ಭಾನುವಾರ, ಜೂನ್ 13, 2021
29 °C

ಏಷ್ಯಾಕಪ್ ಕ್ರಿಕೆಟ್:ಬಾಂಗ್ಲಾಕ್ಕೆ ಶರಣಾದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀರ್‌ಪುರ (ಪಿಟಿಐ): `ಭಾರತದ ಬೌಲಿಂಗ್ ದುರ್ಬಲವಾಗಿದೆ~ ಎಂದು ಬಾಂಗ್ಲಾದೇಶ ತಂಡದ ನಾಯಕ ಮುಷ್ಫಿಕರ್ ರಹೀಮ್ ಪಂದ್ಯದ ಹಿಂದಿನ ದಿನವಷ್ಟೇ ಹೇಳಿದ್ದರು. ಆದರೆ ಶುಕ್ರವಾರ ಈ ತಂಡದವರು ಆ ತಮ್ಮ ಮಾತನ್ನು ಸಮರ್ಥಿಸಿಕೊಳ್ಳುವಂತೆ ಆಡಿದರು.ಪರಿಣಾಮ ಭಾರತ ತಂಡದವರು ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ಆಘಾತ ಅನುಭವಿಸಬೇಕಾಯಿತು. ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಈ ಪಂದ್ಯದಲ್ಲಿ ಬಾಂಗ್ಲಾ ತಂಡದವರು ಐದು ವಿಕೆಟ್‌ಗಳಿಂದ ಭಾರತ ತಂಡವನ್ನು ಮಣಿಸಿದರು.ಈ ಮೂಲಕ ಫೈನಲ್ ತಲುಪುವ ತಮ್ಮ ಆಸೆಯನ್ನು ಮುಷ್ಫಿಕರ್ ಬಳಗ ಜೀವಂತವಾಗಿ ಉಳಿಸಿಕೊಂಡಿದೆ. ಈ ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಈ ಕಾರಣ ಭಾನುವಾರ ಪಾಕಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯ ದೋನಿ ಬಳಗಕ್ಕೆ ತುಂಬಾ ಮುಖ್ಯ ಎನಿಸಿದೆ.ಈ ಪಂದ್ಯದಲ್ಲಿ ಭಾರತ ನೀಡಿದ 290 ರನ್‌ಗಳ ಗುರಿಯನ್ನು ಬಾಂಗ್ಲಾ 49.2 ಓವರ್‌ಗಳಲ್ಲಿ ಕೇವಲ ಐದು ವಿಕೆಟ್ ಕಳೆದುಕೊಂಡು ತಲುಪಿತು. ಈ ತಂಡದ ಐದು ಮಂದಿ ಬ್ಯಾಟ್ಸ್‌ಮನ್‌ಗಳು 45ರಿಂದ 70ರನ್‌ಗಳ ಆಸುಪಾಸಿನಲ್ಲಿ ವೇಗವಾಗಿ ರನ್ ಕಲೆಹಾಕಿದ್ದು ಈ ಗೆಲುವಿಗೆ ಪ್ರಮುಖ ಕಾರಣ.47 ಓವರ್‌ಗಳ ಅಂತ್ಯದವರೆಗೆ ಪಂದ್ಯ ಭಾರತದ ಹಿಡಿತದಲ್ಲಿಯೇ ಇತ್ತು. ಏಕೆಂದರೆ ಈ ಹಂತದಲ್ಲಿ ಬಾಂಗ್ಲಾಕ್ಕೆ 18 ಎಸೆತಗಳಲ್ಲಿ 33 ರನ್‌ಗಳ ಅಗತ್ಯವಿತ್ತು. ಆದರೆ ಇರ್ಫಾನ್ ಪಠಾಣ್ ಹಾಕಿದ 48ನೇ ಓವರ್‌ನಲ್ಲಿ 17 ರನ್‌ಗಳ ಹರಿದು ಹೋದವು. ಬಳಿಕ ಪ್ರವೀಣ್ ಹಾಕಿದ ಓವರ್‌ನಲ್ಲಿ 14 ರನ್‌ಗಳು ಬಂದವು. ಕೊನೆಯ ಓವರ್‌ನ ಎರಡನೇ ಎಸೆತದಲ್ಲಿ ಬೌಂಡರಿ ಗಳಿಸುತ್ತಿದ್ದಂತೆ ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಸಂಭ್ರಮದ ಸುರಿಮಳೆ!ಏಕೆಂದರೆ ದೊಡ್ಡ ತಂಡಗಳ ಎದುರು ಬಾಂಗ್ಲಾದವರು ಗೆದ್ದು ತುಂಬಾ ದಿನಗಳಾಗಿದ್ದವು. ಹಾಗಾಗಿಯೇ ಈ ದೇಶದ ಆಟಗಾರರ ಹಾಗೂ ಕ್ರೀಡಾ ಪ್ರೇಮಿಗಳ ಸಂಭ್ರಮ ತುಂಬಾ ಜೋರಾಗಿತ್ತು. ಈ ತಂಡದ ಗೆಲುವಿಗೆ ಮೂಲ ಕಾರಣ ಶಕೀಬ್ (49; 31ಎ, 5 ಬೌಂ, 2 ಸಿ.) ಹಾಗೂ ನಾಯಕ ಮುಷ್ಫಿಕರ್ (ಔಟಾಗದೆ 46; 25 ಎ, 3 ಬೌಂ, 3 ಸಿ.) ಜೊತೆಯಾಟ. ಬಳಿಕ ನಾಸೀರ್ ಹೊಸೇನ್ ಹಾಗೂ ಮುಷ್ಫಿಕರ್ ಐದನೇ ವಿಕೆಟ್‌ಗೆ 42 ಎಸೆತಗಳಲ್ಲಿ  64 ರನ್ ಗಳಿಸಿದರು.ಇದಕ್ಕೂ ಮುನ್ನ ತಮೀಮ್ ಇಕ್ಬಾಲ್ (70; 99 ಎ, 6 ಬೌಂ.) ಉತ್ತಮ ಆರಂಭ ದೊರಕಿಸಿಕೊಟ್ಟಿದ್ದರು. ಜುಹುರುಲ್ ಇಸ್ಲಾಮ್ ಹಾಗೂ ನಾಸೀರ್ ಕೂಡ ಅರ್ಧ ಶತಕಗಳ ಮೂಲಕ ತಂಡವನ್ನು ಗುರಿಯೆಡೆಗೆ ಕೊಂಡೊಯ್ಯಲು ಪ್ರಯತ್ನಿಸಿದ್ದರು.ಮೊದಲು ಬ್ಯಾಟ್ ಮಾಡಿದ್ದ ಭಾರತಕ್ಕೆ ಸಚಿನ್ ಹಾಗೂ ವಿರಾಟ್ ಕೊಹ್ಲಿ (66; 82 ಎ, 5 ಬೌಂ,) ಆಸರೆಯಾದರು. ಬಳಿಕ ಸುರೇಶ್ ರೈನಾ (51; 38 ಎ, 5 ಬೌಂ, 2 ಸಿ.) ತಂಡದ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಿದರು.ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.