ಸೋಮವಾರ, ನವೆಂಬರ್ 18, 2019
26 °C

ಏಣಗಿ ಬಾಳಪ್ಪ ಪತ್ನಿ ವೃದ್ಧಾಶ್ರಮಕ್ಕೆ!

Published:
Updated:

ಧಾರವಾಡ: ಹಿರಿಯ ರಂಗ ಕಲಾವಿದ ಏಣಗಿ ಬಾಳಪ್ಪ ಅವರ ಪತ್ನಿ, ಧಾರವಾಡದ ರಂಗಾಯಣ ಘಟಕದ ನಿರ್ದೇಶಕರಾಗಿದ್ದ ದಿವಂಗತ ಏಣಗಿ ನಟರಾಜ ಅವರ ತಾಯಿ ಲಕ್ಷ್ಮಮ್ಮ (84) ನಗರದ ಸಾರಸ್ವತಪುರದಲ್ಲಿರುವ ಬನಶಂಕರಿ ವೃದ್ಧಾಶ್ರಮದಲ್ಲಿ ದಿನಕಳೆಯುತ್ತಿದ್ದಾರೆ!ಏಣಗಿ ನಟರಾಜ ಅವರು ಕಳೆದ ವರ್ಷದ ಜೂನ್ 8ರಂದು ನಿಧನ ಹೊಂದಿದರು. ಪುತ್ರನ ಅಗಲಿಕೆಯ ಬಳಿಕ ಬಹುತೇಕ ಒಂಟಿಯಾಗಿದ್ದ ಲಕ್ಷ್ಮಮ್ಮ ಎರಡು ತಿಂಗಳ ಹಿಂದೆಯೇ ವೃದ್ಧಾಶ್ರಮದಲ್ಲಿ ವಾಸ್ತವ್ಯ ಹೂಡಿದ್ದಾರೆ. ವೃದ್ಧಾಶ್ರಮದ ಶುಲ್ಕವನ್ನು ಅವರ ಪುತ್ರಿ, ಕೊಲ್ಹಾಪುರದಲ್ಲಿರುವ ಭಾಗ್ಯಶ್ರೀ ಅವರೇ ಭರಿಸುತ್ತಿದ್ದಾರೆ. ಶತಾಯುಷಿ ಏಣಗಿ ಬಾಳಪ್ಪ ಅವರು ಪ್ರಸ್ತುತ ಬೆಂಗಳೂರಿನಲ್ಲಿರುವ ಪುತ್ರನ (ಮೊದಲ ಪತ್ನಿಯ ಪುತ್ರ) ಮನೆಯಲ್ಲಿ ವಾಸವಾಗಿದ್ದಾರೆ.ಕೆಲ ತಿಂಗಳ ಹಿಂದೆ ಮನೆಯಲ್ಲಿ ಆಯತಪ್ಪಿ ಬಿದ್ದಿದ್ದ ಲಕ್ಷ್ಮಮ್ಮ ಅವರು ವೈದ್ಯರ ಸಲಹೆಯ ಮೇರೆಗೆ ವಿಶ್ರಾಂತಿ ಹಾಗೂ ಚಿಕಿತ್ಸೆಯನ್ನು ನಟರಾಜ ಅವರ ಮನೆಯಲ್ಲೇ ಪಡೆಯುತ್ತಿದ್ದರು. ಆದರೆ ನಟರಾಜ ಅವರ ಪತ್ನಿ ಕರ್ತವ್ಯದ ನಿಮಿತ್ತ ಪ್ರತಿದಿನ ಧಾರವಾಡದಿಂದ ನವನಗರಕ್ಕೆ ಹೋಗುತ್ತಿರುವುದರಿಂದ, ಮೊಮ್ಮಗನೂ ಶಾಲೆಗೆ ಹೋಗುತ್ತಿರುವುದರಿಂದ ಒಂಟಿತನ ದೂರ ಮಾಡಲು ವೃದ್ಧಾಶ್ರಮ ಸೇರಿದ್ದಾಗಿ ಲಕ್ಷ್ಮಮ್ಮ `ಪ್ರಜಾವಾಣಿ'ಗೆ ತಿಳಿಸಿದರು.`ಯಾರೂ ನನ್ನ ಮನಸ್ಸು ನೋಯಿಸಿಲ್ಲ. ವೃದ್ಧಾಶ್ರಮಕ್ಕೆ ಹೋಗುತ್ತೇನೆ ಎಂದಾಗ ಸೊಸೆ ಕಣ್ಣೀರಿಟ್ಟಳು. ಮಗಳು ಭಾಗ್ಯಶ್ರೀ ಕೊಲ್ಹಾಪುರಕ್ಕೆ ಬರುವಂತೆ ಬಲವಂತ ಮಾಡಿದಳು. ಆದರೆ ಯಾರಿಗೂ ಭಾರವಾಗಬಾರದು ಎಂಬ ಉದ್ದೇಶದಿಂದ ವೃದ್ಧಾಶ್ರಮಕ್ಕೆ ಸೇರಿದ್ದೇನೆ. ನಗರದಲ್ಲೇ ವಾಸವಾಗಿರುವ ಮಗ (ಏಣಗಿ ಅವರ ಮೊದಲ ಪತ್ನಿಯ ಪುತ್ರ) ಆಗಾಗ ಇಲ್ಲಿಗೆ ಬಂದು ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಾನೆ. ಸೊಸೆಯೂ ಬರುತ್ತಾಳೆ. ನಮ್ಮವರಿಗೆ (ಬಾಳಪ್ಪ) ಇತ್ತೀಚೆಗೆ ಕಿವಿ ಸರಿಯಾಗಿ ಕೇಳಿಸುತ್ತಿಲ್ಲ. ಆದ್ದರಿಂದ ಫೊನ್‌ನಲ್ಲಿಯೂ ಅವರು ನನ್ನೊಂದಿಗೆ ಮಾತನಾಡಲು ಆಗುತ್ತಿಲ್ಲ. ಮಗಳು ಭಾಗ್ಯಶ್ರೀಯೊಂದಿಗೆ ಮಾತ್ರ ಆಗಾಗ ಫೋನ್‌ನಲ್ಲಿ ಮಾತಾಡುತ್ತೇನೆ' ಎಂದರು.

ಪ್ರತಿಕ್ರಿಯಿಸಿ (+)