ಭಾನುವಾರ, ಡಿಸೆಂಬರ್ 8, 2019
19 °C

ಏರಿಕೆ ಹಾದಿಗೆ ಮರಳಿದ ಕೈಗಾರಿಕೆ ಉತ್ಪಾದನೆ

Published:
Updated:
ಏರಿಕೆ ಹಾದಿಗೆ ಮರಳಿದ ಕೈಗಾರಿಕೆ ಉತ್ಪಾದನೆ

ನವದೆಹಲಿ (ಪಿಟಿಐ): ತಯಾರಿಕಾ ರಂಗದಲ್ಲಿನ ಚೇತರಿಕೆ ಫಲವಾಗಿ ನವೆಂಬರ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆಯು ಶೇ 5.9ರಷ್ಟು ವೃದ್ಧಿಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ಕುಸಿತ ಕಂಡಿದ್ದ ಕೈಗಾರಿಕಾ ಉತ್ಪಾದನೆಯು ಈಗ ಮತ್ತೆ ಏರಿಕೆ ಹಾದಿಗೆ ಮರಳಿದ್ದು, ಆರ್ಥಿಕ ಚಟುವಟಿಕೆ ಕುಂಠಿತಗೊಂಡಿರುವ ಸದ್ಯದ ದಿನಗಳಲ್ಲಿನ ನಿರಾಶಾದಾಯಕ ಭಾವನೆ ಬದಲಿಸಲಿದೆ.ಈ ವಿದ್ಯಮಾನವು ಇದೇ ರೀತಿ ಮುಂದುವರೆದರೆ ಡಿಸೆಂಬರ್ -ಮಾರ್ಚ್ ತಿಂಗಳ ಸಾಧನೆ ಇನ್ನಷ್ಟು ಸುಧಾರಿಸುವ ಸಾಧ್ಯತೆಗಳು ಇವೆ. ಅದಕ್ಕೆ ಪೂರಕವಾಗಿ ಸರ್ಕಾರವು ಕೆಲ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ. ಈ ಚೇತರಿಕೆ ಆಧರಿಸಿ ಈ ವರ್ಷದ ಉಳಿದ ಅವಧಿಯಲ್ಲಿ ತಯಾರಿಕಾ  ರಂಗದ ಸಾಧನೆ ಉತ್ತಮಪಡಿಸಬೇಕಾಗಿದೆ. ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.ಆರ್ಥಿಕ ಚಟುವಟಿಕೆಗಳು ಮತ್ತೆ ಚೇತರಿಸಿಕೊಳ್ಳುವುದರ ಸಂಕೇತ ಇದಾಗಿದೆ ಎಂದು ಯೋಜನಾ ಆಯೋಗ ಅಭಿಪ್ರಾಯಪಟ್ಟಿದೆ. ಕೈಗಾರಿಕಾ ಬೆಳವಣಿಗೆಯು ಶೇ 6ರಷ್ಟು ಆಗಿರುವುದು  ನಿಜಕ್ಕೂ ಉತ್ತಮ ಬದಲಾವಣೆಯಾಗಿದೆ ಎಂದು ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅಭಿಪ್ರಾಯಪಟ್ಟಿದ್ದಾರೆ.

 

ಕಾರ್ಖಾನೆಗಳ ಉತ್ಪಾದನೆಯು ನವೆಂಬರ್ ತಿಂಗಳಲ್ಲಿ ಶೇ 6.4ರಷ್ಟು ವೃದ್ಧಿಯಾಗಿದೆ. ಈ ಮಧ್ಯೆ, ಅಕ್ಟೋಬರ್ ತಿಂಗಳ ಕೈಗಾರಿಕಾ ಉತ್ಪಾದನೆಯನ್ನೂ ಈಗ ಪರಿಷ್ಕರಿಸಲಾಗಿದೆ. ಹೊಸ ಅಂಕಿ ಅಂಶಗಳ ಪ್ರಕಾರ, ಆ ತಿಂಗಳಿನಲ್ಲಿ ಶೇ 5.1ರ ಬದಲಿಗೆ ಶೇ 4.74ರಷ್ಟು ಉತ್ಪಾದನೆ ಕುಸಿತವಾಗಿತ್ತು ಎಂದು ಸರ್ಕಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.ಕೈಗಾರಿಕಾ ಸೂಚ್ಯಂಕದಲ್ಲಿ ಶೇ 75ರಷ್ಟು ಪಾಲು ಹೊಂದಿರುವ ತಯಾರಿಕಾ ವಲಯದ  ಉತ್ಪಾದನೆಯು ನವೆಂಬರ್‌ನಲ್ಲಿ ಶೇ 6.6ರಷ್ಟು ಹೆಚ್ಚಳವಾಗಿದೆ. ವಿದ್ಯುತ್ ಉತ್ಪಾದನೆಯು ಶೇ 14.6, ಗ್ರಾಹಕ ಉತ್ಪನ್ನ ಸರಕು ಶೇ 13ರಷ್ಟು ಹೆಚ್ಚಳವಾಗಿದೆ. ಆದರೆ, ಗಣಿ ಉತ್ಪಾದನೆಯು ಶೇ 4.4, ಭಾರಿ ಯಂತ್ರೋಪಕರಣ ಶೇ 4.6ರಷ್ಟು ಕುಸಿತ ದಾಖಲಿಸಿದೆ.

ಪ್ರತಿಕ್ರಿಯಿಸಿ (+)