ಏಲಕ್ಕಿ ಸಂಶೋಧನಾ ಕೇಂದ್ರ ಸುವರ್ಣ ಸಂಭ್ರಮ ಇಂದು

7

ಏಲಕ್ಕಿ ಸಂಶೋಧನಾ ಕೇಂದ್ರ ಸುವರ್ಣ ಸಂಭ್ರಮ ಇಂದು

Published:
Updated:

ಮಡಿಕೇರಿ: ಇಲ್ಲಿಗೆ ಸಮೀಪದ ಅಪ್ಪಂಗಳದಲ್ಲಿರುವ ಏಲಕ್ಕಿ ಸಂಶೋಧನಾ ಕೇಂದ್ರದ ಸುವರ್ಣ ಮಹೋತ್ಸವ ಡಿ.20 ರಿಂದ 22 ರವರೆಗೆ 3 ದಿನಗಳ ಕಾಲ ನಡೆಯಲಿದೆ.ಕೇಂದ್ರ ಸರ್ಕಾರದ ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಅಧೀನದಲ್ಲಿರುವ ಈ ಕೇಂದ್ರವು ದೇಶದಲ್ಲಿಯೇ ಏಲಕ್ಕಿ ಕೃಷಿ ಸಂಶೋಧನೆಗೆ ಮೀಸಲಾಗಿರುವ ಏಕೈಕ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.1961ರಲ್ಲಿ ಅಂದಿನ ಮೈಸೂರು ಸರ್ಕಾರ ಅಸ್ತಿತ್ವದಲ್ಲಿದ್ದಾಗ ಅಪ್ಪಂಗಳದಲ್ಲಿ ಸ್ಥಾಪನೆಗೊಂಡ ಏಲಕ್ಕಿ ಸಂಶೋಧನಾ ಕೇಂದ್ರವು, 1972 ರಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ ಅಧೀನಕ್ಕೆ ಒಳಪಟ್ಟಿತು.ನಂತರ ಕಾಸರಗೋಡಿನಲ್ಲಿರುವ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರಕ್ಕೆ ಹಸ್ತಾಂತರಿಸಲ್ಪಟ್ಟ ಈ ಕೇಂದ್ರವು 1986 ರಿಂದ ಕಲ್ಲಿಕೋಟೆಯಲ್ಲಿರುವ ಸಾಂಬಾರ ಬೆಳೆಗಳ ಸಂಶೋಧನಾ ಕೇಂದ್ರದ ಅಧೀನಕ್ಕೆ ಒಳಪಟ್ಟಿತು.ಕಳೆದ 50 ವರ್ಷಗಳಲ್ಲಿ ಅಪ್ಪಂಗಳದ ಏಲಕ್ಕಿ ಸಂಶೋಧನಾ ಕೇಂದ್ರವು ಏಲಕ್ಕಿ, ಕಾಫಿ, ಕರಿಮೆಣಸು ಸೇರಿದಂತೆ ಸಾಂಬಾರ್ ಬೆಳೆಗಳ ಸಂಶೋಧನಾ ತಂತ್ರಜ್ಞಾನದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ.ಕೊಡಗು ಜ್ಲ್ಲಿಲೆ ವ್ಯಾಪ್ತಿಯ ಸುಮಾರು 15,000 ಹೆಕ್ಟೇರ್ ವ್ಯಾಪ್ತಿಯ ಕೃಷಿಕರು ಈ ಕೇಂದ್ರದ ನೆರವು ಪಡೆದಿದ್ದಾರೆ. ಅಪ್ಪಂಗಳ -1, ಐಐಎಸ್‌ಆರ್ ವಿಜೇತ ಮತ್ತು ಐಐಎಸ್‌ಆರ್ ಅವಿನಾಶ್ ಎಂಬ ಮೂರು ತಳಿಗಳ ಅತ್ಯುತ್ತಮ ಫಸಲು ದೊರಕುವ ಏಲಕ್ಕಿ ತಳಿಗಳನ್ನು ಸಂಶೋಧಿಸಿ, ಕೃಷಿಕರಿಗೆ ನೀಡಿದ ಹೆಗ್ಗಳಿಕೆಯೂ ಅಪ್ಪಂಗಳ ಕೇಂದ್ರಕ್ಕಿದೆ.ಕೊಡಗು ಮತ್ತು ಈ ವ್ಯಾಪ್ತಿಯ ಕೃಷಿಕರಿಗೆ ವಿವಿಧ ಬೆಳೆಗಳಿಗೆ ಸಂಬಂಧಿಸಿದಂತೆ ಅಗತ್ಯ ಸಲಹೆ, ಮಾಹಿತಿ ನೀಡುತ್ತಿರುವ ಅಪ್ಪಂಗಳ ಏಲಕ್ಕಿ ಸಂಶೋಧನಾ ಕೇಂದ್ರವು ಏಲಕ್ಕಿ, ಕರಿಮೆಣಸು ಸೇರಿದಂತೆ ವಿವಿಧ ಸಾಂಬಾರ್ ಬೆಳೆಗಳಿಗೆ ಸಮಸ್ಯೆ ತಲೆದೋರಿದಾಗ ಅದಕ್ಕೆ ಪರಿಹಾರೋಪಾಯಗಳನ್ನು ಹುಡುಕುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.ಅಪ್ಪಂಗಳ ಏಲಕ್ಕಿ ಸಂಶೋಧನಾ ಕೇಂದ್ರದ ಸುವರ್ಣ ಮಹೋತ್ಸವ ಸಮಾರಂಭವನ್ನು ಡಿ.20 ರಂದು ಕೃಷಿ ಸಂಶೋಧನೆ ಮತ್ತು ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಹಾಗೂ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ಮಹಾನಿರ್ದೇಶಕರಾದ ಡಾ.ಎಸ್. ಅಯ್ಯಪ್ಪನ್ ಉದ್ಘಾಟಿಸಲಿದ್ದು, ಹಾಗೂ ತೋಟಗಾರಿಕಾ ವಿಭಾಗದ ಸಹ ಮಹಾನಿರ್ದೇಶಕ                ಡಾ. ಎನ್.ಕೆ. ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಮತ್ತು ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಡಿ. 21 ರಂದು ಕೃಷಿಕರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.ಈ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ ಕೇಂದ್ರದ ಹಾಲಿ ಮತ್ತು ಮಾಜಿ ವಿಜ್ಞಾನಿಗಳು, ತಜ್ಞರು, ಸಿಬ್ಬಂದಿ ವರ್ಗಕ್ಕೆ ಸನ್ಮಾನ ಏರ್ಪಡಿಸಲಾಗಿದ್ದು, ಇದೇ ಸಂದರ್ಭದಲ್ಲಿ ಏಲಕ್ಕಿ ಕೃಷಿಯಲ್ಲಿನ ಅವಕಾಶಗಳು ಮತ್ತು ಸವಾಲುಗಳು - ಸಾಗಬೇಕಾದ ರೀತಿ ಮತ್ತು ತಂತ್ರಜ್ಞಾನದ ಬಳಕೆಯ ಮೂಲಕ ಕೃಷಿಕರು ಸಾಗಬೇಕಾದ ರೀತಿ, ಇತರ ಬೆಳೆಗಳಾದ ಕರಿಮೆಣಸು, ಕಾಫಿ ಮತ್ತು ತೋಟಗಾರಿಕಾ ಬೆಳೆಗಳ ಬಗ್ಗೆ ವಿಚಾರಸಂಕಿರಣ ಕೂಡ ಜರುಗಲಿದೆ.ಅಪ್ಪಂಗಳ ಏಲಕ್ಕಿ ಸಂಶೋಧನಾ ಕೇಂದ್ರದ ಸುವರ್ಣ ಸಂಭ್ರಮ ಪ್ರಯುಕ್ತ ರಾಜ್ಯದ ವಿವಿಧೆಡೆಗಳ 15 ಸಂಘಟನೆಗಳು ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ.ಹೆಚ್ಚಿನ ಮಾಹಿತಿಗಾಗಿ ಏಲಕ್ಕಿ ಸಂಶೋಧನಾ ಕೇಂದ್ರ, ಅಪ್ಪಂಗಳ ದೂರವಾಣಿ ಸಂಖ್ಯೆ 08272-245451, 08272-245514 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry