ಸೋಮವಾರ, ಮಾರ್ಚ್ 1, 2021
24 °C

ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ!

ದೇಶಭಕ್ತಿಗೆ ಸಂಬಂಧಿಸಿದಂತೆ ಹಲವು ವಸ್ತು–ವಿಷಯಗಳ ಸಿನಿಮಾಗಳು ಬಂದು ಹೋಗಿವೆ. ಆದರೆ, ‘ರಾಷ್ಟ್ರಧ್ವಜ’ ಕುರಿತ ಚಿತ್ರ ಇದುವರೆಗೆ ದೇಶದ ಯಾವ ಭಾಷೆಯಲ್ಲೂ ಬಂದಿಲ್ಲ. ಈಗ ಧ್ವಜದ ಕಥಾವಸ್ತು ಹೊಂದಿರುವ ಚಿತ್ರವೊಂದು ಇದೇ ಮೊದಲ ಬಾರಿಗೆ ತಯಾರಾಗಿದೆ, ಅದೂ ಕನ್ನಡದಲ್ಲಿ. ಹೆಮ್ಮೆಯ ಪ್ರತೀಕವಾದ ತ್ರಿವರ್ಣ ಧ್ವಜದ ಕಥೆಯನ್ನು ‘ಜುಲೈ 22, 1947’ ಹೆಸರಿನಲ್ಲಿ ಚಿತ್ರರೂಪಕ್ಕಿಳಿಸಿದ್ದಾರೆ ವಿಶಾಲ್‌ ರಾಜ್.



ಕಥೆಗಾರ ಹಾಗೂ ಪತ್ರಕರ್ತ ಸರಜೂ ಕಾಟ್ಕರ್ ಅವರ ಕಥೆ ಆಧರಿಸಿದ ಈ ಚಿತ್ರ ಬಿಡುಗಡೆಗೂ ಮುನ್ನವೇ ಗಮನ ಸೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಈ ಚಿತ್ರವನ್ನು ವೀಕ್ಷಿಸಿ ಚಿತ್ರತಂಡದ ಬೆನ್ನುತಟ್ಟಿದ್ದಾರೆ. ಚಿತ್ರವೊಂದರ ಬಗ್ಗೆ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದು ಇದೇ ಮೊದಲು.

‘ದೇಶಪ್ರೇಮಿಯೊಬ್ಬನ ಸುತ್ತ ನಡೆಯುವ ಕಥೆ ಇದಾದರೂ, ಚಿತ್ರದಲ್ಲಿ ಧ್ವಜವೇ ನಾಯಕ’ ಎಂದು ನಿರ್ದೇಶಕ ವಿಶಾಲ್‌ ರಾಜ್ ಮಾತು ಆರಂಭಿಸಿದರು. 

ಚಿತ್ರದ ಶೀರ್ಷಿಕೆಗೂ ಒಂದು ಹಿನ್ನೆಲೆ ಇದೆ. ಜುಲೈ 22, 1947ರಲ್ಲಿ ನಡೆದ ದೇಶದ ಸಾಂವಿಧಾನಿಕ ಸಭೆಯಲ್ಲಿ ಕೇಸರಿ, ಬಿಳಿ, ಹಸಿರು ಹಾಗೂ ಮಧ್ಯದಲ್ಲಿ ಅಶೋಕ ಚಕ್ರವಿರುವ ತ್ರಿವರ್ಣವನ್ನು ಧ್ವಜವನ್ನಾಗಿ ಅಂಗೀಕರಿಸಲಾಯಿತು. ಸ್ಮರಣೀಯವಾದ ಆ ದಿನಾಂಕವನ್ನೇ  ಚಿತ್ರಕ್ಕೆ ಶೀರ್ಷಿಕೆಯಾಗಿ ಇಡಲಾಗಿದೆ ಎಂದು ಅವರು ಹೇಳಿದರು.



‘ನೈಜ ಘಟನೆಯನ್ನು ಆಧರಿಸಿರುವ ಈ ಚಿತ್ರ ಇತಿಹಾಸ ಮತ್ತು ವರ್ತಮಾನದ ಬೆಸುಗೆಯಾಗಿದೆ. ಮೂರು ತಲೆಮಾರಿನ ಕಥೆ ಇದಾಗಿದೆ. ರಾಮಪ್ಪ, ಸತ್ಯಪ್ಪ, ಮೋಹನ್ ಎಂಬ ಮೂರು ಪ್ರಮುಖ ಪಾತ್ರಗಳ ಸುತ್ತ ಕಥೆ ಸಾಗುತ್ತದೆ’ ಎಂದು ಅವರು ಚಿತ್ರದ ತಿರುಳನ್ನು ಬಿಚ್ಚಿಟ್ಟರು.



ಚಿತ್ರಕ್ಕೆ ಬಣ್ಣ ಹಚ್ಚಿರುವ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ, ‘ರಾಷ್ಟ್ರಧ್ವಜ ಸ್ವಾತಂತ್ರ್ಯದ ಸಂಕೇತ. ಅದರ ಗೌರವವನ್ನು ಕಾಪಾಡೋದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಮಚ್ಚು, ಲಾಂಗುಗಳ ಮಧ್ಯೆ ಜನರ ಮನಸ್ಸನ್ನು ಶುದ್ಧಗೊಳಿಸುವ ಇಂತಹ ಚಿತ್ರಗಳು ಬರಬೇಕು.  ದೇಶಭಕ್ತಿಯ ಚಿತ್ರವಾದ್ದರಿಂದ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ’ ಎಂದರು. 



‘ಸಿನಿಮಾ ಜಾತ್ಯತೀತ ಅಲ್ಲ. ಭಾವಾತೀತ. ನಾವೆಲ್ಲರು ಅದರ ಅಸ್ಮಿತೆ  ಪಡೆದುಕೊಳ್ಳೋಣ’ ಎಂದು ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಸುಚೇಂದ್ರ ಪ್ರಸಾದ್ ಹೇಳಿದರು. ಗಾಯಕಿ ಸಂಗೀತಾ ಕಟ್ಟಿ ಚಿತ್ರದ ಸಂಗೀತ ನಿರ್ದೇಶಕಿ. ಇದುವರೆಗೆ ಹಾಡುಗಾರ್ತಿಯಾಗಿದ್ದ ಅವರು ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕಿಯಾಗಿ ಬಡ್ತಿ ಪಡೆದಿದ್ದಾರೆ. ‘ವಂದೇ ಮಾತರಂ’ ಗೀತೆಯನ್ನು ಚಿತ್ರದಲ್ಲಿ ಪ್ರಧಾನವಾಗಿ ಬಳಸಿಕೊಳ್ಳಲಾಗಿದೆಯಂತೆ.



ಉತ್ತಮವಾದ ಸಿನಿಮಾ ನಿರ್ಮಿಸಬೇಕು ಎಂಬ ಇರಾದೆ ಹೊಂದಿದ್ದ ಕೆ.ಎಂ. ನಂಜೇಗೌಡ ಈ ಚಿತ್ರದ ನಿರ್ಮಾಪಕ. ಚಿತ್ರ ಹಿಂದಿಗೆ ರಿಮೇಕ್ ಆಗಲಿದ್ದು, ಗುಜರಾತಿ ಭಾಷೆಗೆ ಡಬ್ ಆಗಲಿದೆಯಂತೆ. ಅಚ್ಯುತ್ ಕುಮಾರ್, ಸುಧಾರಾಣಿ, ಶೋಭರಾಜ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದು, ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.