ಏರಿಯೇ ಬಿಟ್ಟೆವು ಮಿನಿ ಎವರೆಸ್ಟ್

7

ಏರಿಯೇ ಬಿಟ್ಟೆವು ಮಿನಿ ಎವರೆಸ್ಟ್

Published:
Updated:
ಏರಿಯೇ ಬಿಟ್ಟೆವು ಮಿನಿ ಎವರೆಸ್ಟ್

ಹಸಿರು ಪಡೆಯ ಸದಸ್ಯರು, ಉಪನ್ಯಾಸಕನಾಗಿರುವ ನಾನು, ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಚಂದು ಸಾರ್, ವಿಜಯರಾಜ್ ಅಧಿಕಾರಿ, ನವೀನ್ ಹೀಗೆ 15 ಮಂದಿ ಜೊತೆಗೂಡಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಳಿ ಇರುವ ಜಮಲಾಬಾದ್ ಕೋಟೆಗೆ ಚಾರಣ ಮಾಡುವುದೆಂದು ತೀರ್ಮಾನಿಸಿದೆವು.ಈ ತೀರ್ಮಾನವನ್ನು ಕೆಲವರು `ಭೇಷ್' ಎಂದಿದ್ದರು. ಇನ್ನೂ ಕೆಲವರು `ಅಯ್ಯೋ ಇದು ನಿಮ್ಮಿಂದ ಸಾಧ್ಯವಿಲ್ಲ' ಎಂದೂ ಹೇಳಿದ್ದರು. ಒಬ್ಬರು ನೀಡಿದ ಹುಮ್ಮಸ್ಸು ಹಾಗೂ ಇನ್ನು ಕೆಲವರು ಹಾಕಿದ ಸವಾಲು ಎರಡನ್ನೂ ಸಮಾನವಾಗಿ ಸ್ವೀಕರಿಸಿ ಚಾರಣ ಮಾಡಲು ಹೊರಟೇ ಬಿಟ್ಟೆವು.ಅಂತೂ ವ್ಯಾನ್ ಹಿಡಿದು ಕಿನ್ನಿಗೋಳಿಯಿಂದ 40 ಕಿ.ಮೀ. ದೂರದಲ್ಲಿರುವ ಬೆಳ್ತಂಗಡಿ ಕಡೆ ಹೊರೆಟೆವು.  ಜಮಲಾಬಾದ್ ಕೋಟೆ  ಬೆಳ್ತಂಗಡಿಯಿಂದ 8 ಕಿ.ಮಿ. ಮಂಗಳೂರಿನಿಂದ 65 ಕಿ.ಮಿ. ದೂರದಲ್ಲಿದೆ. ಅಲ್ಲಿ ಯಾವ ಆಹಾರ ಸಾಮಗ್ರಿಗಳೂ ಸಿಗುವುದಿಲ್ಲ, ಎಲ್ಲವೂ ನಾವೇ ಕೊಂಡೊಯ್ಯಬೇಕು ಎಂದು ತಿಳಿದಿದ್ದರಿಂದ ಹಣ್ಣು, ನೀರು, ಪುಲಾವ್ ಎಲ್ಲ ಕಟ್ಟಿಕೊಂಡು ವ್ಯಾನ್‌ನಲ್ಲಿ ಇರಿಸಿದೆವು. `ಎಲ್ಲಿಗೆ ಪಯಣ ಯಾವುದು ದಾರಿ' ಎಂದು ಗುಣಿಗುಣಿಸುತ್ತಾ ಸಾಗಿತ್ತು ನಮ್ಮ ಪ್ರಯಾಣ.ಅಂತೂ ಬೆಳ್ತಂಗಡಿಗೆ ಬಂದು ತಲುಪಿದೆವು. ಅಲ್ಲಿಂದ 8 ಕಿ.ಮೀ. ಪಯಣಿಸಿ ಜಮಲಾಬಾದ್ ಕೋಟೆ ಬಳಿ ನಿಂತೆವು. ಆ ಬೃಹತ್ತಾದ ಬೆಟ್ಟವನ್ನು ನೋಡಿ ನಮಗೆಲ್ಲ ಅಚ್ಚರಿ. ಕಿರು ಎವರೆಸ್ಟ್ ತರಹ ಅದು ಕಾಣಿಸಿ ಅಬ್ಬಾ.. ಎಂದು ರಾಗ ತಂತಾನೆ ಹೊರಟಿತು. ಹಸಿರು ಪಡೆಯ ಸದಸ್ಯರು `ಸಾರ್ ನಮ್ಮ ಆತ್ಮ ಸ್ಥೈರ್ಯ ಇಲ್ಲಿಗೇ ಕುಸಿದರೆ ಇದನ್ನು ಏರುವುದು ಹೇಗೆ? ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ' ಎಂದರು. ಕುರಿ ಮೇಯಿಸಲು ಹೋಗುತ್ತಿದ್ದ ತೇನ್‌ಸಿಂಗ್ ಎವರೆಸ್ಟ್ ನೋಡಿ ತಾನು ಒಂದು ದಿನ ಇದನ್ನು ಏರಲೇಬೇಕೆಂದು ಪಣ ತೊಟ್ಟು ಕೊನೆಗೂ ಅದನ್ನು ಸಾಧಿಸಿದ ಕಥೆಯನ್ನೆಲ್ಲ ನೆನಪು ಮಾಡಿಕೊಂಡು ಅಂತೂ ಬೆಟ್ಟ ಏರಲು ಆರಂಭಿಸಿಯೇ ಬಿಟ್ಟೆವು.ನೀರು, ಬ್ರೆಡ್, ಪಲಾವ್ ಹೀಗೆ ಎಲ್ಲ ಆಹಾರ ಸಾಮಗ್ರಿಗಳನ್ನು ನಮ್ಮ ವಿದ್ಯಾರ್ಥಿಗಳು ಹಿಡಿದುಕೊಂಡಿದ್ದರು. ಬೆಟ್ಟ ಏರುವಾಗ ಎಲ್ಲರಲ್ಲೂ ಉತ್ಸಾಹ ತುಂಬಿ ತುಳುಕುತ್ತಿತ್ತು. ಸ್ವಲ್ಪ ದೂರ ಹೋದೊಡನೆ ಆ ಗುಡ್ಡದ ಬುಡದಲ್ಲಿ ಪಾದೆಕಲ್ಲು, ಸಣ್ಣ ಸಣ್ಣ ಪೊದೆ ಕಾಲಿಗೆ ತಗುಲುತ್ತಿದ್ದಂತೆ ಈ ಹುಡುಗರೆಲ್ಲ `ಉಸ್ಸಪ್ಪಾ...' ಎಂದು ರಾಗ ಎಳೆಯತೊಡಗಿದರು.ಭಾರವಾದ ಕಾಲು

ಬೆಟ್ಟದ ಅರ್ಧದವರೆಗೆ ಹಾಗೂ ಹೀಗೂ ಹೋಗಬಹುದು. ಮುಂದೆ  ಸಾಗಿದಂತೆ ಹಾದಿ ಸ್ವಲ್ಪ ಕಠಿಣವೇ. ಕಾಲೆಲ್ಲಾ ಭಾರವಾದಂತೆ ಭಾಸ. ಗುರಿ ತಲುಪಬೇಕು ಎಂದರೆ 1876 ಮೆಟ್ಟಿಲು ಏರಬೇಕು. ಕಿರಿದಾದ ದಾರಿ ಬೇರೆ. `ಅಯ್ಯಯ್ಯೋ ಇದು ಆಗೋದಿಲ್ಲಪ್ಪ' ಅನ್ನೋ ಹಾಗೂ ಇಲ್ಲ. ಯಾಕೆಂದರೆ ಇದನ್ನು ಹೊರತು ಪಡಿಸಿದರೆ ಬೆಟ್ಟ ಏರಲು ಬೇರೆ ಯಾವ ದಾರಿಯೂ ಇಲ್ಲ. ಇದೇ ದಾರಿಯಲ್ಲಿ ಸಾಗಬೇಕು, ಇಲ್ಲವೇ ವಾಪಸಾಗಬೇಕು, ಇವೆಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಪ್ರಸಂಗ.ಅರ್ಧ ದಾರಿಗೆ ಬಂದಾಗಿದೆ. ವಾಪಸು ಹೋಗುವುದುಂಟೇ? ಸಾಧ್ಯವೇ ಇಲ್ಲ. ಸರಿ. ಆ ಕಿರುದಾರಿಯಲ್ಲಿಯೇ ಮುಂದುವರಿದದ್ದೂ ಆಯಿತು.ಕೋಟೆಯ ಗೋಡೆಯ ಪ್ರವೇಶ ದ್ವಾರ ಪ್ರವೇಶಿಸಿದಾಗ ಬಾವಿಯೊಂದು ಇದೆ. ಅದು ಆಗಿನ ಕಾಲದಲ್ಲಿ ನೀರು ಸಂಗ್ರಹಿಸುವ ಟ್ಯಾಂಕ್ ಆಗಿತ್ತಂತೆ. ಜೀರ್ಣಾವಸ್ಥೆಗೊಂಡಿರುವ ಕೋಟೆಯ ಅರೆ ಬರೆ ಗೋಡೆ ಅಲ್ಲಿ ಕಾಣಿಸುತ್ತದೆ. ಈ ಕೋಟೆ ಪ್ರವಾಸಿ ಸ್ಥಳವಾಗಿ ಇಲ್ಲದಿದ್ದರೂ, ಪ್ರಕೃತಿ ಉಪಾಸಕರಿಗೆ, ಚಾರಣಿಗರಿಗೆ ಸಂತಸ ನೀಡುತ್ತದೆ.ಅದ್ಭುತ ನೋಟ

ಅಲ್ಲಿಂದ ಮೇಲಕ್ಕೆ ಹತ್ತುವುದು ತುಂಬಾ ಪ್ರಯಾಸಕರ. ಕೆಲವರು ದೇವರನ್ನು, ಇನ್ನು ಕೆಲವರು ತೇನ್‌ಸಿಂಗ್ ಧ್ಯಾನ ಮಾಡುತ್ತಾ ಅಂತೂ ಬೆಟ್ಟದ ಮೇಲೆ ಏರಿದೆವು. ಆಹಾ! ಎಂಥ ಅದ್ಭುತ ನೋಟ. ಆ ತುದಿಯಲ್ಲಿ ನಿಂತಾಗ ಪ್ರಯಾಸವೆಲ್ಲ ಮಾಯ. ದಣಿವಿನ ಅರಿವೇ ಇರಲಿಲ್ಲ. ಎವೆರೆಸ್ಟ್ ಶಿಖರ ಏರಿದಷ್ಟೇ ಸಂತಸ. ಚಿಕ್ಕಮಕ್ಕಳಂತೆ ಎಲ್ಲರೂ ಕುಣಿದು ಕುಪ್ಪಳಿಸಿದೆವು. ಬೆಟ್ಟದ ಮೇಲೆ ನಿಂತು ನೋಡಿದರೆ ಇಡೀ ಬೆಳ್ತಂಗಡಿ, ಉಜಿರೆ, ಉಪ್ಪಿನಂಗಡಿ, ಸಮುದ್ರ ತೀರ ಚುಕ್ಕಿಗಳ ಹಾಗೆ ಕಾಣಿಸುತ್ತದೆ. ಎತ್ತರದಲ್ಲಿ ಒಂದು ಸ್ಥಳವಿದ್ದು, ಅದನ್ನು `ಟಿಪ್ಪು ಡ್ರಾಪ್' ಎಂದೇ ಕರೆಯಲಾಗುತ್ತಿದೆ. ರಾಜದ್ರೋಹ ಮಾಡಿದವರನ್ನು, ತಮ್ಮ ಗುಟ್ಟನ್ನು ಬೇರೆ (ಬ್ರಿಟಿಷರಿಗೆ) ತಲುಪಿಸಿದ ಬೇಹುಗಾರರನ್ನು ಇಲ್ಲಿಂದ ದೂಡಿ ಬಿಡಲಾಗುತ್ತಿತ್ತಂತೆ. ಇಲ್ಲಿ ಕೂಡ ನಿಂತು ಸೌಂದರ್ಯ ಸವಿದೆವು.

ಅಂತೂ ಅಲ್ಲಿಯೇ ತಂದ ತಿಂಡಿ ತಿಂದಾಯಿತು. ಮನೋರಂಜನಾ ಕಾರ್ಯಕ್ರಮ ಕೂಡ ಅಲ್ಲಿಯೇ ನಡೆಯಿತು.ಯಾವುದೋ ಲೋಕದಲ್ಲಿ ವಿಹರಿಸಿದ ಅನುಭವ. ಆದರೆ ಸಂಜೆಯಾಗುತ್ತಲೇ ಕೆಳಕ್ಕೆ ಇಳಿಯಲೇಬೇಕಾದ ಪ್ರಸಂಗ. ಏಕೆಂದರೆ ಅಲ್ಲಿ ಉಳಿದುಕೊಳ್ಳಲಿಕ್ಕೆ ವಸತಿ ಗೃಹಗಳು, ಪ್ರವಾಸಿ ಕೇಂದ್ರ ಯಾವುದೂ ಇಲ್ಲ. ಇಲ್ಲದಿದ್ದರೆ ಅಲ್ಲಿಯೇ ರಾತ್ರಿ ಅಲ್ಲಿ ಕಳೆದು ಬೆಳಿಗ್ಗೆ ಇಳಿಯಬಹುದಿತ್ತಲ್ಲ ಎಂಬ ಯೋಚನೆ ಎಲ್ಲರ ಮನದಲ್ಲಿ. ಭಾರವಾದ ಮನಸ್ಸಿನಿಂದ ಕೆಳಕ್ಕೆ ಇಳಿಯತೊಡಗಿದೆವು.ಏನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು. ಕಾಲು ನಾವು ಹೇಳಿದ ಹಾಗೆ ಕೇಳುತ್ತಿರಲ್ಲಿಲ್ಲ. ನನ್ನ ಆಲಸ್ಯದಿಂದ ಜಾರಿ ಮೂರುಸುತ್ತು ಉರುಳಿದೆ. ಸುದೈವವಶಾತ್ ಪೊದೆ ಸಿಕ್ಕಿದ್ದರಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಏನೂ ಆಗಲಿಲ್ಲ. ಬದುಕಿದೆಯಾ ಬಡಜೀವಿಯೇ ಎಂದುಕೊಂಡೆ. ನನಗಿಂತ ನನ್ನ ವಿದ್ಯಾರ್ಥಿಗಳಿಗೆ, ಪ್ರಾಧ್ಯಾಪಕರಿಗೆ ಗಾಬರಿಯಾಯ್ತು. ಪವಾಡ ಸದೃಶವಾಗಿ ಒಂದು ಸಣ್ಣ ತರಚು ಗಾಯ ಕೂಡ ಆಗಿರಲಿಲ್ಲ. ಅಂತೂ ಮರೆಯಲಾಗದ ಅನುಭವ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry