ಸೋಮವಾರ, ಮೇ 17, 2021
31 °C

ಏನೂ ತಿಳಿಯುತ್ತಿಲ್ಲ...

ಪ್ರಜಾವಾಣಿ ವಾರ್ತೆ/ ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: `ನಾವೊಂದು ಬದರಿ ನಾಥದ ಧರ್ಮಶಾಲೆಯೊಂದರಲ್ಲಿ ಇಳ್ಕೊಂಡಿದ್ದೀವಿ. ನಮ್ಮ ಹಾಗೆ ಬಹಳ ಮಂದಿ ಇಲ್ಲೇ ಉಳಿದಿದ್ದಾರೆ. ಆಶ್ರಮ ಭರ್ತಿಯಾಗುತ್ತಿದೆ. ನಮ್ಮನ್ನೆಲ್ಲ ಹೊರಗೆ ಹೋಗಿ ಅಂತ ಒತ್ತಡ ಹಾಕ್ತಿದ್ದಾರೆ. ಎಲ್ಲಿ ಹೋಗೋದು, ಏನ್ ಮಾಡೋದು ಒಂದೂ ತಿಳೀತಿಲ್ಲ....'ಉತ್ತರಭಾರತದ ಯಾತ್ರಾ ಸ್ಥಳಗಳಿಗೆ ಪ್ರವಾಸಕ್ಕೆ ತೆರಳಿರುವ ಭರಮಸಾಗರ ನಿವಾಸಿ ಸುಧಾ ಅವರ ಆತಂಕದ ನುಡಿಗಳಿವು. ಕಳೆದ ಶನಿವಾರದಿಂದ ಬದರಿಯ ಧರ್ಮಶಾಲೆಯೊಂದರಲ್ಲಿ ಕುಟುಂಬ ಸದಸ್ಯರೊಂದಿಗೆ ಆಶ್ರಯ ಪಡೆದಿರುವ ಅವರು, ಇಂಥ ಆತಂಕದ ಕ್ಷಣಗಳನ್ನು ಎದುರಿಸುತ್ತಲೇ ದಿನ ಕಳೆದಿದ್ದಾರೆ.ಬದರಿಯಲ್ಲಿನ ಪರಿಸ್ಥಿತಿ ಕುರಿತು `ಪ್ರಜಾವಾಣಿ' ಜತೆ ಬುಧವಾರ  ದೂರವಾಣಿ ಮೂಲಕ ಮಾತನಾಡಿದ ಅವರು, `ಐದು ದಿನಗಳ ಹಿಂದೆ ಬದರಿ ಕ್ಷೇತ್ರಕ್ಕೆ ಬಂದೆವು. ಅಂದಿನಿಂದಲೇ ಜೋರು ಮಳೆ ಶುರುವಾಯ್ತು. ಪ್ರವಾಹ ಉಕ್ಕಿ ಹರಿಯಿತು. ನಾವು ಸಾಗಬೇಕಾದ ದಾರಿಯಲ್ಲಿನ ಸೇತುವೆ ಕುಸಿದಿದ್ದು, ಎಲ್ಲೂ ಹೋಗದಂತೆ ಸೇನಾ ಪಡೆಯವರು ನಮ್ಮನ್ನು ತಡೆದರು. ಈಗ ಧರ್ಮಶಾಲೆಯೊಂದರಲ್ಲಿ ಉಳಿಸಿದ್ದಾರೆ' ಎಂದು ವಿವರಿಸಿದರು.`ನಮ್ಮ ಜೊತೆ ಬಂದವರಲ್ಲಿ ಕೆಲವರು ಹೃದ್ರೋಗಿಗಳು, ಇನ್ನೂ ಕೆಲವರು ಮಧುಮೇಹದಿಂದ ಬಳಲುತ್ತಿದ್ದಾರೆ. ಅವರ ಬಳಿಯಿದ್ದ ಮಾತ್ರೆ, ಔಷಧಗಳು ಖಾಲಿಯಾಗಿಬಿಟ್ಟಿವೆ. ಅವರೆಲ್ಲ ತುಂಬಾ ದಣಿದಿದ್ದಾರೆ. ಸುತ್ತಮುತ್ತ ಎಲ್ಲೂ ಔಷಧಗಳು ಲಭ್ಯವಾಗುತ್ತಿಲ್ಲ. ಬಹಳ ಆತಂಕದಿಂದ ದಿನ ದೂಡುತ್ತಿದ್ದೇವೆ' ಎಂದು ನೊಂದು ನುಡಿದರು.`ಪ್ರವಾಸಕ್ಕಾಗಿ ತಂದಿದ್ದ ಹಣವೆಲ್ಲ ಖರ್ಚಾಗಿದೆ. ಈ ಭಾಗದಲ್ಲಿರುವ ಎಲ್ಲಾ ಎಟಿಎಂಗಳೂ ಕೆಟ್ಟಿವೆ. ಹಾಗಾಗಿ ಹಣವನ್ನೂ ಬಿಡಿಸಿಕೊಳ್ಳಲಾಗುತ್ತಿಲ್ಲ. ನಮ್ಮನ್ನು ಕರೆತಂದಿದ್ದ ಟೂರ್ ಏಜೆನ್ಸಿಯವರ ಬಳಿ ಇದ್ದ ದಿನಸಿ, ಗ್ಯಾಸ್ ಎಲ್ಲ ಖಾಲಿಯಾಗಿದೆ. ಮುಂದೆ ಊಟಕ್ಕೆ ಏನು ಮಾಡುವುದೋ ತಿಳಿಯುತ್ತಿಲ್ಲ. ಇಲ್ಲಿ ಸೇನೆಯವರಿದ್ದಾರೆಯೇ ಹೊರತು, ಅವರು ನಮ್ಮನ್ನು ಸಾಗಿಸುವ ಕುರಿತು ಏನೂ ಯೋಚನೆ ಮಾಡುತ್ತಿಲ್ಲ. ಹೆಲಿಕಾಪ್ಟರ್‌ನಲ್ಲಿ ಡೆಹ್ರಾಡೂನ್‌ಗೆ ಬಿಡುವುದಾಗಿ ಹೇಳಿದ್ದರು. ಆ ನಂತರ 8 ಕಿ.ಮೀ ದೂರಕ್ಕೆ ಬಿಡುತ್ತೇವೆಂದಿದ್ದಾರೆ. ಕಾಣದ ಸ್ಥಳಕ್ಕೆ ಹೋಗಿ ಏನು ಮಾಡುವುದು' ಎಂದು ಸುಧಾ ಕಳವಳ ವ್ಯಕ್ತಪಡಿಸಿದರು.`ರಾಜ್ಯ ಸರ್ಕಾರ, ಪ್ರವಾಸಿಗರನ್ನು ರಕ್ಷಿಸುವ ಸಲುವಾಗಿ ಅಧಿಕಾರಿಗಳನ್ನು ನಿಯೋಜಿಸಿದ್ದಾರೆ' ಎನ್ನುತ್ತಿದ್ದಂತೆ, `ನಾವಿಲ್ಲಿ ಕರ್ನಾಟಕದ 120 ಜನ ಯಾತ್ರಾರ್ಥಿಗಳಿದ್ದೇವೆ. ಆದರೆ ಅಧಿಕಾರಿಗಳು ಇಲ್ಲಿಗೆ ಬಂದಿರುವ ಮಾಹಿತಿ ಇಲ್ಲ' ಎಂದು ಹೇಳಿದರು.`ಪುಣ್ಯಕ್ಕೆ ಮಳೆ ನಿಂತಿದೆ. ಪ್ರವಾಹ ತಗ್ಗುತ್ತಿದೆ. ಬಿಸಿಲು ಬೀಳುತ್ತಿದೆ. ಸದ್ಯ ನಮ್ಮನ್ನು ಇಲ್ಲಿಂದ ಕನಿಷ್ಠ ದೆಹಲಿಗೆ ಕಳುಹಿಸುವ ಪ್ರಯತ್ನ ಮಾಡಿದರೆ ಸಾಕು. ದಯವಿಟ್ಟು, ಈ ವಿಷಯವನ್ನು ಸರ್ಕಾರದ ಗಮನಕ್ಕೆ ಈ ವಿಚಾರವನ್ನು ತನ್ನಿ' ಎಂದು ಅವರು ಹೇಳುವಷ್ಟರಲ್ಲಿ ದೂರವಾಣಿ ಸಂಪರ್ಕ ಕಡಿತಗೊಂಡಿತು. ಭರಮಸಾಗರದ ನೀಲಕಂಠ ಜೋಯಿಸ್ ಅವರ ಪತ್ನಿ ಸುಧಾ ಅವರು ಸಂಬಂಧಿಗಳೊಂದಿಗೆ ಯಾತ್ರೆಗೆ ಹೋಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.