ಶನಿವಾರ, ಮೇ 8, 2021
19 °C

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತ-ಮಲೇಷ್ಯಾ ಪಂದ್ಯ ಡ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓರ್ಡೊಸ್, ಚೀನಾ (ಪಿಟಿಐ): ಸೋಲಿನ ಅಪಾಯದ ಸುಳಿಗೆ ಸಿಲುಕದ ಭಾರತ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಚಾಂಪಿಯನ್‌ಷಿಪ್‌ನ ಬುಧವಾರದ ಪಂದ್ಯವನ್ನು ಮಲೇಷ್ಯಾ ವಿರುದ್ಧ 2-2 ಗೋಲುಗಳಿಂದ `ಡ್ರಾ~ ಮಾಡಿಕೊಂಡಿತು.ಆತಿಥೇಯ ಚೀನಾ ವಿರುದ್ಧ ಗೆದ್ದು ಆನಂತರ ಜಪಾನ್ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ಭಾರತಕ್ಕೆ ದಕ್ಷಿಣ ಕೊರಿಯಾ ವಿರುದ್ಧ ಜಯ ಸಿಕ್ಕಿತ್ತು. ಆದರೆ ಏಷ್ಯನ್ ಕ್ರೀಡಾಕೂಟದ ಚಾಂಪಿಯನ್ ಮಲೇಷ್ಯಾ ಎದುರು ಗೆಲುವು ಪಡೆಯುವುದು ಸಾಧ್ಯವಾಗಲಿಲ್ಲ. ಆದರೆ ಸೋಲಿನ ಆಘಾತ ಎದುರಾಗಲಿಲ್ಲ ಎನ್ನುವುದು ದೊಡ್ಡ ಸಮಾಧಾನ. ಈ ಚಾಂಪಿಯನ್‌ಷಿಪ್‌ನಲ್ಲಿ ನಿರಾಸೆಗೆ ಅವಕಾಶವಿಲ್ಲದಂತೆ ಉತ್ತಮ ಆಟವಾಡಿರುವ ರಾಜ್ಪಾಲ್ ಸಿಂಗ್ ನಾಯಕತ್ವದ ತಂಡದ ಖಾತೆಯಲ್ಲಿ ಈಗ ಎಂಟು ಪಾಯಿಂಟುಗಳಿವೆ.ಮಲೇಷ್ಯಾ ವಿರುದ್ಧ ಗೆಲುವು ಪಡೆದಿದ್ದರೆ ಭಾರತವು ಹತ್ತು ಪಾಯಿಂಟುಗಳೊಂದಿಗೆ ಫೈನಲ್‌ನಲ್ಲಿನ ಸ್ಥಾನವನ್ನು ಖಚಿತ ಪಡಿಸಿಕೊಳ್ಳುತಿತ್ತು. ಆದರೆ ಈಗ ಅದು ಪಾಕಿಸ್ತಾನ ವಿರುದ್ಧದ ಪಂದ್ಯದವರೆಗೆ ಕಾಯಬೇಕಾಗಿದೆ. ಪಾಕಿಸ್ತಾನವು ಬುಧವಾರದ ಲೀಗ್ ಪಂದ್ಯದಲ್ಲಿ 3-2 ಗೋಲುಗಳ ಅಂತರದಿಂದ ದಕ್ಷಿಣ ಕೊರಿಯಾವನ್ನು ಮಣಿಸಿದೆ.ಪಾಕಿಸ್ತಾನವು ಒಂಬತ್ತು ಪಾಯಿಂಟುಗಳೊಂದಿಗೆ ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎಂಟು ಪಾಯಿಂಟುಗಳೊಂದಿಗೆ ಭಾರತ ಸದ್ಯ ಎರಡನೇ ಸ್ಥಾನದಲ್ಲಿದೆ. ಜಪಾನ್ (7) ಹಾಗೂ ದಕ್ಷಿಣ ಕೊರಿಯಾ (6) ನಂತರದಲ್ಲಿವೆ. ಶುಕ್ರವಾರ ನಡೆಯುವ ಪಾಕ್ ಹಾಗೂ ಭಾರತ ನಡುವಣ ಲೀಗ್ ಪಂದ್ಯವು ಒಂದು ರೀತಿಯಲ್ಲಿ ಸೆಮಿಫೈನಲ್ ಪಂದ್ಯವೇ ಎನಿಸಿದೆ. ಒಂದು ವೇಳೆ ಈ ಪಂದ್ಯದಲ್ಲಿನ ಫಲಿತಾಂಶವು ಭಾರತದ ಪರವಾಗದಿದ್ದರೆ ಇನ್ನೊಂದು ಲೆಕ್ಕಾಚಾರಕ್ಕಾಗಿ ಕಾಯಬೇಕಾಗುತ್ತದೆ. ಆದರೆ ಮತ್ತೊಂದು ಲೀಗ್ ಪಂದ್ಯದಲ್ಲಿ ಚೀನಾ ಎದುರು ಕೊರಿಯಾ ಗೆಲ್ಲಬೇಕು.ಕೋಚ್ ಮೈಕಲ್ ನಾಬ್ಸ್ ಮಾರ್ಗದರ್ಶನದಲ್ಲಿ ಹೊಸ ಉತ್ಸಾಹ ಪಡೆದಿರುವ ಭಾರತವು ಮಲೇಷ್ಯಾಕ್ಕೆ ಕಬ್ಬಿಣದ ಕಡಲೆ ಆಗಿದ್ದು ವಿಶೇಷ. ಬುಧವಾರದ ಪಂದ್ಯದಲ್ಲಿ ಆರಂಭದಲ್ಲಿಯೇ ಸಿಕ್ಕ ಮುನ್ನಡೆಯನ್ನು ಕಾಯ್ದುಕೊಂಡಿದ್ದರೆ ಪಂದ್ಯದ ಸ್ವರೂಪವೇ ಬೇರೆ ಆಗಿರುತ್ತಿತ್ತು. ರವಿ ಪಾಲ್ ಚುರುಕಿನಿಂದ 9ನೇ ನಿಮಿಷದಲ್ಲಿಯೇ ಚೆಂಡನ್ನು ಗುರಿ ಮುಟ್ಟಿಸಿದರು. ಆದರೆ ಮಲೇಷ್ಯಾ 24ನೇ ನಿಮಿಷದಲ್ಲಿ ಅಂತರ ಸಮಮಾಡಿಕೊಂಡಿತು. ತಜುದ್ದೀನ್ ಜಲೀಲ್ ಗಳಿಸಿದ ಗೋಲು ಭಾರತದವರ ಮೇಲೆ ಒತ್ತಡ ಹೆಚ್ಚುವಂತೆ ಮಾಡಿತು. 32ನೇ ನಿಮಿಷದಲ್ಲಿ ಮೊಹಮ್ಮದ್ ಅಮಿನ್ ರಹೀಮ್ ಪ್ರಯತ್ನದಿಂದ ಮಲೇಷ್ಯಾಕ್ಕೆ ಇನ್ನೊಂದು ಗೋಲು ಬಂತು.ಸೋಲಿನ ಭೀತಿ ಕಾಡುತ್ತಿದ್ದ ಪರಿಸ್ಥಿತಿಯಲ್ಲಿ ಭಾರತದ ಸಂಕಷ್ಟ ನಿವಾರಣೆ ಮಾಡಿದ್ದು ದನಿಶ್ ಮುಜ್ತಬಾ. 52ನೇ ನಿಮಿಷದಲ್ಲಿ ಅವರು ಗೋಲು ಅಂತರ ಸಮವಾಗುವಂತೆ ಮಾಡಿದರು. ಆಗ ಭಾರತ ತಂಡದ ಕೋಚ್ ನಾಬ್ಸ್ ಸಮಾಧಾನದ ನಿಟ್ಟುಸಿರು ಬಿಟ್ಟರು. ಆದರೆ ಪಂದ್ಯದ ಕೊನೆಯ ಕ್ಷಣಗಳಲ್ಲಿ ನಡೆದ ದಾಳಿ-ಪ್ರತಿದಾಳಿಯು ಪ್ರಯೋಜನಕಾರಿ ಆಗಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.