ಶನಿವಾರ, ಜೂಲೈ 4, 2020
22 °C

ಏರುತ್ತಿರುವ ಸಾವು, ನಿಲ್ಲದ ಮರುಕಂಪನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏರುತ್ತಿರುವ ಸಾವು, ನಿಲ್ಲದ ಮರುಕಂಪನ

ಫುಕುಶಿಮಾ/ ಟೋಕಿಯೊ (ಪಿಟಿಐ): ಭೂಕಂಪ ತಂದಿತ್ತ ಸುನಾಮಿ ಹೊಡೆತಕ್ಕೆ ನಲುಗಿ ಹೋಗಿರುವ ಜಪಾನಿನಲ್ಲಿ ಒಂದೆಡೆ ಸಾವಿನ ಸಂಖ್ಯೆ ಏರುತ್ತಿದ್ದರೆ ಮತ್ತೊಂದೆಡೆ ವಿಕಿರಣ ಪ್ರಮಾಣ ಅಪಾಯಕಾರಿ ಮಟ್ಟ ಮೀರುತ್ತಿದೆ.ಅತ್ಯಂತ ವಿರಳ ಸಂದರ್ಭದಲ್ಲಿ ಮಾತ್ರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ಜಪಾನಿನ ದೊರೆ ಅಕಿಹಿಟೊ ರಾಷ್ಟ್ರಕ್ಕೆ ಎದುರಾಗಿರುವ ಪರಮಾಣು ಗಂಡಾಂತರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಟಿ.ವಿ. ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ 77 ವರ್ಷದ ಅಕಿಹಿಟೊ, ಭೂಕಂಪಕ್ಕೊಳಗಾದ ಪ್ರದೇಶದಲ್ಲಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಲು ಕರೆ ನೀಡಿದ್ದಾರೆ.

ಈ ಮಧ್ಯೆ ಭೂಕಂಪಪೀಡಿತ ಪ್ರದೇಶದಲ್ಲಿ 80,000 ಸ್ವಯಂ ರಕ್ಷಣಾ ಪಡೆಯ ಸಿಬ್ಬಂದಿ ಹಾಗೂ ಪೊಲೀಸರು ಪರಿಹಾರ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಭೂಕಂಪ- ಸುನಾಮಿಯಿಂದಾಗಿ ಸಾವಿಗೀಡಾದವರ ಸಂಖ್ಯೆ 11,000 ಮೀರಬಹುದೆಂದು ಅಧಿಕಾರಿಗಳು ಅಂದಾಜಿಸಿದ್ದರೂ ಅದಿನ್ನೂ ಖಚಿತಪಟ್ಟಿಲ್ಲ. ಒಟ್ಟು 12 ಪ್ರಾಂತ್ಯಗಳಲ್ಲಿ 3,676 ಜನ ಸಾವಿಗೀಡಾಗಿದ್ದಾರೆಂದು ರಾಷ್ಟ್ರೀಯ ಪೊಲೀಸ್ ಏಜೆನ್ಸಿ ಖಚಿತಪಡಿಸಿದೆ.

ಆದರೆ ಭೂಕಂಪದಿಂದ ತೀವ್ರ ಹಾನಿಗೊಳಗಾದ ಆರು ಪ್ರಾಂತ್ಯಗಳಲ್ಲಿ 7843 ಜನ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಸಾವಿನ ಸಂಖ್ಯೆ ಹೆಚ್ಚುವ ಆತಂಕ ವ್ಯಕ್ತಪಡಿಸಿದ್ದಾರೆ. ರಾಷ್ಟ್ರದ ಈಶಾನ್ಯ ಭಾಗದ ಒಟ್‌ಸುಚಿ ಪಟ್ಟಣವೊಂದರಲ್ಲೇ 8000 ಜನ ನಾಪತ್ತೆಯಾಗಿದ್ದಾರೆಂದು ಬಿಬಿಸಿ ವರದಿ ಮಾಡಿದೆ.

ಸಂತ್ರಸ್ತರಿಗಾಗಿ ನಿರ್ಮಿಸಿರುವ 2600ಕ್ಕೂ ಹೆಚ್ಚು ಶಿಬಿರಗಳಲ್ಲಿ 5.3 ಲಕ್ಷ ಜನ ಆಶ್ರಯ ಪಡೆದಿದ್ದಾರೆ. ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಇವಟೆ, ಮಿಯಾಗಿ, ಫುಕುಶಿಮಾ ಪ್ರಾಂತ್ಯಗಳು 32,800 ತಾತ್ಕಾಲಿಕ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿವೆ.

ರಾಷ್ಟ್ರದಲ್ಲಿ ನೆಲೆಸಿರುವ ವಿದೇಶೀಯರ ಬಗ್ಗೆ ಮಾಹಿತಿ ಒದಗಿಸಲು ವಲಸೆ ಇಲಾಖೆ ನಿರ್ಧರಿಸಿದೆ. ರಾಷ್ಟ್ರದಲ್ಲಿದ್ದ ವಿದೇಶೀಯರು ಈಗಾಗಲೇ ತಾಯ್ನಾಡಿಗೆ ವಾಪಸಾಗಿದ್ದಾರೋ, ಇಲ್ಲವೋ ಎಂಬುದನ್ನು ತಿಳಿಸಲು ನ್ಯಾಯಾಂಗ ಇಲಾಖೆಯ ವಲಸೆ ಘಟಕ ಮುಂದಾಗಿದೆ. ಫೋನ್, ಫ್ಯಾಕ್ಸ್ ಅಥವಾ ಇಮೇಲ್ ಮೂಲಕ ಮಾಹಿತಿ ಪಡೆಯಬಹುದು ಎಂದು ಅದು ತಿಳಿಸಿದೆ.ಕಗ್ಗತ್ತಲಿನಲ್ಲಿ ಟೋಕಿಯೊ: ರಾಷ್ಟ್ರದಲ್ಲಿ ವಿದ್ಯುತ್ತಿಗೆ ತೀವ್ರ ಅಭಾವ ಉಂಟಾಗಿದ್ದು, ಟೆಪ್ಕೊ ರಾಜಧಾನಿ ಟೋಕಿಯೊ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಪದೇ ಪದೇ ಲೋಡ್‌ಶೆಡ್ಡಿಂಗ್ ಮಾಡುತ್ತಿದೆ. ಮನೆ ಮಠ ಕಳೆದುಕೊಂಡಿರುವ ಬಹುತೇಕರು ತೀವ್ರ ಚಳಿ ಹಾಗೂ ಹಿಮದ ನಡುವೆ ದಿನ ದೂಡಬೇಕಾಗಿದೆ.

ಮರುಕಂಪನಗಳು ಸಹ ಮುಂದುವರಿದಿವೆ. ರಿಕ್ಟರ್ ಮಾಪಕದಲ್ಲಿ 6ರಷ್ಟು ತೀವ್ರತೆಯ ಕಂಪನಗಳು ಟೋಕಿಯೊ ಹಾಗೂ ಆಸುಪಾಸಿನಲ್ಲಿ ಬುಧವಾರ ಕೂಡ ಸಂಭವಿಸಿದವು.17000 ಕೋಟಿ ನೆರವು: ತತ್ತರಿಸಿರುವ ಆರ್ಥಿಕತೆಯನ್ನು ಪುನಃ ಹಳಿ ಮೇಲಕ್ಕೆ ತರುವ ದಿಸೆಯಲ್ಲಿ ಬ್ಯಾಂಕ್ ಆಫ್ ಜಪಾನ್ ನಗದು ಮಾರುಕಟ್ಟೆಗೆ ಇದೀಗ ಪುನಃ 17000 ಕೋಟಿ ಡಾಲರ್ ಹಣವನ್ನು ಕೊಡಲು ಮುಂದಾಗಿದೆ. ಇದರೊಂದಿಗೆ  ತನ್ನ ತುರ್ತು ನಿಧಿಯಿಂದ ಬ್ಯಾಂಕ್ ಒಟ್ಟು 70,000 ಕೋಟಿ ಡಾಲರ್‌ಗಳನ್ನು ನೀಡಿದಂತಾಗಿದೆ.

100 ಶತಕೋಟಿ ಡಾಲರ್ ನಷ್ಟ  ಅಂದಾಜು

ವಾಷಿಂಗ್ಟನ್ (ಐಎಎನ್‌ಎಸ್): ಭೂಕಂಪ ಹಾಗೂ ಸುನಾಮಿಯಿಂದಾಗಿ ಜಪಾನ್‌ಗೆ 100 ಶತಕೋಟಿ ಡಾಲರ್ ಷ್ಟವಾಗಿರುವ ಅಂದಾಜಿದೆ.

ಈ ಪೈಕಿ ವಿಮಾ ರಂಗವೊಂದೇ 35 ಶತಕೋಟಿ ಡಾಲರ್ ಹಣವನ್ನು ಭರಿಸಬೇಕಾಗಬಹುದು ಎಂದು ಅಮೆರಿಕದ ಪ್ರಮುಖ ದೈನಿಕವೊಂದು ಅಂದಾಜಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.