ಸೋಮವಾರ, ಮೇ 17, 2021
21 °C

ಏರಿಳಿತದ ಹಾದಿಯಲ್ಲಿ ಸಾಗಿಬಂದ ಜಗಮೋಹನ್ ದಾಲ್ಮಿಯ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಅನಿರೀಕ್ಷಿತ ಬೆಳವಣಿಗೆಯಿಂದ ಮತ್ತೊಮ್ಮೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಗಾದಿಗೆ ಏರಿದ ಜಗಮೋಹನ್ ದಾಲ್ಮಿಯ ಸಾಗಿ ಬಂದ ದಾರಿ ಕುತೂಹಲ ಹಾಗೂ ಕಷ್ಟದ ನಡೆಯಾಗಿದೆ.ಬಿಸಿಸಿಐ ಆಡಳಿತದಿಂದ `ಹೊರದಬ್ಬಿಸಿಕೊಂಡು' ಪುನಃ ಹೋರಾಟ ನಡೆಸಿ ಮತ್ತೊಮ್ಮೆ ಬದಲಾದ ಪರಿಸ್ಥಿತಿಯಲ್ಲಿ ಹಂಗಾಮಿ ಅಧ್ಯಕ್ಷರಾಗಿರುವ ದಾಲ್ಮಿಯಾ ಸಾಧನೆಯ ಹಾದಿ ಸುಲಭ್ದ್ದದಲ್ಲ.  ಕೋಲ್ಕತ್ತದ ಚರ್ಚ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೊರೈಸಿದ ಅವರು, 1979ರಲ್ಲಿ ಖಚಾಂಚಿಯಾಗಿ ಆಯ್ಕೆಯಾಗುವ ಮೂಲಕ ಬಿಸಿಸಿಐ ಸಂಪರ್ಕಕ್ಕೆ ಬಂದರು. ಬಿಸಿಸಿಐ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಭಾರತದ ಕ್ರಿಕೆಟ್ ಆಡಳಿತದಲ್ಲಿ ಮಾತ್ರವಲ್ಲದೇ 1997ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮುಖ್ಯಸ್ಥರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.ಹಣ ದುರ್ಬಳಕೆ ಮಾಡಿಕೊಂಡ ಆರೋಪವನ್ನು ಹೊತ್ತು ಸಾಗಿದ 73 ವರ್ಷದ ಹಿರಿಯಜ್ಜ ದಾಲ್ಮಿಯ ನಂತರ ಮುಂಬೈ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಾಕಷ್ಟು ಹೋರಾಟ ನಡೆಸಿದ್ದರು. ಆದರೆ, 2007ರಲ್ಲಿ ಎಲ್ಲಾ ಆರೋಪಗಳಿಂದ ಮುಕ್ತರಾಗಿ ಬಂದ ನಂತರ ದಾಲ್ಮಿಯ ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಗಾದಿಗೆ ಸ್ಪರ್ಧಿಸಿ ಜಯಭೇರಿ ಮೊಳಗಿಸಿದರು.2000ರಲ್ಲಿ ಐಸಿಸಿ ಅಧ್ಯಕ್ಷ ಸ್ಥಾನದ ಅಧಿಕಾರವಧಿ ಮುಕ್ತಾಯವಾದ ನಂತರ ಸುಮ್ಮನೆ ಕೂಡಲಿಲ್ಲ ಈ ಹಿರಿಯ ಜೀವ. ನಂತರದ ವರ್ಷದಲ್ಲಿಯೇ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎ.ಸಿ. ಮುತ್ತಯ್ಯ ಅವರನ್ನು ಮಣಿಸಿ ಕ್ರಿಕೆಟ್ ಮಂಡಳಿ ಅಧ್ಯಕ್ಷರಾದರು. ನಂತರ ಅಧ್ಯಕ್ಷರ ಅವಧಿ ಮುಗಿದರೂ ಕ್ರೀಡಾ ಆಡಳಿತದಲ್ಲೇ ತಮ್ಮದೇ ಆದ ರೀತಿಯಲ್ಲಿ `ಹಿಡಿತ' ಹೊಂದಿರುವ ಚಾಣಾಕ್ಷ ಕ್ರೀಡಾ ಆಡಳಿತಗಾರರಾಗಿದ್ದಾರೆ.ಅವಿವೇಕದ ಹೇಳಿಕೆ: ದಾಲ್ಮಿಯ

ಚೆನ್ನೈ (ಪಿಟಿಐ):
ಬಿಸಿಸಿಐ `ಹಂಗಾಮಿ' ಅಧ್ಯಕ್ಷರಾಗಿ ನೇಮಕಗೊಂಡಿರುವ ಜಗಮೋಹನ್ ದಾಲ್ಮಿಯ ಅವರು ಎನ್. ಶ್ರೀನಿವಾಸನ್ ಬೆಂಬಲಕ್ಕೆ ನಿಂತಿದ್ದಾರೆ. ಬಿಸಿಸಿಐ ತುರ್ತುಸಭೆಯನ್ನು `ಕಣ್ಣೊರೆಸುವ ತಂತ್ರ' ಎಂದು ಕರೆದಿರುವುದಕ್ಕೆ  ವಿರೋಧ ವ್ಯಕ್ತಪಡಿಸಿದ್ದಾರೆ.ಈ ಸಭೆ ಕಣ್ಣೊರೆಸುವ ತಂತ್ರ ಅಲ್ಲವೇ ಎಂಬ ಪ್ರಶ್ನೆಯನ್ನು ಪತ್ರಕರ್ತರೊಬ್ಬರು ಕೇಳಿದಾಗ ದಾಲ್ಮಿಯ, `ನೀವು ನೀಡಿರುವ ಹೇಳಿಕೆ ಅವಿವೇಕದಿಂದ ಕೂಡಿದೆ' ಎಂದು ಪ್ರತ್ಯುತ್ತರ ನೀಡಿದ್ದಾರೆ.`ಶ್ರೀನಿವಾಸನ್ ರಾಜೀನಾಮೆಗೆ ಆಗ್ರಹಿಸಲು ಇದು ಸೂಕ್ತ ಸಮಯ ಅಲ್ಲ ಎಂಬುದನ್ನು ಕಾರ್ಯಕಾರಿ ಸಮಿತಿ ಸದಸ್ಯರು ಮನಗಂಡಿದ್ದಾರೆ' ಎಂದು ದಾಲ್ಮಿಯ ಹೇಳಿದರು. ಸಮಿತಿಯಲ್ಲಿ ಯಾರೊಬ್ಬರೂ ಶ್ರೀನಿವಾಸನ್ ರಾಜೀನಾಮೆಗೆ ಆಗ್ರಹಿಸಲಿಲ್ಲ ಎಂದು ಅವರು ತಿಳಿಸಿದರು.`ರಾಜೀನಾಮೆ ನೀಡಲು ಯಾರೂ ಕೇಳಲಿಲ್ಲ. ಒಬ್ಬನೇ ಒಬ್ಬ ಸದಸ್ಯ ಕೂಡಾ ಮುಂದೆ ಬರಲಿಲ್ಲ ಎಂದು ನಾನು ಖಚಿತವಾಗಿ ಹೇಳಬಲ್ಲೆ. ಏಕೆಂದರೆ ರಾಜೀನಾಮೆಗೆ ಆಗ್ರಹಿಸುವ ಅಗತ್ಯವೇ ಇಲ್ಲ' ಎಂದು ಸಿಎಬಿ ಅಧ್ಯಕ್ಷರು ಶ್ರೀನಿವಾಸನ್‌ಗೆ ಬೆಂಬಲ ವ್ಯಕ್ತಪಡಿಸಿದರು.ಸಭೆಯಲ್ಲಿ ನಡೆದಿರುವ ಬೆಳವಣಿಗೆಗಳನ್ನು ಒಂದು `ಸಂಧಾನ' ಎಂದು ಕರೆಯಲು ಅವರು ಒಪ್ಪಲಿಲ್ಲ. `ಕಾರ್ಯಕಾರಿ ಸಮಿತಿ ಸದಸ್ಯರು ಎಲ್ಲ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಸಂಧಾನ ಅಥವಾ ರಾಜೀಸೂತ್ರ ನಡೆಯಲಿಲ್ಲ' ಎಂದಿದ್ದಾರೆ.`ಜಗದಾಳೆ, ಶಿರ್ಕೆ ಕೆಲಸ ನಿರ್ವಹಿಸುವೆ'

ಸಂಜಯ್ ಜಯದಾಳೆ ಮತ್ತು ಅಜಯ್ ಶಿರ್ಕೆ ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಹೇಳಿರುವುದು ದಾಲ್ಮಿಯಗೆ ಯಾವುದೇ ಚಿಂತೆ ಉಂಟುಮಾಡಿಲ್ಲ.`ಅವರು (ಜಗದಾಳೆ ಮತ್ತು ಶಿರ್ಕೆ) ವಾಪಸ್ ಬಂದರೆ ಮಂಡಳಿಯಲ್ಲಿ ಕಾರ್ಯದರ್ಶಿ ಮತ್ತು ಖಜಾಂಚಿಯ ಕೆಲಸಗಳನ್ನು ಮುಂದುವರಿಸುವರು. ಇಬ್ಬರೂ ವಾಪಸ್ ಬರದಿದ್ದರೆ, ಅವರ ಕೆಲಸ ನಿರ್ವಹಿಸುವ ಜವಾಬ್ದಾರಿ ನನಗೆ ಬಿಟ್ಟದ್ದು' ಎಂದಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.