ಏಕ ಕೋಣೆಯಲ್ಲಿ ಎರಡು ತರಗತಿ ಶಾಲೆ ದುಃಸ್ಥಿತಿ.

7

ಏಕ ಕೋಣೆಯಲ್ಲಿ ಎರಡು ತರಗತಿ ಶಾಲೆ ದುಃಸ್ಥಿತಿ.

Published:
Updated:

ಹಲಗೂರು:ಡಿ.ಹಲಸಹಳ್ಳಿ ಗೇಟ್ ಬಳಿ ಖಾಸಗಿ ಕೋಳಿ ಪೌಲ್ಟ್ರಿ ಫಾರಂನ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಮೊರಾರ್ಜಿದೇಸಾಯಿ ಮಾದರಿ ವಸತಿಶಾಲೆ ಮೂಲಸೌಕರ್ಯಗಳಿಂದ ವಂಚಿತವಾಗಿ ಸಮಸ್ಯೆಗಳ ಕೂಪವಾಗಿದೆ. ಕೋಳಿ ಫಾರಂ ಕಟ್ಟಡದಲ್ಲಿ ನಡೆಯುತ್ತಿರುವ, ಈ ಶಾಲೆಯಲ್ಲಿ 64 ಬಾಲಕರು, 85 ಬಾಲಕಿಯರಿದ್ದಾರೆ. ಒಂದು ಕೊಠಡಿಯಲ್ಲಿ 2 ತರಗತಿ ನಡೆಯುತ್ತವೆ. ರಾತ್ರಿ ಮಲಗುವ ಕೋಣೆಯೇ ಬೆಳಿಗ್ಗೆ ತರಗತಿ ಕೊಠಡಿ. ಶಾಲೆ ಪ್ರಾರಂಭವಾಗಿ ಮೂರು ವರ್ಷ ಸಮೀಪಿಸಿದರೂ ಮೂಲಸೌಲಭ್ಯ ಮರಿಚಿಕೆಯಾಗಿದೆ.  ಚಳಿ, ಗಾಳಿ, ಮಳೆ, ಬಿರು ಬಿಸಿಲು ಎಲ್ಲದಕ್ಕೂ ಮೆಸ್ ಮೂಲಕ ಮುಕ್ತ ಪ್ರವೇಶ. ಊರ ಹೊರಗೆ ಬಯಲಿನಲ್ಲಿ ಈ ಶಾಲೆಯಲ್ಲಿ ರಾತ್ರಿ ವೇಳೆ ವಿದ್ಯಾರ್ಥಿಗಳಿಗೆ ತಾರಾಲೋಕದ ಸಂಪೂರ್ಣದರ್ಶನವಾಗುತ್ತದೆ.ರಾತ್ರಿ ವೇಳೆ ವಿದ್ಯಾರ್ಥಿಗಳು ಮಾತ್ರ ಇಲ್ಲಿ ಉಳಿದುಕೊಳ್ಳುವುದು. ವಸತಿ ಸಮಸ್ಯೆ ಕಾರಣ ಶಿಕ್ಷಕರು ಹೊರಗೆ ಉಳಿಯುತ್ತಾರೆ. ಗುಂಡಿ ಬಿದ್ದ ನೆಲವೇ ವಿದ್ಯಾರ್ಥಿಗಳಿಗೆ ಹಾಸಿಗೆ. ತರಗತಿ ಕೊಠಡಿ, ಮಲಗುವ ಕೋಣೆ, ಲಗೇಜ್ ರೂಂ... ಹೀಗೆ ಆಲ್ ಇನ್ ಒನ್ ಆಗಿದೆ ಈ ಕೋಳಿ ಫಾರಂ. ಇಲ್ಲಿ ಮೂರು ಶೌಚ, ಮೂರು ಸ್ನಾನ ಗೃಹಗಳಿವೆ. ಇವುಗಳಲ್ಲಿ ಕೆಲವರಲ್ಲಿ ಬಾಗಿಲು ಕಿತ್ತುಬಂದಿವೆ. ಕಾಂಪೌಂಡ್‌ನಲ್ಲಿ ಇಲಿ, ಹೆಗ್ಗಣ, ಜಿರಲೆ, ಹಲ್ಲಿ... ದರ್ಶನ ಮಾಮೂಲು. ಇಲ್ಲಿ 10 ಕಂಪ್ಯೂಟರ್ ಇದ್ದು ವಿದ್ಯುತ್,  ಕೊಠಡಿ ಸಮಸ್ಯೆಯಿಂದ ಅವು ಮೂಲೆ ಗುಂಪಾಗಿವೆ. ಈ ಆವರಣದಲ್ಲಿ ಮೊಬೈಲ್ ಟವರ್, ಜನರೇಟರ್ ಇದ್ದು ಅಪಾಯದ ಆತಂಕ ಮನೆಮಾಡಿದೆ.2007-08ನೇ ಸಾಲಿನಲ್ಲಿ ಕರಲಕಟ್ಟೆಗೆ ಈ ಶಾಲೆ ಮಂಜೂರಾಗಿತ್ತು. ಕೋಳಿಫಾರಂ ಕಟ್ಟಡದಲ್ಲಿ ಶಾಲೆ ಪ್ರಾರಂಭಿಸಿದ ಔಚಿತ್ಯ ಏನು? ಕರಲಕಟ್ಟೆ ಸಮೀಪ ನಿವೇಶನ ಮಂಜೂರಾಗಿದೆ,ಇಲಾಖೆಯಲ್ಲಿ ಹಣ ಇದೆ. ಆದರೂ ಸ್ವಂತ ಕಟ್ಟಡ ನಿರ್ಮಾಣವಾಗಿಲ್ಲ. ಜನಪ್ರತಿನಿಧಿಗಳು ಮತ್ತು ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದಷ್ಟು ಬೇಗ ಸ್ವಂತ ಕಟ್ಟಡ ನಿರ್ಮಿಸಬೇಕು. ಅಲ್ಲಿಯವರೆಗೆ ಕೇಂದ್ರಸ್ಥಾನ ಹಲಗೂರಿನಲ್ಲಿ ಶಾಲೆ ನಡೆಸಬೇಕು. ವಿದ್ಯಾರ್ಥಿಗಳಿಗೆ ಎಲ್ಲ ಸವಲತ್ತು ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry