ಏರಿ ದುರಸ್ತಿ: ಶೀಘ್ರ ಪೂರ್ಣಕ್ಕೆ ಸೂಚನೆ

7

ಏರಿ ದುರಸ್ತಿ: ಶೀಘ್ರ ಪೂರ್ಣಕ್ಕೆ ಸೂಚನೆ

Published:
Updated:

ಮಾಯಕೊಂಡ: ಜನರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಶೀಘ್ರವಾಗಿ ಕೊಡಗನೂರು ಕೆರೆ ಏರಿ ದುರಸ್ತಿ ಪೂರ್ಣಗೊಳಿಸಿ ಎಂದು ಸಚಿವ ಎಸ್.ಎ. ರವೀಂದ್ರನಾಥ್ ಗುತ್ತಿಗೆದಾರರಿಗೆ ಸೂಚಿಸಿದರು.ಸಮೀಪದ ಕೊಡಗನೂರು ಕೆರೆ ಏರಿ ದುರಸ್ತಿ ನಡೆಯುತ್ತಿದ್ದ ಸ್ಥಳಕ್ಕೆ ಈಚೆಗೆ ಭೇಟಿ ನೀಡಿಕಾಮಗಾರಿ ಪರಿಶೀಲಿಸಿ, ಅವರು ಮಾತನಾಡಿದರು.ಯಾವುದೇ ಹಳ್ಳಿಗೆ ಹೋದರೂ ಜನರು ಕೆರೆ ಏರಿ ದುರಸ್ತಿ ಕುರಿತೇ ಕೇಳುತ್ತಾರೆ. ಹೊಸದುರ್ಗ ಮಾರ್ಗವಾಗಿ ಸಂಚರಿಸುವ  ನೂರಾರು ಹಳ್ಳಿಗಳ ಪ್ರಯಾಣಿಕರಿಗೆ ಬಹಳ ತೊಂದರೆಯಾಗಿದೆ. ಶೀಘ್ರವಾಗಿ ಕಾಮಗಾರಿ ಮುಗಿಸದೇ ಹೋದರೆ ಜನ ನಮ್ಮನ್ನು ಸುಮ್ಮನೇ ಬಿಡುವುದಿಲ್ಲ.ಜನ ರೊಚ್ಚಿಗೆದ್ದರೆ ಕಷ್ಟ.  ನ. 1ಕ್ಕೆ ವಾಹನ ಸಂಚಾರಕ್ಕೆ ಅವಕಾಶ ಮಾಡಬೇಕಾದ ಒತ್ತಡವಿದೆ. ಸಾಕಷ್ಟು ಯಂತ್ರೋಪಕರಣ ಬಳಸಿ ಶೀಘ್ರವಾಗಿ ದುರಸ್ತಿ ಕಾಮಗಾರಿ ಮುಗಿಸಿ ಎಂದು ತಾಕೀತು ಮಾಡಿದರು.ಶಾಸಕ ಬಸವರಾಜ ನಾಯ್ಕ ಮಾತನಾಡಿ, ಕೆರೆ ಏರಿ ದುರಸ್ತಿ ಕಾರ್ಯ ಮುಗಿಸಲು ನ. 1ರ ಗಡುವು ನೀಡಲಾಗಿದೆ. ದುರಸ್ತಿ ಕೆಲಸ ಇನ್ನೂ ವೇಗವಾಗಿ ನಡೆಯಬೇಕು. ಹೀಗೆ ವಿಳಂಬವಾದರೆ ಜನಕ್ಕೆ ಉತ್ತರಿಸುವುದು ಕಷ್ಟ ಎಂದರು.ತರಳಬಾಳು ಜಗದ್ಗುರುಗಳಿಗೂ  ನ. 1ರ ಒಳಗಾಗಿ ಏರಿಯ ಮೇಲೆ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡುವುದಾಗಿ ಮಾತು ಕೊಟ್ಟಿದ್ದೇನೆ. ದುರಸ್ತಿ ಕಾರ್ಯ ತ್ವರಿತವಾಗಿ ಮುಗಿಸಿ, ನಮಗೂ ಗೌರವ ಉಳಿಸಿರಿ ಎಂದು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ಚುರುಕು ಮುಟ್ಟಿಸಿದರು.ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ತಿಪ್ಪೇಸ್ವಾಮಿ ಮಾತನಾಡಿ, ಅಗತ್ಯ ಕ್ರಮ ಕೈಗೊಂಡು ಶೀಘ್ರವಾಗಿ ಕಾಮಗಾರಿ ಮುಗಿಸುವ ಭರವಸೆ ನೀಡಿದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುರಿಗೇಂದ್ರಪ್ಪ, 22 ಕೆರೆ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಡಾ.ಮಂಜುನಾಥ್ ಗೌಡ, ಉಪಾಧ್ಯಕ್ಷ ಕರಿಬಸಪ್ಪ, ಪಕ್ಷದ ಮಾಯಕೊಂಡ ವಿಧಾನ ಸಭಾ ಕ್ಷೇತ್ರ ಘಟಕದ ಅಧ್ಯಕ್ಷ ರಮೇಶ್, ಬಿಜೆಪಿ ಮುಖಂಡ ಉಮೇಶನಾಯ್ಕ, ಕೊಡಗನೂರು ಮಂಜುನಾಥ್, ಅಣ್ಣಾಪುರ ಶಿವು  ಇದ್ದರು.      

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry