ಬುಧವಾರ, ಅಕ್ಟೋಬರ್ 16, 2019
21 °C

ಏಲಿಯನ್ಗಳು ತಾರೆಗಳಾದ ಬಗೆ...

Published:
Updated:

`ದರ್ಶನ್ ಮತ್ತು ನಾನು ಜೋಡಿಯಾಗಿ ನಟಿಸಬೇಕು ಎಂದು ಪಣತೊಟ್ಟು ಹಲವರು ತಿರುಗಾಡುತ್ತಿದ್ದಾರೆ. ಆದರೆ ಆ ಕಾಲ ಯಾವಾಗ ಬರುತ್ತದೋ ಗೊತ್ತಿಲ್ಲ. ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಇಬ್ಬರೂ ಒಟ್ಟಿಗೆ ಆಡುವುದು ಖಂಡಿತ~ ಎಂದರು ನಟ ಸುದೀಪ್.ಸಂದರ್ಭ: `ಚಿಂಗಾರಿ~ ಚಿತ್ರದ ಧ್ವನಿಸುರಳಿ ಬಿಡುಗಡೆ ಸಮಾರಂಭ. `ಸರಿಯಾದ ಸಮಯದಲ್ಲಿ ಸರಿಯಾದ ವಿಕ್ಟರಿ ಸಿಕ್ಕಿದೆ~ ಎಂದರು ಅವರು.  ದರ್ಶನ್ ಅಭಿನಯದ `ಸಾರಥಿ~ ಚಿತ್ರದ ಕುರಿತು ಅವರು ಹೇಳಿದ್ದು. `ನನ್ನ ಗೆಳೆಯನಿಗೆ ಅಂತಹ ಯಶಸ್ಸಿನ ಅಗತ್ಯವಿತ್ತು. ತಪ್ಪು ಎಲ್ಲರೂ ಮಾಡುತ್ತಾರೆ ಆದರೆ ಕೆಲವರು ಮಾತ್ರ ಸಿಕ್ಕಿಹಾಕಿಕೊಳ್ತಾರೆ. ಕೆಟ್ಟ ಸಂದರ್ಭಗಳು ಬಂದು ಹೋಗುತ್ತವೆ. ಆತ ಒಬ್ಬ ಒಳ್ಳೆಯ ಮನುಷ್ಯ~ ಎಂಬ ಸಮರ್ಥನೆಯೂ ಅವರಿಂದ ಹೊರಬಿತ್ತು.ನಂತರ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರನ್ನು ಹೊಗಳುವ ಸರದಿ ಬಂತು. `ಪರಮಾತ್ಮ~ ಚಿತ್ರದ `ಕತ್ಲಲ್ಲಿ ಕರಡೀಗೆ...~ ಹಾಗೂ `ವಿಷ್ಣುವರ್ಧನ~ ಚಿತ್ರದ `ಎದೆಯೊಳಗೆ ಗಿಟಾರ್~ ಹಾಡುಗಳ ಬಗ್ಗೆ ಮನಸಾರೆ ಮಾತನಾಡಿದರು. `ಎದೆಯೊಳಗೆ ಗಿಟಾರ್~ ಹಾಡು ಕೇಳಿದಾಗ ಸುದೀಪ್ ಅವರಿಗೆ ಮೊದಲು ಅದು ತಮಗೆ ಹೊಂದುವುದಿಲ್ಲ ಎಂದುಕೊಂಡರಂತೆ.

 

ದರ್ಶನ್ ಅಂತಹ ನಟರಿಗೆ ಇದು ಲಾಯಕ್ಕು ಎಂಬುದು ಅವರ ಅಭಿಪ್ರಾಯವಾಗಿತ್ತಂತೆ. ಆದರೆ ಅವರ ಪುಟಾಣಿ ಮಗಳು ಹಾಡನ್ನು ಪದೇ ಪದೇ ಕೇಳಲಾರಂಭಿಸಿದಾಗ ಅವರು ತಮ್ಮ ಅಭಿಪ್ರಾಯ ಬದಲಿಸಿಕೊಂಡರು. ಈಗ ಅವರ ಮತ್ತೊಂದು ನಿರ್ಧಾರವೂ ಬದಲಾಗಿದೆ. ಯಾವುದೇ ಸಂಗೀತ ನಿರ್ದೇಶಕನ ಹಾಡನ್ನು ತನ್ನ ಮಗಳಿಗೆ ಕೇಳಿಸಲು ನಿರ್ಣಯ ಕೈಗೊಂಡಿದ್ದಾರೆ.ಹೊಗಳಿಕೆ `ಚಿಂಗಾರಿ~ ನಿರ್ದೇಶಕ ಎ.ಹರ್ಷ ಅವರತ್ತ ತಿರುಗಿತು. `ಒಬ್ಬ ನೃತ್ಯ ನಿರ್ದೇಶಕ ಸಾಹಸ ಪ್ರಧಾನ ಚಿತ್ರವನ್ನು ನಿರ್ದೇಶಿಸುವುದು ಸುಲಭದ ಮಾತಲ್ಲ. ಅದೂ ದರ್ಶನ್ ಅವರಂತಹ ಆಕ್ಷನ್ ಪ್ರಧಾನ ನಟರನ್ನು ತೆರೆಯ ಮೇಲೆ ಖಡಕ್ಕಾಗಿ ತೋರಿಸುವುದು ಸಲೀಸಲ್ಲ. ಅಂತಹ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿರುವ ಹರ್ಷ ತನ್ನ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ~ ಎಂದು ಬೆನ್ನು ತಟ್ಟಿದರು.ನಟ ದರ್ಶನ್, `ಚಿತ್ರರಂಗಕ್ಕೆ ಕಾಲಿಟ್ಟ ಹೊಸತರಲ್ಲಿ ನಮ್ಮಿಬ್ಬರನ್ನೂ `ಏಲಿಯನ್~ಗಳ (ಅನ್ಯಗ್ರಹ ಜೀವಿ) ರೀತಿ ಇದ್ದಾರೆ ಎಂದು ಟೀಕಿಸಿದವರು ಇದ್ದರು. ಆದರೆ ಅದೆಲ್ಲಾ ಸುಳ್ಳಾಯಿತು. ಸುದೀಪ್ ಅವರ ವಿಷ್ಣುವರ್ಧನ ಶತದಿನೋತ್ಸವ ಆಚರಿಸಲಿ~ ಎಂದು ಹಾರೈಸಿದರು.`ಈಗ ಹೊಸಬರ ಕಾಲ. ಇಬ್ಬರೂ ಕೊಂಚ ಕೊಂಚವೇ ಪಕ್ಕಕ್ಕೆ ಸರಿಯುತ್ತಿದ್ದೇವೊ ಎನಿಸುತ್ತಿದೆ. ಇದಕ್ಕೆ ಇಬ್ಬರೂ ತೊಟ್ಟಿರುವ ಕನ್ನಡಕವೇ ಸಾಕ್ಷಿ~ ಎಂದರು. ಅವರ ಮಾತಿನಲ್ಲಿ ಹಾಸ್ಯದ ಹೊನಲಿತ್ತು.`ಹೊಡೆದಾಟ ಮತ್ತು ಹಾಡುಗಳು ಹದವಾಗಿ ಬೆರೆತ ಚಿತ್ರ `ಚಿಂಗಾರಿ~. ವಿದೇಶಗಳಲ್ಲಿ ಫೈಟ್‌ಗಳನ್ನು ನಡೆಸಲಾಗಿದೆ. ಅದೊಂದು ವಿಶಿಷ್ಟ ಅನುಭವ. ಚಿತ್ರ ಎಲ್ಲ ವರ್ಗದ ಪ್ರೇಕ್ಷಕರನ್ನು ತಲುಪುವದರಲ್ಲಿ ಸಂಶಯವೇ ಇಲ್ಲ~ ಎಂಬ ವಿಶ್ವಾಸ ಅವರೊಳಗಿತ್ತು.ನಟಿ ದೀಪಿಕಾ ಕಮಯ್ಯ ಅವರಿಗೆ `ಚಿಂಗಾರಿ~ ಮೊದಲ ಚಿತ್ರ. ಮೊದಮೊದಲು ಚಿತ್ರೀಕರಣದ ಸಂದರ್ಭದಲ್ಲಿ ಅಂಜಿಕೆ ಉಂಟಾಗಿದ್ದನ್ನು ಅವರು ಸ್ಮರಿಸಿದರು. ಆದರೆ ಕಲಾವಿದರ, ತಂತ್ರಜ್ಞರ ಸಹಕಾರದಿಂದ ಚಿತ್ರೀಕರಣ ಸುಸೂತ್ರವಾಗಿ ನಡೆಯಿತು ಎಂದರು. ಇದೊಂದು ಸ್ಟೈಲಿಶ್ ಚಿತ್ರ ಎಂದು ಹೇಳುವುದನ್ನು ಆಕೆ ಮರೆಯಲಿಲ್ಲ.

ನಟಿ ಭಾವನಾ ಅವರಿಗೆ ಚಿತ್ರದಲ್ಲಿ ವಿಶೇಷ ಪಾತ್ರ ಇದೆಯಂತೆ. ಪಾತ್ರ ಎಂಥದ್ದು ಎಂಬ ಗುಟ್ಟನ್ನು ಅವರು ಬಿಟ್ಟುಕೊಡಲಿಲ್ಲ. ಅದನ್ನು ಪ್ರೇಕ್ಷಕರೇ ನೋಡಿ ಹೇಳಬೇಕು ಎನ್ನುತ್ತ ನಗೆ ಚೆಲ್ಲಿದರು.ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ದರ್ಶನ್‌ಗಾಗಿ ಮಧುರಗೀತೆಯೊಂದನ್ನು ಸಂಯೋಜಿಸಿದ್ದಾರಂತೆ. ದರ್ಶನ್ ಅವರಿಗಾಗಿ ಇಂಥದ್ದೊಂದು ಹಾಡನ್ನು ರೂಪಿಸಬೇಕು ಎಂಬುದು ಅವರ ಕನಸಾಗಿತ್ತಂತೆ. ಸುಮಾರು ಚಿತ್ರಗಳಲ್ಲಿ ಈ ಬಗ್ಗೆ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲವಂತೆ.ಚಿತ್ರದ ನಿರ್ದೇಶಕ ಎ.ಹರ್ಷ, ನಿರ್ಮಾಪಕರಾದ ಮಹದೇವ್, ಮನುಗೌಡ, ಕಲಾವಿದರಾದ ಅರುಣ್ ಸಾಗರ್, ಸೃಜನ್ ಲೋಕೇಶ್, ತೇಜು, ಪ್ರವೀಣ್, ಯಶಸ್, ಮಧು, ಕಲಾನಿರ್ದೇಶಕ ಮೋಹನ್ ಬಿ ಕೆರೆ, ವಿತರಕರಾದ ಬಾಷಾ, ಪ್ರಸಾದ್ ಮುಂತಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು. 

 

 

Post Comments (+)