂನ್‌ ತಿಂಗಳಲ್ಲಿ ತೆರೆ ಕಾಣಲಿದೆ. ಒಟ್ಟಿನಲ್ಲಿ ಫ್ಯಾಷನ್‌ ಹಾಗೂ ಬಣ್ಣದ ಲೋಕ ವಿಜೇಂದರ್‌ ಅವರನ್ನು ಸೆಳೆದುಕೊಂಡಿರುವುದು ಸ್ಪಷ್ಟ. ಅದರಿಂದ ಹೊರಬರಲು ಅವರು ಕಷ್ಟಪಡುತ್ತಿದ್ದಾರೆ.ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಬಳಿಕ ವಿಜೇಂದರ್‌ ಜನಪ್ರಿಯತೆ ಇದ್ದಕ್ಕಿದ್ದಂತೆ ಹೆಚ್ಚಿತು. ಇದರಿಂದ ಮಾಡೆಲಿಂಗ್‌ ಹಾಗೂ ಜಾಹೀರಾತುಗಳಲ್ಲಿ ಅವರಿಗೆ ಬೇಡಿಕೆ ಹೆಚ್ಚಾಯಿತು. ಈ ಕಾರಣದಿಂದಲೇ ಏನೋ, ರಿಂಗ್‌ನಲ್ಲಿ ವಿಜೇಂದರ್ ಪ್ರದರ್ಶನ ಮಟ್ಟದಲ್ಲಿ ಕುಸಿತ ಕಂಡಿತು. ಬೀಜಿಂಗ್‌ನಲ್ಲಿ ಪಡೆದ ಪದಕವನ್ನು ಲಂಡನ್‌ ಒಲಿಂಪಿಕ್ಸ್‌ನಲ್ಲಿ ಉಳಿಸಿಕೊಳ್ಳುವಲ್ಲಿ ವಿಫಲರಾದರು. ಲಂಡನ್‌ ಒಲಿಂಪಿಕ್ಸ್‌ ಬಳಿಕ ಅವರಿಂದ ಹೇಳಿಕೊಳ್ಳುವಂತಹ ಸಾಧನೆ ಮೂಡಿಬಂದಿಲ್ಲ.ಈ ನಡುವೆ ಮಾದಕ ದ್ರವ್ಯ ವಿವಾದದಲ್ಲೂ ಅವರ ಹೆಸರು ಕೇಳಿಬಂದಿತ್ತು. ಚಲನಚಿತ್ರದ ಶೂಟಿಂಗ್‌ ಹಾಗೂ ರ್‍್ಯಾಂಪ್‌ನಲ್ಲಿ ಹೆಜ್ಜೆಯಿಡಲು ಅಧಿಕ ಸಮಯ ವ್ಯಯಿಸುತ್ತಿರುವ ಕಾರಣ ತರಬೇತಿಯತ್ತ ಗಮನ ನೀಡಲು ಆಗುತ್ತಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ವಿಜೇಂದರ್‌ ಅವರಿಂದ ಬಾಕ್ಸಿಂಗ್‌ನಲ್ಲಿ ಹೆಚ್ಚಿನ ಸಾಧನೆ ನಿರೀಕ್ಷಿಸುವಂತಿಲ್ಲ. ‘ರಿಂಗ್‌ನಲ್ಲಿ ಸೆಣಸಾಡುವುದಕ್ಕಿಂತ ರ್‍್ಯಾಂಪ್‌ನಲ್ಲಿ ಹೆಜ್ಜೆ ಹಾಕುವುದು ಸುಲಭ’ ಎಂಬ ಅವರ ಮಾತುಗಳೇ ಇದಕ್ಕೆ ಹೆಚ್ಚಿನ ಬಲ ನೀಡುತ್ತದೆ.ವಿಜೇಂದರ್‌ ಒಬ್ಬರೇ ಅಲ್ಲ: ಫ್ಯಾಷನ್‌ ಲೋಕ ಹಾಗೂ ಜಾಹೀರಾತಿಗೆ ಹೆಚ್ಚಿನ ಮಹತ್ವ ನೀಡಿದರೆ ಕ್ರೀಡಾತಾರೆಯರ ವೃತ್ತಿಜೀವನದ ಮೇಲೆ ಕೆಟ್ಟ ಪರಿಣಾಮ ಬೀರುವುದು ಸಹಜ. ಕ್ರೀಡೆಯಲ್ಲಿ ಗೆದ್ದಾಗ ದೊರೆಯುವ ಹಣಕ್ಕಿಂತ ಅಧಿಕ ಹಣ ಜಾಹೀರಾತು ಹಾಗೂ ಮಾಡೆಲಿಂಗ್‌ ಕ್ಷೇತ್ರದಲ್ಲಿ ದೊರೆಯುತ್ತದೆ. ರ್‍್ಯಾಂಪ್‌ ಮೇಲೆ ಹೆಜ್ಜೆ ಹಾಕುವಂತೆ ಕೋರಿಕೆ ಬಂದಾಗ ಅದನ್ನು ಕ್ರೀಡಾತಾರೆಯರು ನಿರಾಕರಿಸುವುದಿಲ್ಲ.ರ್‍್ಯಾಂಪ್‌ನಲ್ಲಿ ಹೆಜ್ಜೆ ಹಾಕಿರುವುದು ವಿಜೇಂದರ್‌ ಒಬ್ಬರೇ ಅಲ್ಲ. ಭಾರತದ ವಿವಿಧ ಕ್ರೀಡಾತಾರೆಯರು ಆಗೊಮ್ಮೆ ಈಗೊಮ್ಮೆ ರ್‍್ಯಾಂಪ್‌ನಲ್ಲಿ ಹೆಜ್ಜೆ ಹಾಕುವುದು ಸಾಮಾನ್ಯವಾಗಿಬಿಟ್ಟಿದೆ. ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌, ಜ್ವಾಲಾ ಗುಟ್ಟಾ, ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ, ಬಾಕ್ಸಿಂಗ್‌ ತಾರೆ ಮೇರಿ ಕೋಮ್‌ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ರ್‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದವರೇ ಆಗಿದ್ದಾರೆ.ಆದರೆ ಜಾಹೀರಾತು ಹಾಗೂ ಬಣ್ಣದ ಲೋಕದ ನಂಟು ಪ್ರದರ್ಶನಮಟ್ಟದ ಮೇಲೆ ಕೆಟ್ಟ ಪರಿಣಾಮ ಬೀರದಂತೆ ಎಲ್ಲರೂ ಎಚ್ಚರ ವಹಿಸಿದ್ದಾರೆ. ಕ್ರಿಕೆಟ್‌ ಆಟಗಾರರು ಈ ವಿಚಾರದಲ್ಲಿ ಇತರ ಕ್ರೀಡಾಳುಗಳಿಗಿಂತ ಮುಂದಿದ್ದಾರೆ. ಯುವರಾಜ್‌ ಸಿಂಗ್‌, ವಿರಾಟ್‌ ಕೊಹ್ಲಿ, ಮಹೆಂದ್ರ ಸಿಂಗ್‌ ದೋನಿ ಹಲವು ಸಲ ರ್‍್ಯಾಂಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್‌. ಶ್ರೀಶಾಂತ್‌ ಕೂಡಾ ಇದರಿಂದ ಹೊರತಾಗಿ ರಲಿಲ್ಲ. ಕೇರಳದ ಈ ವೇಗದ ಬೌಲರ್‌ ಹಲವು ಸಲ ಫ್ಯಾಷನ್‌ ಲೋಕದ ಮೂಲಕವೂ ಅಭಿಮಾನಿಗಳ ಮನಗೆಲ್ಲಲು ಪ್ರಯತ್ನಿಸಿದ್ದರು. ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಅವರು ‘ಮ್ಯಾಚ್ ಫಿಕ್ಸಿಂಗ್‌’ ಪ್ರಕರಣ ದಲ್ಲಿ ಸಿಲುಕಿ ಆಜೀವ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ.ಜಾಹೀರಾತು ಹಾಗೂ ಫ್ಯಾಷನ್‌ ಲೋಕದ ಮೇಲಿನ ಅತಿಯಾದ ಮೋಹ ಹಲವು ಕ್ರೀಡಾಗಳುಗಳ ವೃತ್ತಿಜೀವನವನ್ನೇ ಕೊನೆಗೊಳಿಸಿದೆ. ರಷ್ಯಾದ ಟೆನಿಸ್‌ ತಾರೆ ಅನ್ನಾ ಕೋರ್ನಿಕೋವಾ ಇದಕ್ಕೆ ಅತ್ಯುತ್ತಮ ಉದಾಹರಣೆ ಎನಿಸಿಕೊಂಡಿದ್ದಾರೆ. ಫ್ಯಾಷನ್‌ ಲೋಕದ ಸೆಳೆತದಿಂದ ಅವರು ಟೆನಿಸ್‌ನಿಂದ ಬೇಗನೇ ದೂರವಾ ದರು. ಆದರೆ ರಷ್ಯಾದ ಇನ್ನೊಬ್ಬಳು ಆಟಗಾರ್ತಿ ಮರಿಯಾ ಶರ್ಪೋವಾ ಮಾತ್ರ ಫ್ಯಾಷನ್‌ ಮತ್ತು ಕ್ರೀಡಾಲೋಕದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಯಶಸ್ವಿ ಯಾಗಿದ್ದಾರೆ.ಜನಪ್ರಿಯತೆ ಹೆಚ್ಚಿದಂತೆ ಜಾಹೀರಾತು ಹಾಗೂ ಇತರ ಚಟುವಟಿಕೆಗಳತ್ತ ಗಮನ ಹರಿಸುವ ಕ್ರೀಡಾ ತಾರೆಯರು ಸ್ವಿಟ್ಜರ್‌ಲೆಂಡ್‌ನ ಟೆನಿಸ್‌ ಆಟಗಾರ ರೋಜರ್‌ ಫೆಡರರ್‌ ಅವರನ್ನು ನೋಡಿ ಕಲಿಯಬೇಕಿದೆ. ಟೆನಿಸ್‌ನಲ್ಲಿ ಫೆಡರರ್‌ ಮಾಡಿರುವ ಸಾಧನೆ ಏನೆಂಬುದು ಈ ಕ್ರೀಡೆಯನ್ನು ಬಲ್ಲ ಎಲ್ಲರಿಗೂ ತಿಳಿದಿದೆ. ಪ್ರಶಸ್ತಿ ಮೊತ್ತವಾಗಿ ಅಪಾರ ಹಣವನ್ನೂ ಗಳಿಸಿದ್ದಾರೆ.ಅದರ ಜೊತೆಗೆ ಜಾಹೀರಾತಿನಿಂದ ಸಾಕಷ್ಟು ಮೊತ್ತ ಸಂಪಾದಿಸಿದ್ದಾರೆ. ಆದರೆ  ಸ್ವಿಸ್‌ ಆಟಗಾರ ಕೇವಲ ಜಾಹೀರಾತು ಮತ್ತು ಫ್ಯಾಷನ್‌ ಜಗತ್ತಿನ ಹಿಂದೆ ಮಾತ್ರ ಬೀಳಲಿಲ್ಲ. ತರಬೇತಿಗೆ ಮೊದಲ ಪ್ರಾಶಸ್ತ್ಯ ನೀಡಿ ಆಟದಲ್ಲಿ ಸುಧಾರಣೆಗೆ ಪ್ರಯತ್ನಿಸುತ್ತಲೇ ಇದ್ದರು. ಇದರಿಂದ 17 ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಗಳು ಅವರಿಗೆ ಒಲಿದಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.