ಸೋಮವಾರ, ನವೆಂಬರ್ 18, 2019
23 °C

ಏಷ್ಯಾಕಪ್‌ಗೆ ಬಾಂಗ್ಲಾ ಆತಿಥ್ಯ

Published:
Updated:

ನವದೆಹಲಿ (ಪಿಟಿಐ): ಮುಂದಿನ ವರ್ಷ ನಡೆಯಲಿರುವ `ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ'ಗೆ ಬಾಂಗ್ಲಾದೇಶ ಆತಿಥ್ಯ ವಹಿಸಲಿದೆ. ಈ ಮೊದಲು ಟೂರ್ನಿ ಆಯೋಜಿಸಲು ಒಪ್ಪಿಕೊಂಡಿದ್ದ ಭಾರತ, ಬಿಡುವಿಲ್ಲದ ಅಂತರರಾಷ್ಟ್ರೀಯ ವೇಳಾಪಟ್ಟಿಯಿಂದಾಗಿ ಹಿಂದೆ ಸರಿದಿದೆ. ಹೀಗಾಗಿ ಸತತ ಎರಡನೇ ಬಾರಿಗೆ ಟೂರ್ನಿಯ ಆತಿಥ್ಯ ವಹಿಸುವ ಅವಕಾಶ ಬಾಂಗ್ಲಾದೇಶಕ್ಕೆ ದೊರೆತಿದೆ.ಮುಂದಿನ ವರ್ಷ ಫೆಬ್ರುವರಿ 24ರಿಂದ ಮಾರ್ಚ್ 8ರವರೆಗೆ ಏಷ್ಯಾಕಪ್ ಆಯೋಜನೆಯಾಗುವ ಸಾಧ್ಯತೆಯಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಏಪ್ರಿಲ್ ಎಂಟರಂದು ಕ್ವಾಲಾಲಂಪುರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಟೂರ್ನಿಯ ಸ್ಥಳ ಬದಲಾವಣೆಗೆ ತೀರ್ಮಾನಿಸಲಾಯಿತು. ಏಷ್ಯಾ ಕಪ್‌ಗೆ ಆತಿಥ್ಯ ವಹಿಸುವ ಸಲುವಾಗಿ ಬಾಂಗ್ಲಾದೇಶವು, ಶ್ರೀಲಂಕಾ ಮತ್ತು ಪಾಕಿಸ್ತಾನ ಜೊತೆಗಿನ ತ್ರಿಕೋನ  ಕ್ರಿಕೆಟ್ ಸರಣಿಯನ್ನು ಮುಂದೂಡಲು ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.2014ರ ಫೆಬ್ರ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಭಾರತ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ಪ್ರವಾಸ ಮಾಡಲಿದೆ. ಆದರೆ, ಏಷ್ಯಾ ಕಪ್ ಟೂರ್ನಿಯೂ ಇದೇ ಸಂದರ್ಭ ಆಯೋಜನೆಗೊಂಡಿದೆ. ಹೀಗಾಗಿ ನ್ಯೂಜಿಲೆಂಡ್ ಪ್ರವಾಸದ ವೇಳಾಪಟ್ಟಿ ಅಂತಿಮಗೊಳಿಸಲು ಪ್ರಯತ್ನಿಸುತ್ತಿರುವುದಾಗಿ ಬಿಸಿಸಿಐ, ಎಸಿಸಿಯ ಸದಸ್ಯರಿಗೆ ತಿಳಿಸಿದೆ.

ಅಲ್ಲದೇ, ಉಭಯ ದೇಶಗಳ ನಡುವಿನ ಸರಣಿಯ ದಿನಾಂಕ ಬದಲಾವಣೆ ಮಾಡುವಂತೆ ನ್ಯೂಜಿಲೆಂಡ್ ಕ್ರಿಕೆಟ್‌ನ ಮನವೊಲಿಕೆಗೆ ಬಿಸಿಸಿಐ ಪ್ರಯತ್ನಿಸುವ ಸಾಧ್ಯತೆಯಿದೆ ಎಂದು `ಇಎಸ್‌ಪಿಎನ್ ಕ್ರಿಕ್‌ಇನ್ಫೋ' ವೆಬ್‌ಸೈಟ್ ವರದಿ ಮಾಡಿದೆ. ನ್ಯೂಜಿಲೆಂಡ್ ವಿರುದ್ಧ ಭಾರತ ಎರಡು ಟೆಸ್ಟ್, ಎರಡು ಏಕದಿನ ಮತ್ತು ಎರಡು ಟ್ವೆಂಟಿ-20 ಪಂದ್ಯಗಳನ್ನು ಆಡಲಿದೆ.

ಪ್ರತಿಕ್ರಿಯಿಸಿ (+)