ಏಕೋ ಭಾರತದ ಕ್ರಿಕೆಟ್ ದಾರಿ ತಪ್ಪುತ್ತಿದೆ!

7

ಏಕೋ ಭಾರತದ ಕ್ರಿಕೆಟ್ ದಾರಿ ತಪ್ಪುತ್ತಿದೆ!

Published:
Updated:
ಏಕೋ ಭಾರತದ ಕ್ರಿಕೆಟ್ ದಾರಿ ತಪ್ಪುತ್ತಿದೆ!

`ನಿಮ್ಮ ಆಟ ಮುಗಿಯಿತು. ನೀವಿನ್ನು ಹೊರಡಬಹುದು~-ಏಕದಿನ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದ ರಿಕಿ ಪಾಂಟಿಂಗ್‌ಗೆ ಆಯ್ಕೆದಾರರು ನಿರ್ದಾಕ್ಷಿಣ್ಯವಾಗಿ ಹೇಳಿದ ಮಾತಿದು. ರಿಕಿ 17 ವರ್ಷ ಆಸ್ಟ್ರೇಲಿಯಾ ತಂಡದಲ್ಲಿ ಆಡಿರಬಹುದು, ನಾಯಕರಾಗಿ ಎರಡು ವಿಶ್ವಕಪ್ ಗೆದ್ದುಕೊಟ್ಟಿರಬಹುದು. ಮೂರು ವಿಶ್ವಕಪ್ ಗೆದ್ದ ತಂಡದಲ್ಲಿ ಆಡಿರಬಹುದು. ವಿಶ್ವ ಕ್ರಿಕೆಟ್ ಕಂಡ ಯಶಸ್ವಿ ನಾಯಕ ಎನಿಸಿರಬಹುದು. ಉಹೂಂ, ಆಯ್ಕೆದಾರರು ಇವನ್ನೆಲ್ಲಾ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ.`ಹೆಸರು ಮುಖ್ಯವಲ್ಲ; ತಂಡದ ಹಿತಾಸಕ್ತಿ ಮುಖ್ಯ~ ಎಂಬುದು ಅವರ ಖಡಕ್ ನಿಲುವು. ಈ ಬಗ್ಗೆ ದೇಶದಲ್ಲಿ ಯಾವ ಟೀಕೆಯೂ ಕೇಳಿ ಬರಲಿಲ್ಲ ಎಂಬುದು ಇನ್ನೊಂದು ಅಚ್ಚರಿಯ ವಿಷಯ.ಈ ರೀತಿ ಸಚಿನ್ ತೆಂಡೂಲ್ಕರ್‌ಗೆ ಹೇಳುವ ಶಕ್ತಿ ಬಿಸಿಸಿಐ ರಾಷ್ಟ್ರೀಯ ಆಯ್ಕೆ ಮಂಡಳಿಗೆ ಇದೆಯಾ? ಅಂತಹ ನಿರ್ಧಾರ ಪ್ರಕಟಿಸಲು ಆಯ್ಕೆ ಸಮಿತಿ ಮುಖ್ಯಸ್ಥ ಕೆ.ಶ್ರೀಕಾಂತ್ ಅವರಿಗೆ ಸಾಧ್ಯವೇ?`ಸಚಿನ್ ನಿವೃತ್ತರಾಗಬೇಕು~ ಎಂದು ಕಪಿಲ್ ದೇವ್ ಹೇಳಿದ ಮಾರನೇ ದಿನವೇ ಭಾರತದ ಕ್ರಿಕೆಟ್ ರಾಜಧಾನಿ ಮುಂಬೈನಿಂದ ಆಕ್ಷೇಪದ ಧ್ವನಿಗಳು ಎದ್ದಿವೆ. `ಸಚಿನ್‌ಗೆ ಸಲಹೆ ನೀಡಲು ಅವರ‌್ಯಾರು~ ಎಂದು ದಿಲೀಪ್ ವೆಂಗ್‌ಸರ್ಕರ್ ಪ್ರಶ್ನಿಸಿದ್ದು ಅದಕ್ಕೆ ಸಾಕ್ಷಿ.ಆದರೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಚಿನ್ ಈ ಹಿಂದೆಂದೂ ಈ ರೀತಿ ಕಳಪೆ ಪ್ರದರ್ಶನ ತೋರಿದ ಉದಾಹರಣೆ ಇಲ್ಲ. 10 ತಿಂಗಳ ಬಳಿಕ ಏಕದಿನ ಕ್ರಿಕೆಟ್ ಆಡುತ್ತಿರುವ ಅವರ ದೇಹಭಾಷೆಯೇ ಬದಲಾಗಿದೆ. ಶತಕಗಳ ಶತಕದ ಮೈಲಿಗಲ್ಲು ಮರೆತು ತಮ್ಮ ನೈಜ ಆಟ ಪ್ರದರ್ಶಿಸುವಂತೆ ಸತತ ವೈಫಲ್ಯ ಕಾಣುತ್ತಿರುವ ಸಚಿನ್‌ಗೆ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಕೂಡ ಕಿವಿಮಾತು ಹೇಳಿದ್ದಾರೆ.ಆಯ್ಕೆದಾರರು ಅಂತಹ ಮಾತುಗಳನ್ನು ಹೇಳಲಾರರೇನೊ? ಆದರೆ ಜನರು ಹೇಳುವ ಮುನ್ನ ತೆಂಡೂಲ್ಕರ್ ಫಾರ್ಮ್ ಕಂಡುಕೊಳ್ಳುತ್ತಾರಾ ಅಥವಾ ವಿದಾಯ ಹೇಳುತ್ತಾರಾ? ಗೊತ್ತಿಲ್ಲ. 1992ರಲ್ಲಿ ವಿಶ್ವಕಪ್ ಗೆದ್ದ ತಕ್ಷಣ ನಿವೃತ್ತರಾಗಿದ್ದ ಪಾಕಿಸ್ತಾನದ ಇಮ್ರಾನ್ ಖಾನ್ ರೀತಿ ತವರೂರು ಮುಂಬೈನಲ್ಲಿ ವಿಶ್ವಕಪ್ ಜಯಿಸಿದ ಕೂಡಲೇ ಸಚಿನ್ ಕೂಡ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೆ ಇಂತಹ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲವೇನೊ?ಇರಲಿ ಬಿಡಿ, ಆಸ್ಟ್ರೇಲಿಯಾದ ಕ್ರಿಕೆಟ್ ಶೈಲಿಯೇ ಬೇರೆ. ಭಾರತದ ಕ್ರಿಕೆಟ್ ಶೈಲಿಯೇ ಬೇರೆ. ಆದರೆ ತಂಡದಲ್ಲಿರುವ ಒಡಕು ಕೂಡ ಇದೇ ಸಂದರ್ಭದಲ್ಲಿ ಈಗ ಬೀದಿಗೆ ಬಂದುಬಿಟ್ಟಿದೆ. ಈ ರೀತಿ ಆಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಕೂಡ ಇಂತಹ ವದಂತಿಗಳು ಸೃಷ್ಟಿಯಾಗಿದ್ದವು. ಅದ್ಯಾವುದಕ್ಕೂ ಸರಿಯಾದ ಸಾಕ್ಷಿ ಇರಲಿಲ್ಲ.ಆದರೆ ನಾಯಕ ಮಹೇಂದ್ರ ಸಿಂಗ್ ದೋನಿ, ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ನೀಡುತ್ತಿರುವ ಹೇಳಿಕೆಗಳು ತಂಡದಲ್ಲಿ ಬಿರುಕಿರುವುದು ನಿಜ ಎಂಬ ವಿಷಯವನ್ನು ಬೆತ್ತಲು ಮಾಡುತ್ತಿವೆ. ಇನ್ನು ಹೀಗೆ ಬಿಟ್ಟರೆ ಕಷ್ಟ ಎಂಬುದನ್ನು ಅರಿತ ಬಿಸಿಸಿಐ ಈಗ ತೇಪೆ ಹಾಕಲು ಮುಂದಾಗಿದೆ.ನಿಜ, ಯಾವುದೇ ಕ್ಷೇತ್ರದಲ್ಲಿ ವಿಭಿನ್ನ ಅಭಿಪ್ರಾಯಗಳು ಇದ್ದೇ ಇರುತ್ತವೆ. ಅದಕ್ಕೆ ಭಾರತದ ಕ್ರಿಕೆಟ್ ಹೊರತಲ್ಲ. ಅದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಬಾರದು ಅಷ್ಟೆ. ಆದರೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ನೀಡುತ್ತಿರುವ ಕಳಪೆ ಪ್ರದರ್ಶನ ಗಮನಿಸಿದರೆ ಇದಕ್ಕೆ ಬೇರೆ ಕಾರಣ ಹುಡುಕುವ ಅಗತ್ಯವೇ ಬೇಡ.ದೋನಿ ಹೇಳಿಕೆಯನ್ನು ಆಕ್ಷೇಪಿಸಿ ಪತ್ರಿಕಾಗೋಷ್ಠಿಯಲ್ಲಿ ವೀರೂ ಮಾತನಾಡಿದ ರೀತಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಸಹ ಆಟಗಾರ ಹಾಗೂ ತಮ್ಮೂರಿನ ಗಂಭೀರ್ ಕೂಡ ದೋನಿ ಸಿಟ್ಟಾಗುವಂಥ ಒಂದು ಹೇಳಿಕೆ ನೀಡಿಬಿಟ್ಟಿದ್ದಾರೆ.ಎದುರಾಳಿಯ ಗುರಿಯನ್ನು ಬೆನ್ನಟ್ಟುವ ಸಮಯದಲ್ಲಿ ದೋನಿ ಅನುಸರಿಸಿದ ಬ್ಯಾಟಿಂಗ್ ಶೈಲಿಯನ್ನು ಮೊದಲು ಗಂಭೀರ್ ಟೀಕಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.ಬಳಿಕ `ಹಿರಿಯ ಆಟಗಾರರು ಕಳಪೆ ಫೀಲ್ಡಿಂಗ್ ಮೂಲಕ 20 ರನ್‌ಗಳನ್ನು ಎದುರಾಳಿಗೆ ಉಡುಗೊರೆ ನೀಡುತ್ತಾರೆ. ಹಾಗಾಗಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗುತ್ತಿದೆ~ ಎಂದು ದೋನಿ ಹೇಳಿದ್ದರು. ಆದರೆ `ರೊಟೇಷನ್ ನೀತಿ ಅನುಸರಿಸಲು ಹಿರಿಯ ಆಟಗಾರರ ದುರ್ಬಲ ಫೀಲ್ಡಿಂಗ್ ಕಾರಣ ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆಯೇ ಆಗಿಲ್ಲ. ಹಿರಿಯ ಆಟಗಾರರ ಉಪಸ್ಥಿತಿ ಫೀಲ್ಡಿಂಗ್ ಮೇಲೆ ಪರಿಣಾಮ ಬೀರುತ್ತಿದೆ ಎಂಬ ದೋನಿ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. 10 ವರ್ಷಗಳಿಂದ ಇದೇ ತಂಡ ಆಡುತ್ತಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನಾನು ಪಡೆದ ಕ್ಯಾಚ್‌ಅನ್ನು ನೀವು ನೋಡಲಿಲ್ಲವೇ~ ಎಂಬುದಾಗಿ ಸೆಹ್ವಾಗ್ ನುಡಿದಿದ್ದರು. ವಿಶೇಷವೆಂದರೆ ತೆಂಡೂಲ್ಕರ್ ಗಾಯದ ಹೊರತು ಹಿಂದೆಂದೂ ಆಡುವ ಹನ್ನೊಂದರ ಬಳಗದಿಂದ ಹೊರಗುಳಿದ ಉದಾಹರಣೆ ಇರಲಿಲ್ಲ. ಆದರೆ ದೋನಿ ರೊಟೇಷನ್ ನೀತಿ ಮೂಲಕ ಅವರನ್ನು ಕೈಬಿಡುವ ಧೈರ್ಯದ ನಿರ್ಧಾರ ತೆಗೆದುಕೊಂಡಿದ್ದಾರೆ. ಅದಕ್ಕೂ ದೋನಿ ಟೀಕೆಗಳನ್ನು ಎದುರಿಸಬೇಕಾಗಿದೆ.ದೋನಿ ಬಳಗ ಆಸ್ಟ್ರೇಲಿಯಾ ಪ್ರವಾಸ ಮುಗಿಸುವ ಮುನ್ನ ಅಭಿಮಾನಿಗಳು ಇನ್ನೂ ಯಾವ್ಯಾವ ರೀತಿಯ ನಾಟಕ ನೋಡಬೇಕೋ ಏನೋ?  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry