ಶನಿವಾರ, ನವೆಂಬರ್ 16, 2019
21 °C

ಏತ ನೀರಾವರಿ ಆರಂಭಿಸಲು ಆಗ್ರಹ

Published:
Updated:

ಹಿರೇಕೆರೂರ: ಸ್ಥಗಿತಗೊಂಡಿರುವ ರಟ್ಟೀಹಳ್ಳಿ ಏತ ನೀರಾವರಿ ಯೋಜನೆಯ ಒಂದನೇ ಹಂತ ಹಾಗೂ ಎರಡನೇ ಹಂತಗಳನ್ನು ಪುನಃ ಆರಂಭಿಸಿ ರೈತರಿಗೆ ನೀರು ಒದಗಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪ್ರೊ.ನಂಜುಂಡಸ್ವಾಮಿ ಬಣ) ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.ನೇತೃತ್ವ ವಹಿಸಿದ್ದ ಸಂಘಟನೆಯ ಅಧ್ಯಕ್ಷ ರಾಜಶೇಖರ ದೂದೀಹಳ್ಳಿ ಮಾತನಾಡಿ, `ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ಯೋಜನೆಗೆ ಮಂಜೂರಾತಿ ನೀಡಲಾಗಿದ್ದು, 1ನೇ ಹಂತದ ಕಾಮಗಾರಿ ಪೂರ್ಣಗೊಂಡು ಎಲಿವಾಳ, ರಟ್ಟೀಹಳ್ಳಿ ಹಾಗೂ ಕವಳಿಕುಪ್ಪಿ ಗ್ರಾಮಗಳಿಗೆ ನೀರು ಒದಗಿಸಲಾಗಿತ್ತು. ಕೆಲ ವರ್ಷಗಳ ನಂತರ ಸಣ್ಣ ನೀರಾವರಿ ಇಲಾಖೆಯವರು ವಿದ್ಯುತ್ ಬಿಲ್ ಪಾವತಿಸದೇ ಇರುವುದರಿಂದ ರೈತರಿಗೆ ನೀರು ಪೂರೈಕೆ ಸ್ಥಗಿತವಾಗಿ ಸಂಪೂರ್ಣ ಯೋಜನೆ ಸ್ಥಗಿತಗೊಂಡಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.`2ನೇ ಹಂತದ ಯೋಜನೆ ಕೂಡ ಅಧಿಕಾರಗಳ ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದ್ದಿದ್ದು, ಎರಡೂ ಹಂತಗಳ 1,610 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಸಂಪೂರ್ಣವಾಗಿ ಸ್ಥಗಿತಗೊಂಡು ಸರ್ಕಾರದ ಲಕ್ಷಾಂತರ ರೂಪಾಯಿ ಹಣ ಪೋಲು ಮಾಡಲಾಗಿದೆ. ಈ ಯೋಜನೆಗೆ ಒದಗಿಸಿದ್ದ ಮಷಿನ್‌ಗಳು, ಸಲಕರಣೆಗಳು ದಶಕಗಳಿಂದ ಜಂಗು ತಿಂದು ಹಾಳಾಗುತ್ತಿವೆ. ಕಾರಣ ಈ ಎರಡೂ ಹಂತಗಳ ಯೋಜನೆಯನ್ನು ಪುನರಾರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು' ಎಂದು ಒತ್ತಾಯಿಸಿದರು.ಮುಖಂಡರಾದ ಮಲ್ಲನಗೌಡ ಸೊರಟೂರ, ಉಮೇಶ ಹೊಸಮನಿ, ವೀರಬಸಯ್ಯ ಬಣಕಾರ, ಸುರೇಶ ಹುಲ್ಲತ್ತಿ, ರಹೀಮ್‌ಸಾಬ್ ಹಾವೇರಿ, ಮಲ್ಲೇಶ ಪೂಜಾರ, ರಮೇಶ ದ್ಯಾವಕ್ಕಳವರ, ಚನ್ನಪ್ಪ ಲಮಾಣಿ, ಮುಕ್ತಾರ್‌ಸಾಬ್ ಕೋಡಿಹಳ್ಳಿ ಮೊದಲಾದವರು ಹಾಜರಿದ್ದರು.

ಪ್ರತಿಕ್ರಿಯಿಸಿ (+)