ಸೋಮವಾರ, ಮಾರ್ಚ್ 27, 2023
24 °C

ಏರಿದ ಬತ್ತದ ಸಂಗ್ರಹ: ಏರದ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏರಿದ ಬತ್ತದ ಸಂಗ್ರಹ: ಏರದ ಬೆಲೆ

ಮುನಿರಾಬಾದ್: ತುಂಗಭದ್ರಾ ಜಲಾಶಯದ ಕಾಲುವೆಗಳ ವ್ಯಾಪ್ತಿಯ ಹಿಟ್ನಾಳ ಹೋಬಳಿ ಪ್ರದೇಶದಲ್ಲಿ ಬೆಳೆದ ಬತ್ತವನ್ನು ರಾಶಿ ರಾಶಿ ಹಾಕಿರುವ ರೈತರು, ಸೂಕ್ತ ಬೆಲೆಯ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.



ಹಿಟ್ನಾಳ ಹೋಬಳಿ ವ್ಯಾಪ್ತಿಯ ಹಿಟ್ನಾಳ, ಹುಲಿಗಿ, ಅಗಳಕೇರಾ, ಶಿವಪುರ, ಹೊಸಹಳ್ಳಿ ಮುಂತಾದ ಗ್ರಾಮಗಳ ರೈತರು ಬೆಳೆದ ಬತ್ತವನ್ನು ರಾಶಿಮಾಡಿ ಮನೆಯಲ್ಲಿ, ಊರಿನ ಸಾರ್ವಜನಿಕ ಮೈದಾನಗಳಲ್ಲಿ, ಶಾಲಾ ಆವರಣ, ಖಾಸಗಿ ಉಗ್ರಾಣಗದಲ್ಲಿ ಸಂಗ್ರಹಿಸಲಾಗಿರುವ ಬತ್ತ ಸಾವಿರಾರು ಟನ್‌ಗಳಷ್ಟು! ಪ್ರತಿದಿನ ಬತ್ತದ ಮೇಲೆ ಹಾಕಿದ ತಾಡಪಾಲು ತೆಗೆದು ಒಣಗಿಸುವುದು, ಗಾಳಿ ಮಳೆಗೆ ಹೆದರಿ ಮತ್ತೆ ಮುಚ್ಚುವುದು ರೈತರ ಕಾಯಕವಾಗಿದೆ. ಆದರೆ ಬೆಲೆ ಕುಸಿತದಿಂದ ಯಾರೂ ಬತ್ತವನ್ನು ಖರೀದಿಸಲು ಮುಂದೆ ಬರುತ್ತಿಲ್ಲ.



ಈ ಭಾಗದಲ್ಲಿ ಗಂಗಾ-ಕಾವೇರಿ, ಜೆಜೆಎಲ್, ಎಮರ್‌ಜೆನ್ಸಿಸೋನಾ ಮುಂತಾದ ತಳಿಗಳ ಬತ್ತವನ್ನು ಬೆಳೆದಿರುವ ಇಲ್ಲಿನ ರೈತರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಹಿಟ್ನಾಳದ ರೈತ ಕೋನಪ್ಪ ತಾವರಗೆರೆ, `ಬತ್ತ ಬೆಳೆಯಲು ಎಕರೆಗೆ 20ರಿಂದ 25 ಸಾವಿರ ರೂಪಾಯಿ ಖರ್ಚಾಗಿದೆ. ಬೆಳೆ ಕೈಗೆ ಬಂತು ಎಂಬ ಸಮಾಧಾನ ಒಂದೆಡೆಯಾದರೆ, ಮಾರ್ಕೆಟ್ ರೇಟ್ ಕೇಳಿದಾಗ ನಿಂತಲ್ಲೇ ಕುಸಿದ ಅನುಭವ. 75 ಕೆಜಿ ಚೀಲಕ್ಕೆ ಕೇವಲ ರೂ. 600ರಿಂದ 640 ದರ ಇದೆ. ಚೀಲಕ್ಕೆ ಕನಿಷ್ಠ ರೂ. 1,000 ಸಿಗಬೇಕು; ಖರ್ಚು ಮಾಡಿದ ಹಣ ಆಗ ವಾಪಸ್ ಬಂದಂತೆ~ ಎನ್ನುತ್ತಾರೆ.



ಅಗಳಕೇರಾ ಗ್ರಾಮದ ರೈತರಾದ ವಿರುಪಾಕ್ಷಯ್ಯ ಭೂಸನೂರಮಠ, ಸೋಮಣ್ಣ, ಗ್ಯಾನಪ್ಪ ಚಿಲ್ಕಮುಕಿ ಪ್ರಕಾರ, ಬತ್ತ ನಾಟಿಯಿಂದ ಹಿಡಿದು, ಕೊಯ್ಲಿನವರೆಗೆ ಕೀಟನಾಶಕ, ರಸಗೊಬ್ಬರದ ಆರೈಕೆ ಬೇಕೇ ಬೇಕು. ಡಿಎಪಿ- ರೂ. 416, ಕಾಂಪ್ಲೆಕ್ಸ್- ರೂ 390, ಯೂರಿಯಾ-ರೂ. 290 ಖರ್ಚು ಮಾಡಿದರೂ, ಬೆಳೆ ಬಂದರೆ ಅದೃಷ್ಟ. ಬೇಸಾಯವೇ ಬೇಡ ಎಂಬಷ್ಟು ರೋಸಿಹೋಗಿದೆ ಎಂದು ಮರುಗುತ್ತಾರೆ.



ಅಕ್ಕಿ ರೇಟು ಬತ್ತಕ್ಕಿಲ್ಲ: ಪ್ರತಿ ಕೆಜಿ ಅಕ್ಕಿಯ ಬೆಲೆ ರೂ 35ರಿಂದ 45ರವರೆಗೆ ಇದೆ. ಆದರೆ ಬತ್ತದ ಬೆಲೆ ಮಾತ್ರ ಕ್ವಿಂಟಲ್‌ಗೆ ಆರೇಳು ನೂರು ದಾಟುತ್ತಿಲ್ಲ. ಗಾಳಿ ಪಟದಂತೆ ಏರುವ ಅಕ್ಕಿಯ ಬೆಲೆ ಬತ್ತಕ್ಕಿಲ್ಲ. ರೈತರ ಬಗ್ಗೆ ರಾಜಕಾರಣಿಗಳು, ಅಧಿಕಾರಿಗಳಿಗೆ ಕಿಂಚಿತ್ತೂ ಕಾಳಜಿ ಎಂಬುದಿಲ್ಲ. ಸ್ವಪ್ರತಿಷ್ಠೆಯ ರಾಜಕಾರಣವನ್ನು ಬದಿಗಿಟ್ಟು, ರೈತರ ನೆರವಿಗೆ ನಾಯಕರು ಬಂದರೆ ಒಳಿತು ಎಂದು ಹಿಟ್ನಾಳ ಗ್ರಾಮದ ಹುಲುಗಪ್ಪ, ಬಸಪ್ಪ ತಿಪ್ಪವ್ವನವರ, ಲಿಂಗದಹಳ್ಳಿಯ ಹನುಮಂತಪ್ಪ ಬಸಿರಾಳ ಅಭಿಪ್ರಾಯಪಡುತ್ತಾರೆ.      

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.