ಶನಿವಾರ, ಆಗಸ್ಟ್ 15, 2020
21 °C

ಏರೋನಾಟಿಕ್ಸ್ಗೆ ದ್ರಾವಿಡ್ ನೆನಪು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏರೋನಾಟಿಕ್ಸ್ಗೆ ದ್ರಾವಿಡ್ ನೆನಪು...

ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಆಟದ ವೈಖರಿಯನ್ನು, ಅವರ ಸರಳ ನಡೆನುಡಿ ಕುರಿತು ಅನೇಕರು ಬಹುವಿಧವಾಗಿ ವರ್ಣಿಸಿದ್ದರೆ, `ಬೆಳೆವ ಸಿರಿಯನ್ನು ಮೊಳಕೆ~ಯಲ್ಲೇ ಕಂಡ ಅನುಭವ ನನ್ನದು.ಅವರು ಕ್ರಿಕೆಟ್ ಲೋಕದಲ್ಲಿ ಅತ್ಯಂತ ಎತ್ತರಕ್ಕೆ ಏರುವ ಮೊದಲು ಎಚ್‌ಎಎಲ್ ತಂಡಕ್ಕೆ ಆಡಿದ್ದರೆನ್ನುವ ಸಂಗತಿ ಬಹಳ ಮಂದಿಗೆ ಗೊತ್ತಿಲ್ಲ. ನಾನು ಕಾರ್ಯದರ್ಶಿಯಾಗಿದ್ದ ಸಂದರ್ಭ ಇಂತಹ ಒಬ್ಬ ಶ್ರೇಷ್ಠ ಆಟಗಾರ ಎಚ್‌ಎಎಲ್ ತಂಡಕ್ಕೆ ಆಡಿದ್ದರು ಎಂಬುದನ್ನು ಹೇಳಲು ಹೆಮ್ಮೆ ಎನಿಸುತ್ತದೆ. ಎಚ್‌ಎಎಲ್‌ಗೆ ಆಡುತ್ತಿದ್ದ ದ್ರಾವಿಡ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದಾಗ ಅಂದು ನಮ್ಮ ಆನಂದಕ್ಕೆ ಪಾರವೇ ಇರಲಿಲ್ಲ.  1992ರಲ್ಲಿ ನಾನು ಬೆಂಗಳೂರಿನ ಹಿಂದೂಸ್ತಾನ್ ವಿಮಾನ ಕಾರ್ಖಾನೆಯ ಕ್ರೀಡಾಸಂಘದ ಕಾರ್ಯದರ್ಶಿಯಾಗಿದ್ದಾಗ ಅವರನ್ನು ಮೊದಲ ಬಾರಿಗೆ ಕಂಡಿದ್ದೆ. ಆಗ ನಮ್ಮ ಕಾರ್ಖಾನೆಯ ಕ್ರೀಡಾ ಸಂಸ್ಥೆಯಲ್ಲಿ ಫುಟ್‌ಬಾಲ್, ಕ್ರಿಕೆಟ್, ಹಾಕಿ, ಬ್ಯಾಸ್ಕೆಟ್‌ಬಾಲ್ ಮತ್ತು ಕಬಡ್ಡಿ  ಕ್ರೀಡೆಗಳನ್ನು ಆಡಲಾಗುತ್ತಿತ್ತು. ಈ ಎಲ್ಲಾ ಕ್ರೀಡೆಗಳಲ್ಲಿ ನಮ್ಮ ಆಟಗಾರರು ಹೆಸರು ಮಾಡಿದ್ದರು. ಆದರೆ ಅವರಲ್ಲಿ ಅನೇಕ ಹಿರಿಯ ಆಟಗಾರರು ಕ್ರೀಡಾ ಜೀವನದಿಂದ ನಿವೃತ್ತರಾಗಿ, ಕಾರ್ಖಾನೆಯ ವಿವಿಧ ಹುದ್ದೆಗಳಿಗೆ ಹೋಗಲು ತರಬೇತಿಯನ್ನು ಪಡೆಯಲಾರಂಭಿಸಿದರು. ಇದರಿಂದ ತಂಡಗಳಿಗೆ ನುರಿತ ಆಟಗಾರರ ಕೊರತೆ ಉಂಟಾಯಿತು.ಕಾರ್ಖಾನೆಗಳು, ಬ್ಯಾಂಕ್ ಮತ್ತು ಕಂಪೆನಿಗಳು ಕಾರ್ಮಿಕ ವೆಚ್ಚವನ್ನು ಕಡಿಮೆ ಮಾಡಲು ಹೊಸ ಆಟಗಾರರನ್ನು ಶಾಶ್ವತವಾಗಿಯಾಗಲಿ, ಹಂಗಾಮಿಯಾಗಿಯಾಗಲಿ ಸೇರಿಸಿಕೊಳ್ಳುತ್ತಿರಲಿಲ್ಲ. ಇನ್ನೂ ಉದ್ಯೋಗದಲ್ಲಿರದ (ವಿವಿ, ರಾಜ್ಯಗಳನ್ನು ಪ್ರತಿನಿಧಿಸಿದ) ಕಿರಿಯ ಕ್ರೀಡಾಪಟುಗಳನ್ನು ನಮ್ಮ ಕ್ಲಬ್‌ಗಳಿಗೆ ಸೇರಿಸಿಕೊಂಡು ಗೌರವ ಧನವನ್ನು ನೀಡಿ ಆಡಿಸಲು ಕರ್ನಾಟಕದ ಕ್ರೀಡಾ ಸಂಘಗಳು ಪರವಾನಗಿಯನ್ನು ನೀಡುತ್ತಿದ್ದವು.ಆ ದಿನಗಳಲ್ಲಿ ನಮ್ಮ  ಕ್ರಿಕೆಟ್ ತಂಡಕ್ಕೆ ಆಟಗಾರರ ಕೊರತೆ ಉಂಟಾಗಿತ್ತು. ಆ ಸಮಯದಲ್ಲಿ ನಮ್ಮ  ತಂಡದ ನಾಯಕ ಕೆ.ಜಿ. ಶೇಖರ್ (ರಣಜಿ ಪಂದ್ಯಕ್ಕೆ ಕರ್ನಾಟಕವನ್ನು ವೇಗದ ಬೌಲರ್ ಆಗಿ ಪ್ರತಿನಿಧಿಸುತ್ತಿದ್ದರು. ಈಗ ಉತ್ತರ ಅಮೆರಿಕಾದಲ್ಲಿ ನೆಲೆಸಿದ್ದಾರೆ) ಇಬ್ಬರು ಯುವ ಆಟಗಾರರನ್ನು ನಮ್ಮ  ಪರವಾಗಿ ಆಡಲು ಕರೆದುಕೊಂಡು ಬಂದರು.ಅವರೇ ರಶೀದ್ ಮೊಹಿದ್ದೀನ್ ಹಾಗೂ ರಾಹುಲ್ ದ್ರಾವಿಡ್. ಆಗ ತಂಡದಲ್ಲಿ ಬಿ.ಕೆ. ಕುಮಾರ್ (ಈಗಿನ ನಾಯಕ), ನಂದನ್, ಅಪ್ಪಯ್ಯ, ಶೇಷಾದ್ರಿ ದೀಕ್ಷಿತ್, ಅನಂತರಾಜ್ ಮುಂತಾದವರು ಆಡುತ್ತಿದ್ದರು. ರಶೀದ್ 23 ವರ್ಷಗಳ ಕೆಳಗಿನ ಆಟಗಾರರ ತಂಡಕ್ಕೆ ನಾಯಕರಾಗಿದ್ದರು.ರಾಹುಲ್ ದ್ರಾವಿಡ್ ನಮ್ಮ ಸಂಸ್ಥೆ ಪರವಾಗಿ ಆಡುತ್ತಾರೆಂದು ನನಗೆ ನಂಬಿಕೆಯೇ ಬರಲಿಲ್ಲ. ಆಗ ಇನ್ನೂ ವಿದ್ಯಾರ್ಥಿಯಾಗಿ, ಚಿಕ್ಕ ವಯಸ್ಸಿನವರಾಗಿದ್ದರೂ ರಣಜಿ ಟೋಫಿ ಕ್ರಿಕೆಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಹಿರಿಯ ಮಟ್ಟದ ಆಟಗಾರರಾಗಿ ಅವರಿಗೆ ಬಹು ಬೇಡಿಕೆ ಇತ್ತು. ಆದರೂ ಅವರು ಕೆ.ಜಿ. ಶೇಖರ್ ಮೇಲಿನ ಹೆಚ್ಚಿನ ಅಭಿಮಾನದ ಕಾರಣದಿಂದ ನಮ್ಮ ಸಂಸ್ಥೆಯನ್ನು ಪ್ರತಿನಿಧಿಸಲು ಒಪ್ಪಿದರು.ಆದರೆ ಕರ್ನಾಟಕ ಕ್ರೀಡಾ ಸಂಸ್ಥೆಯಿಂದ ನಾವು ಲಿಖಿತ ಪರವಾನಗಿ ಪಡೆಯಬೇಕಾಗಿತ್ತು. ಆಗ ಸಿ. ನಾಗರಾಜ್ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದರು. ನನಗೆ ಅವರು ಜಿ.ಆರ್. ವಿಶ್ವನಾಥ್ ಮೂಲಕ ಮೊದಲೇ ಪರಿಚಿತರಾಗಿದ್ದವರು. ಅವರಲ್ಲಿಗೆ ಹೋಗಿ  ಪರವಾನಗಿ ಕೋರಿ ಪತ್ರವನ್ನಿಟ್ಟಾಗ, ಅವರು ಹೇಳಿದ ಮಾತು ಇನ್ನೂ ನೆನಪಿನಲ್ಲಿ ಉಳಿದಿದೆ.`ಏನ್ರೀ ಸುಬ್ಬರಾವ್, ರಾಹುಲ್ ದ್ರಾವಿಡ್‌ನ ಏನಂತ ತಿಳಿಕೊಂಡ್ರಿ? ಅವರು ಕರ್ನಾಟಕದ ಭವಿಷ್ಯದ ಕ್ರಿಕೆಟ್ ತಾರೆ. ಅವರು ನಿಮ್ಮ ಸಂಸ್ಥೆಗೆ ಆಡ್ತಾರೇನ್ರಿ? ನಿಮಗೆ ಹುಚ್ಚು. ರಾಹುಲ್ ದ್ರಾವಿಡ್ ಎಲ್ಲಿ? ಎಚ್‌ಎಎಲ್ ಎಲ್ಲಿ? ಇನ್ನಾರನ್ನಾದ್ರು ಹುಡುಕಿಕೊಳ್ಳಿ. ಅವರು ನಿಮ್ಮ ಸಂಸ್ಥೆಗೆ ಬರಲಿಕ್ಕಿಲ್ಲ~ ಎಂದು ಪ್ರತಿಕ್ರಿಯಿಸಿದ್ದರು.  ಆದರೆ ಮಾರನೆಯ ದಿನವೇ ದ್ರಾವಿಡ್ ನನ್ನ ಹತ್ತಿರ ಬಂದು  `ಸರ್, ಖಂಡಿತ ನಿಮ್ಮ ಕ್ಲಬ್‌ಗೇ ನಾನು ಆಡೋದು~ ಎಂದು ಮಾತು ಕೊಟ್ಟರು. ಮಾತ್ರವಲ್ಲ ಆ ಮಾತನ್ನು ಉಳಿಸಿಕೊಂಡರು. ಕರ್ನಾಟಕ ಕ್ರಿಕೆಟ್ ಸಂಸ್ಥೆ ಪರವಾನಗಿಯನ್ನೂ ನೀಡಿತು.

ಅವರು ಸುಮಾರು ಎರಡು ವರ್ಷಗಳ ಕಾಲ ನಮ್ಮ ಸಂಸ್ಥೆಯನ್ನು ಸೀನಿಯರ್ ಡಿವಿಷನ್ ವಿಭಾಗದಲ್ಲಿ ಪ್ರತಿನಿಧಿಸಿದ್ದರು. ಅವರು ಆಡಿದಷ್ಟೂ ಕಾಲ ನಮ್ಮ  ಕ್ರಿಕೆಟ್ ತಂಡ, ಸೀನಿಯರ್ ಡಿವಿಷನ್‌ನಲ್ಲಿ, ಹಿಂದೂ ಟ್ರೋಫಿ ಟೂರ್ನಿಯಲ್ಲಿ, ಕೈಗಾರಿಕಾ ಪಂದ್ಯಾವಳಿಗಳಲ್ಲಿ  ಗಮನಾರ್ಹ ಪ್ರದರ್ಶನವನ್ನು ನೀಡಿದ್ದೇ ಅಲ್ಲದೆ, ಚಾಂಪಿಯನ್ ಕೂಡಾ ಆಗಿತ್ತು. ಅವರ ಕ್ರಿಕೆಟ್ ಆಟದ ಒಂದು ಉದಾಹರಣೆಯನ್ನು ಕೊಡುತ್ತೇನೆ. ವಿಜಯವಾಡದಲ್ಲಿ ಅಖಿಲ ಭಾರತ ಸಾರ್ವಜನಿಕ ಉದ್ದಿಮೆಗಳ ನಿರ್ಣಾಯಕ ಪಂದ್ಯದಲ್ಲಿ ನಾವು ಎದುರಾಳಿಯಾದ ಐ.ಟಿ.ಐ. ಬೆಂಗಳೂರು ವಿರುದ್ಧ 50 ಓವರ್‌ಗಳಲ್ಲಿ 271 ರನ್ ಮಾಡಬೇಕಾಗಿತ್ತು.ನಮ್ಮವರು ಕೇವಲ 36 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡರು. ಆದರೆ ರಾಹುಲ್ ದ್ರಾವಿಡ್  150 ರನ್ ಗಳಿಸಿ ಮತ್ತಾವ ವಿಕೆಟ್ ಪತನವೂ ಆಗದಂತೆ ನೋಡಿಕೊಂಡು ತಂಡವನ್ನು ಗೆಲುವಿನೆಡೆಗೆ ಮುನ್ನಡೆಸಿದ್ದರು.ಆಗ ನ್ಯೂಜಿಲೆಂಡ್ ತಂಡ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿತ್ತು. ಬಿಸಿಸಿಐ 19 ವರ್ಷ ವಯಸ್ಸಿನೊಳಗಿನವರ ತಂಡವನ್ನು ಪ್ರಕಟಿಸಿ, ರಾಹುಲ್ ದ್ರಾವಿಡ್ ಅವರನ್ನು ನಾಯಕರನ್ನಾಗಿ ಮಾಡಿ ಮರುದಿನವೇ ದೆಹಲಿಗೆ ಬರಬೇಕೆಂದು ಕರೆ ಕಳುಹಿಸಿತು. ಅವರಿಗೆ ಕೂಡಲೇ ದೆಹಲಿಗೆ ಹೋಗುವ ಅವಕಾಶವನ್ನು ನಮ್ಮ ಸಂಸ್ಥೆ ಮಾಡಿಕೊಟ್ಟಾಗ ಅವರ ಮುಖದಲ್ಲಿ ಕಂಡ ಸಂತಸ ಇನ್ನೂ ಮರೆಯುವಂತಿಲ್ಲ. ಆದರೆ ದೆಹಲಿಯಲ್ಲಿ ಮಳೆಯ ಕಾರಣ ಆ ಪಂದ್ಯ ರದ್ದಾಯಿತು.ದ್ರಾವಿಡ್ ನಮ್ಮ ತಂಡಕ್ಕೆ ಆಡುತ್ತಿದ್ದಾಗ ನನಗೆ ಅವರ ತಂದೆಯ ಪರಿಚಯವಾಯಿತು. ನಮ್ಮಲ್ಲಿ ಪಂದ್ಯ ಇದ್ದಾಗ ಪುತ್ರನ ಆಟವನ್ನು ನೋಡಲಿಕ್ಕೆ ಅವರು ಬರುತ್ತಿದ್ದರು. ಒಮ್ಮೆ ನಾನು `ನಿಮ್ಮ ಮಗ ಶೀಘ್ರದಲ್ಲೇ ಭಾರತದ ಉತ್ತಮ ಕ್ರಿಕೆಟಿಗನಾಗುತ್ತಾನೆ~ ಎಂದೆ. ಅದಕ್ಕೆ ದ್ರಾವಿಡ್ ತಂದೆ, `ಹೌದು ನನ್ನ ಮಗನಲ್ಲಿ ಪ್ರತಿಭೆ ಇದೆ. ಆಯ್ಕೆ ಸಮಿತಿಯವರಿಗೆ ಮನಸ್ಸಿರಬೇಕು~ ಎಂದಿದ್ದರು.ಆ ಸಂದರ್ಭದಲ್ಲಿ ಜಿ.ಆರ್. ವಿಶ್ವನಾಥ್ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದರು. ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ನಲ್ಲಿ ವಿಶ್ವಕಪ್ ಕ್ರಿಕೆಟ್ ನಡೆಯುತ್ತಿತ್ತು. ವಿಶ್ವಕಪ್‌ನಲ್ಲಿ ಪಾಲ್ಗೊಂಡ ಭಾರತ ತಂಡಕ್ಕೆ ದ್ರಾವಿಡ್ ಆಯ್ಕೆಯಾಗಲಿಲ್ಲ.ಕೆಲವು ದಿನಗಳ ಕಳೆದ ಬಳಿಕ ನಾನು ದ್ರಾವಿಡ್‌ರನ್ನು ಆಯ್ಕೆಮಾಡದಿರಲು ಏನು ಕಾರಣ ಎಂದು ವಿಶ್ವನಾಥ್ ಅವರಲ್ಲಿ ಕೇಳಿದೆ. ಆಗ ಅವರು, `ದ್ರಾವಿಡ್ ಭಾರತದ ಭವಿಷ್ಯದ ಆಟಗಾರ, ಏಕದಿನ ಪಂದ್ಯದ ಮೂಲಕ ಅವರನ್ನು ಕ್ರಿಕೆಟ್ ಕ್ಷೇತ್ರಕ್ಕೆ ತರಬಾರದು, ಟೆಸ್ಟ್ ಪಂದ್ಯದ ಮೂಲಕವೇ ತರಬೇಕು. ಅದರಲ್ಲೂ ಆಸ್ಟ್ರೇಲಿಯ ಪಿಚ್‌ಗಳ ಮೂಲಕವಂತೂ ತರಲೇಬಾರದು ಎಂಬುದು ಎಲ್ಲ ಸದಸ್ಯರ ಒಮ್ಮತದ ಅಭಿಪ್ರಾಯವಾಗಿತ್ತು~ ಎಂದರು.ಹಾಗೆಯೇ ಆಯಿತು. ಭಾರತದ ತಂಡ ವಿಶ್ವಕಪ್‌ನಲ್ಲಿ ಸೋಲು ಅನುಭವಿಸಿತು. ನಂತರ ಭಾರತ ತಂಡ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡ್‌ಗೆ ತೆರಳುವ ಸಂದರ್ಭ ದ್ರಾವಿಡ್ ಆಯ್ಕೆಯಾದರು. ಸೌರವ್ ಗಂಗೂಲಿ ಕೂಡಾ ತಂಡದಲ್ಲಿದ್ದರು. ಇಬ್ಬರೂ ಅತ್ಯುತ್ತಮವಾಗಿ ಆಡಿದರು. ದ್ರಾವಿಡ್ ಲಾರ್ಡ್ಸ್  ಪಂದ್ಯದಲ್ಲಿ 95 ರನ್ ಗಳಿಸಿದರು. ಗಂಗೂಲಿ ಇಂಗ್ಲೆಂಡ್ ವಿರುದ್ಧ ಎರಡು ಶತಕಗಳನ್ನು ಗಳಿಸಿದರು. ಅನಂತರ ಇಬ್ಬರೂ ಹಿಂತಿರುಗಿ ನೋಡಲೇ ಇಲ್ಲ. ಎಲ್ಲ ಪಂದ್ಯಗಳಲ್ಲೂ, ಚೆನ್ನಾಗಿ ಆಡಿ  ಮನೆ ಮಾತಾದರು.

ಕ್ರಿಕೆಟ್‌ಗೆ ವಿದಾಯ ಹೇಳಿದರೂ, ವಿಶ್ವದ ಎಲ್ಲಾ ಕ್ರಿಕೆಟ್ ಆಟಗಾರರ ಹಾಗೂ ಪ್ರೇಕ್ಷಕರ ಕಣ್ಮಣಿಯಾಗಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.