ಏಳು ಮರಿ ಹೆತ್ತ ಬೂದು ತೋಳ

7

ಏಳು ಮರಿ ಹೆತ್ತ ಬೂದು ತೋಳ

Published:
Updated:

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯದ ಬೂದು ತೋಳ (ಇಂಡಿಯನ್ ಗ್ರೇ ವೊಲ್ಫ್) ಜೋಡಿ ಏಳು ಮರಿಗಳಿಗೆ ಜನ್ಮ ನೀಡಿವೆ. ಈ ಮೂಲಕ ಮೃಗಾಲಯವು ತೀರ ಅಳಿವಿನಂಚಿನ ವನ್ಯಜೀವಿಗಳ ಸಂತಾನ ಅಭಿವೃದ್ಧಿಯಲ್ಲಿ ದೇಶದಲ್ಲೆ ಇನ್ನೊಂದು ಮಹತ್ವದ ಸಾಧನೆ ಮಾಡಿದಂತಾಗಿದೆ. ಬಹುಶಃ ಮೈಸೂರು ಮೃಗಾಲಯ ಈ ತೋಳಗಳ ಸಂತಾನ ಅಭಿವೃದ್ಧಿ ಮಾಡಿದ ದೇಶದ 2ನೇ ಮೃಗಾಲಯ ಎನಿಸಿದೆ.ಈ ಬೂದು ತೋಳ ಜೋಡಿಯನ್ನು 2010 ಮೇ ತಿಂಗಳಲ್ಲಿ ಗದಗದ ಮಿನಿ ಮೃಗಾಲಯದಿಂದ ಮೈಸೂರು ಮೃಗಾಲಯಕ್ಕೆ ತರಲಾಗಿತ್ತು. ಗದಗದಲ್ಲಿ ತೋಳಗಳ ಸಂತಾನ ಅಭಿವೃದ್ಧಿಗೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಅಲ್ಲದೆ ಹಾಕಿದ ಮರಿಯನ್ನು ತಾಯಿ ತೋಳ ತಿಂದು ಹಾಕುತ್ತಿತ್ತು (ಸ್ವ ಸಂತಾನ ಭಕ್ಷಕ). ತೀರ ಅಳಿವಿನಂಚಿನ ಲ್ಲಿರುವ ಈ ತೋಳಗಳನ್ನು ಸಂರಕ್ಷಣೆ ಹಾಗೂ ಸಂತಾನ ಅಭಿವೃದ್ಧಿ ದೃಷ್ಟಿಯಿಂದ ಮೈಸೂರು ಮೃಗಾಲಯಕ್ಕೆ ತರಲಾಗಿತ್ತು.ಕಳೆದ ನವೆಂಬರ್ ತಿಂಗಳಲ್ಲಿ ಗಂಡಿನ ಜೊತೆಗೂಡಿದ ನಂತರ ಹೆಣ್ಣು ತೋಳ 63 ದಿನಗಳ ಗರ್ಭಾವಧಿ ಯ ನಂತರ ತನ್ನ ಆವರಣದ ಮುಕ್ತ ಪ್ರದೇಶದಲ್ಲಿ ತಾನಾಗಿಯೇ ಕೊರೆದು ನಿರ್ಮಿಸಿಕೊಂಡಿದ್ದ ಬಿಲದಲ್ಲಿ ಕಳೆದ ಜ. 13ರಂದು ಏಳು ಮರಿಗಳಿಗೆ ಜನ್ಮ ನೀಡಿತು. ತಾಯಿ ಮತ್ತು ಮರಿಗಳಿಗೆ ತೊಂದರೆ ಆಗುವುದನ್ನು  ತಪ್ಪಿಸಲು ಪ್ರವಾಸಿಗರ ವೀಕ್ಷಣೆಗೆ ಅವಕಾಶವನ್ನು ನಿರಾಕರಿಸಲಾಗಿತ್ತು.ತಾಯಿಯು ಆಹಾರ ಮತ್ತು ನೀರಿನ ಸಲುವಾಗಿ ಬಿಲದಿಂದ ಆಗಾಗ ಹೊರ ಬರುತ್ತಿದ್ದರೆ, ತಂದೆಯು  ಬಿಲದ ಬಳಿಯಲ್ಲಿಯೇ ಇದ್ದು ತಾಯಿ ಮತ್ತು ಮರಿಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿದೆ. ತಾಯಿ ಮತ್ತು  ಮರಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಾಂಸಾಹಾರದ ಜೊತೆಗೆ ಸತ್ವಯುತ ಆಹಾರ ಪೂರೈಸ ಲಾಗುತ್ತಿದೆ. ಇದೀಗ ಜನಿಸಿದ ಒಂದು ತಿಂಗಳ ಬಳಿಕ ಮರಿಗಳನ್ನು ತಾಯಿಯ ಜೊತೆ ಆವರಣದಲ್ಲಿ ವೀಕ್ಷಿಸಬಹುದು. ಮರಿಗಳು ಈಗ ತಾಯಿಯ ಸಹಾಯದಿಂದ ಮಾಂಸವನ್ನು ತಿನ್ನಲು ಆರಂಭಿಸಿವೆ. ಮೃಗಾಲಯದಲ್ಲಿ ತೋಳಗಳಿಗೆ ಕ್ರಮಬದ್ಧವಾದ ಸಂಸ್ಕರಿಸಲ್ಪಟ್ಟ ಕೋಳಿ ಮತ್ತು ಎಲುಬು ಸಹಿತ ದನದ ಮಾಂಸ, ಜೀವಸತ್ವ ಹಾಗೂ ಜನಿಜಾಂಶವುಳ್ಳ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ.ಅಳವಿನಂಚಿನ ತೋಳ: ಕ್ಯಾನಿಡೇ ವಂಶಕ್ಕೆ ಸೇರಿರುವ ಭಾರತೀಯ ಬೂದು ತೋಳದ ವೈಜ್ಞಾನಿಕ ಹೆಸರು ‘ಕ್ಯಾನಿಸ್ ಲೂಪಸ್’. ಈ ಜಾತಿಯ ಪ್ರಾಣಿಗಳಲ್ಲಿ ಅತಿ ಸಣ್ಣ ಗಾತ್ರದಾಗಿದ್ದು ಅದರ ದೇಹ ರಚನೆ ಸಾಕು ನಾಯಿಗಳ ರೂಪವನ್ನು ಹೋಲುವುದು.ಅವುಗಳನ್ನು 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಧಿಸೂಚನೆ ಒಂದರಲ್ಲಿ ಸೇರಿಸಲಾಗಿದೆ. 2003ರಲ್ಲಿ ಇಡೀ ಭಾರತದಲ್ಲಿ ಅವುಗಳ ಸಂಖ್ಯೆ ಸುಮಾರು 2000ದಿಂದ 3000 ಎಂದು ಅಂದಾಜು ಮಾಡಲಾಗಿದೆ. ಅಲ್ಲದೆ ಅವುಗಳ ಸಂಖ್ಯೆ ವೇಗವಾಗಿ ಕುಸಿಯುತ್ತಿರುವುದನ್ನು ದಾಖಲಿಸಲಾಗಿದೆ.ಹೀಗಾಗಿ ಸಂರಕ್ಷಣೆಯ ದೃಷ್ಟಿಯಿಂದ ಈ ತೋಳಗಳು ಹುಲಿಯಷ್ಟೇ ಮಹತ್ವ ಪಡೆದಿವೆ. ಕರ್ನಾಟಕದ ಬಳ್ಳಾರಿ, ರಾಯಚೂರು, ಗುಲ್ಬರ್ಗ ಮತ್ತಿತರ ಜಿಲ್ಲೆಗಳ ಕುರುಚಲು ಕಾಡು, ಕಲ್ಲು ಬಂಡೆಗಳ ಪ್ರದೇಶಗಳಲ್ಲಿ ಅವು ಕಾಣಲು ಸಿಗುತ್ತಿದ್ದವು. ಆದರೆ ಈಗ ತೀರ ಅಪರೂಪ ಎನಿಸಿವೆ. ಜಿಂಕೆ, ಕೃಷ್ಣಮೃಗ, ಮೊಲ, ಹೆಗ್ಗಣ ಹಾಗೂ ನಾಡಿಗೆ ಬಂದರೆ ಕುರಿ, ಮೇಕೆ ಅವುಗಳ ಆಹಾರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry