ಏಪ್ರಿಲ್ 1ರಿಂದ ಕಾರು ದುಬಾರಿ?
ನವದೆಹಲಿ (ಪಿಟಿಐ): ತಯಾರಿಕಾ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 1ರಿಂದ ಪ್ರಯಾಣಿಕ ವಾಹನಗಳ ಬೆಲೆಯನ್ನು ರೂ. 36 ಸಾವಿರದವರೆಗೆ ಹೆಚ್ಚಿಸುವುದಾಗಿ ಟಾಟಾ ಮೋಟಾರ್ಸ್ ಹೇಳಿದೆ.
ಮಾರುತಿ ಸುಜುಕಿ ಮತ್ತು ಹುಂಡೈ ಕಂಪೆನಿಗಳು ಕೂಡ ವಾಹನಗಳ ಬೆಲೆಯನ್ನು ಹೆಚ್ಚಿಸುವ ಸೂಚನೆ ನೀಡಿವೆ. ‘ಕಚ್ಚಾ ಸರಕುಗಳ ಬೆಲೆ ಹೆಚ್ಚುತ್ತಿದೆ. ಈಗಿರುವ ದರದಲ್ಲೇ ಕಾರುಗಳನ್ನು ಮಾರಾಟ ಮಾಡುವುದು ಕಂಪೆನಿಯ ನಿರೀಕ್ಷಿತ ವರಮಾನದ ಮೇಲೆ ಒತ್ತಡ ಬೀರಲಿದೆ. ವೆಚ್ಚ ಕಡಿತ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ, ಮಾರುಕಟ್ಟೆ ಎದುರಿಸಲು ಬೆಲೆ ಏರಿಕೆ ಅನಿವಾರ್ಯ’ ಎಂದು ಟಾಟಾ ಪ್ರಕಟಣೆ ತಿಳಿಸಿದೆ.
ಪರಿಷ್ಕೃತ ದರಗಳ ಪ್ರಕಾರ, ಇಂಡಿಕಾ ಕಾರು ಈಗಿನ ದರಕ್ಕಿಂತ ರೂ. 7ರಿಂದ 9 ಸಾವಿರದಷ್ಟು ದುಬಾರಿಯಾಗಬಹುದು. ಟಾಟಾ ವಿಸ್ತಾ, ಇಂಡಿಗೊ ಸಿ.ಎಸ್ ರೂ. 8ರಿಂದ ರೂ. 11ಸಾವಿರದ ವರೆಗೆ ಹೆಚ್ಚಲಿದೆ. ಗ್ರ್ಯಾಂಡೆ, ಸಫಾರಿ ರೂ. 16 ರಿಂದ ರೂ. 19 ಸಾವಿರದಷ್ಟು ತುಟ್ಟಿಯಾಗಲಿದೆ. ಏಪ್ರಿಲ್ 1ರಿಂದ ಟಾಟಾ ಮಾಂಜಾ ರೂ. 15 ಸಾವಿರ ಹಾಗೂ ಏರಿಯಾ ರೂ. 36 ಸಾವಿರದಷ್ಟು ದುಬಾರಿಯಾಗಲಿದೆ. ಅಗ್ಗದ ಕಾರು ‘ನ್ಯಾನೊ’ ದರ ಯಥಾಸ್ಥಿತಿಯಲ್ಲೇ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ.
ಮಾರುತಿ ಸುಜುಕಿ ಇಂಡಿಯಾ ಹಾಗೂ ಹುಂಡೈ ಮೋಟಾರ್ ಇಂಡಿಯಾ ಕೂಡ ಕಾರುಗಳ ಬೆಲೆ ಹೆಚ್ಚಿಸುವ ಸೂಚನೆ ನೀಡಿದೆ. ‘ಪರಿಷ್ಕತ ದರವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ’ ಎಂದು ‘ಎಂಎಸ್ಐ’ ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಮಯಾಂಕ್ ಪರೀಖ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.