ಮಂಗಳವಾರ, ಮೇ 11, 2021
21 °C

ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್

ಶಶಿಧರ ಗರ್ಗೇಶ್ವರಿ Updated:

ಅಕ್ಷರ ಗಾತ್ರ : | |

ಬರಡು ಭೂಮಿಯಲ್ಲಿ ಸೌರ ವಿದ್ಯುತ್ ಬೆಳೆ ತೆಗೆಯಲು ನೆಲ ಹಸನು ಮಾಡುವ ಕಾಯಕಕ್ಕೆ ಬೆಂಗಳೂರು ಮೂಲದ `ಇ ಐ ಟೆಕ್ನಾಲಜೀಸ್~ ಕಂಪನಿಯೂ ನೇಗಿಲು ಹಿಡಿದಿದೆ. ಏಷ್ಯಾದಲ್ಲೇ ಅತಿ ದೊಡ್ಡ `ಸೋಲಾರ್ ಪಾರ್ಕ್~ (500 ಮೆಗಾವಾಟ್ ಸಾಮರ್ಥ್ಯ) ಎಂಬ ಅಭಿದಾನಕ್ಕೆ ಯೋಗ್ಯವಾದ ಆ ನೆಲ ಗುಜರಾತ್.



ಗುಜರಾತ್‌ನ ಪಾಟನ್ ಜಿಲ್ಲೆಯ ಸಂತಾಲ್ಪುರ ತಾಲ್ಲೂಕಿನ ಚರಂಕ ಗ್ರಾಮದ 1080 ಹೆಕ್ಟೇರ್ ಪ್ರದೇಶದಲ್ಲಿ ಈಗ್ಗೆ ಸರಿಯಾಗಿ ಒಂದು ವರ್ಷದ ಹಿಂದೆ ಕಾಯಕಕ್ಕೆ ಇಳಿದ `ಇ ಐ ಟೆಕ್ನಾಲಜೀಸ್~, ಮೂಲ ಸೌಕರ‌್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಿ ವಿನ್ಯಾಸವನ್ನೂ ಮಾಡಿದೆ. ನೀರು- ನೆರಳು- ಭದ್ರತೆಯನ್ನು ಅಚ್ಚುಕಟ್ಟಾಗಿ ಒಕ್ಕಣೆ ಮಾಡುವುದರ ಜೊತೆಗೆ, `ಸೋಲಾರ್ ಪಾರ್ಕ್~ನಲ್ಲಿ ಘಟಕಗಳನ್ನು ಸ್ಥಾಪಿಸಿರುವ ಕಂಪನಿಗಳಿಗೂ ಆರಂಭದ ಅಗತ್ಯ ಬೇಕು- ಬೇಡಗಳಿಗೆ ಮಾರ್ಗದರ್ಶನ ನೀಡಿದೆ. 1 ಮೆಗಾವಾಟ್ ಸಾಮರ್ಥ್ಯದ ಸೌರ ಘಟಕವನ್ನೂ `ಸೋಲಾರ್ ಪಾರ್ಕ್~ನಲ್ಲಿ ಸ್ಥಾಪಿಸಿ ದಿನಕ್ಕೆ 6500 ಯೂನಿಟ್ ವಿದ್ಯುತ್ ಉತ್ಪಾದಿಸಿ ರಾಜ್ಯ ಸರ್ಕಾರಕ್ಕೆ ಮಾರಾಟ ಮಾಡುತ್ತಿದೆ.



 `ಸೋಲಾರ್ ಪಾರ್ಕ್~ನ ಸದ್ಯದ ಉತ್ಪಾದನೆ 214 ಮೆಗಾವಾಟ್. ಈ ಪಾರ್ಕ್‌ನ ಹೊರಗೆ ಅಂದರೆ ಗುಜರಾತ್‌ನ ವಿವಿಧೆಡೆಯ ಸೌರಶಕ್ತಿ ಘಟಕಗಳ ಒಟ್ಟು ಉತ್ಪಾದನೆ 386 ಮೆಗಾವಾಟ್. ಒಟ್ಟಾರೆ 600 ಮೆಗಾವಾಟ್. ಇಷ್ಟೂ ಸೌರ ವಿದ್ಯುತ್ತನ್ನು ಗುಜರಾತ್ ವಿದ್ಯುಚ್ಛಕ್ತಿ ಕಾರ್ಪೊರೇಷನ್ ಲಿ.ಗೆ(ಜಿಪಿಸಿಎಲ್) ಸಂಗ್ರಹಿಸಿಕೊಳ್ಳುವ ಕಾರ್ಯ ಇದೇ 19ರಂದು ನಡೆಯಲಿದೆ. ಅದಕ್ಕೆ ಮುಖ್ಯಮಂತ್ರಿ ನರೇಂದ್ರ ಮೋದಿ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.



`ಸೋಲಾರ್ ಪಾರ್ಕ್~ನ ಉದ್ದೇಶ ಸೌರ ವಿದ್ಯುತ್ ಉತ್ಪಾದನೆ ಮಾತ್ರವಲ್ಲ, ಇದಕ್ಕೆ ಪೂರಕ ಚಟುವಟಿಕೆಗಳಿಗೆ ಉತ್ತೇಜನವೂ ಸೇರಿದೆ. ಸೌರ ಘಟಕದ ನಿರ್ವಹಣೆ ಮತ್ತು ಸ್ಥಾಪನೆಗೆ ಅಗತ್ಯ ಬಿಡಿಭಾಗಗಳ ಉತ್ಪಾದನಾ ಘಟಕಗಳನ್ನು ತೆರೆಯುವ ಯೋಜನೆ ಮುಂದಿನ ಹಂತದಲ್ಲಿದೆ. ಇದರಿಂದ ಉದ್ಯೋಗಾವಕಾಶ ಹೆಚ್ಚಲಿದೆ. `ಸೋಲಾರ್ ಪಾರ್ಕ್~ನ ನಿರ್ಮಾಣದ ಹಂತದಲ್ಲಿ 6ರಿಂದ 8 ಸಾವಿರ ಮಂದಿಗೆ ಉದ್ಯೋಗ ದೊರಕಿತ್ತು. 



`ನವೀಕರಿಸಬಹುದಾದ ಇಂಧನ ಮೂಲ

ಜಾಗತಿಕ `ಶಕ್ತಿ~ಗೆ ಸುಸ್ಥಿರ ಆಕರ~


`ಸೋಲಾರ್ ಪಾರ್ಕ್~ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಂದ ಶಹಬ್ಬಾಸ್ ಎನಿಸಿಕೊಂಡಿರುವ `ಇ ಐ ಟೆಕ್ನಾಲಜೀಸ್~ ಕಂಪನಿ ಅಧ್ಯಕ್ಷ-ವ್ಯವಸ್ಥಾಪಕ ನಿರ್ದೇಶಕ ಎನ್.ರಂಗನಾಥ್ ಅಪ್ಪಟ ಕನ್ನಡಿಗ. 



 ದಿನೇ ದಿನೇ ಏರುತ್ತಿರುವ ಜಾಗತಿಕ ತಾಪಮಾನ, ಹವಾಗುಣ ಬದಲಾವಣೆ ತಂದೊಡ್ಡುವ ದುಷ್ಪರಿಣಾಮಕ್ಕೆ ಪರಿಸರ ಸ್ನೇಹಿ ಯೋಜನೆಗಳೇ ಪರಿಹಾರ. ಇದಕ್ಕೆ ಸುಸ್ಥಿರ ಮತ್ತು ನವೀಕರಿಸಬಹುದಾದ ಇಂಧನ ಮೂಲವೇ ಮಾರ್ಗದರ್ಶಕ ಎಂದು ರಂಗನಾಥ್ ಮತ್ತು `ಇ ಐ ಟೆಕ್ನಾಲಜೀಸ್~ನ ಕಾರ್ಯನಿರ್ವಾಹಕ ನಿರ್ದೇಶಕ ಸಂತೋಷ್ ಜೋಸೆಫ್ ಬಲವಾಗಿ ಪ್ರತಿಪಾದಿಸುತ್ತಾರೆ.



`ಸೋಲಾರ್ ಪಾರ್ಕ್~ ಮತ್ತು ತಮ್ಮ ಕಂಪನಿಯ 1 ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕದ ಬಗ್ಗೆ ಇಬ್ಬರೂ ಹಂಚಿಕೊಂಡ ಅನಿಸಿಕೆ ಇಲ್ಲಿದೆ.



* ಸೌರ ವಿದ್ಯುತ್ ಉತ್ಪಾದನೆ ಅಧಿಕ ವೆಚ್ಚದ ಉದ್ಯಮವಲ್ಲವೆ?

`ಹೌದು, ಆರಂಭದಲ್ಲಿ ಹೆಚ್ಚು ಬಂಡವಾಳ ಹೂಡಬೇಕು. 1 ಮೆಗಾವಾಟ್ ಘಟಕ ಸ್ಥಾಪನೆಗೆ 14 ಕೋಟಿ ರೂಪಾಯಿ ಅಗತ್ಯ. ಉತ್ಪಾದಿತ ವಿದ್ಯುತ್‌ಗೂ ದರ ಅಧಿಕವೇ. ಆದರೆ, ದಿನ ಕಳೆದಂತೆ ಉತ್ಪಾದನಾ ವೆಚ್ಚ ಕಡಿಮೆ ಆಗುತ್ತದೆ. ಏಕೆಂದರೆ, ಧಾರಾಳ ಹಾಗೂ ಉಚಿತವಾಗಿ ದೊರಕುವ ಸೂರ್ಯನ ಶಾಖ.



 ಜಲ, ಅಣು, ಕಲ್ಲಿದ್ದಲು, ಪವನ ಮೂಲಗಳಿಂದ ಉತ್ಪಾದಿಸುವ ವಿದ್ಯುತ್‌ಗೆ ವೆಚ್ಚ ಕಡಿಮೆ ಎನ್ನುವುದು ಸರಿ. ಆದರೆ, ಇಂಥ ಘಟಕ ಕಾರ್ಯಾರಂಭಕ್ಕೆ ಕನಿಷ್ಠ 4-6 ವರ್ಷ ಬೇಕು. ಸವಾಲೂ(ರಿಸ್ಕ್) ದೊಡ್ಡದೆ. ಪರಿಸರ ನಿರಾಕ್ಷೇಪಣ ಪತ್ರ, ಸ್ಥಳ, ಮೂಲ ಸೌಕರ್ಯ, ಸ್ಥಳೀಯರ ಸಹಕಾರ... ಹೀಗೆ ಹತ್ತಾರು ತೊಡಕು- ನೂರೆಂಟು ಸಮಸ್ಯೆ~.



* `ಸೋಲಾರ್ ಪಾರ್ಕ್~ನಲ್ಲಿನ ಘಟಕಗಳು, ಉತ್ಪಾದನೆ, ಮಾರುಕಟ್ಟೆ ವಿಚಾರ?

`22 ಘಟಕಗಳಿದ್ದು, ಸದ್ಯ 231 ಮೆಗಾವಾಟ್ ಉತ್ಪಾದನಾ ಗುರಿಯಿದೆ. ಈಗ 214 ಮೆಗಾವಾಟ್ ಉತ್ಪಾದನೆಯಾಗುತ್ತಿದೆ.



ರಾಜ್ಯ ಸರ್ಕಾರದ ವಿದ್ಯುಚ್ಛಕ್ತಿ ನಿಗಮ ನಿಯಮಿತವೇ(ಜಿಪಿಸಿಎಲ್) ಈ ಘಟಕದ ವಿದ್ಯುತ್‌ಗೆ ಮುಖ್ಯ ಗ್ರಾಹಕ. ಜತೆಗೆ 25 ವರ್ಷಗಳ ಕಾಲ ಸೌರ ವಿದ್ಯುತ್ ಹಂಚಿಕೆಗೆ ಎರಡು ಹಂತದ ಒಪ್ಪಂದವಾಗಿವೆ. ಮೊದಲ 12 ವರ್ಷ ಪ್ರತಿ ಯೂನಿಟ್‌ಗೆ ರೂ. 15ರಂತೆ, ನಂತರದ 13 ವರ್ಷ ರೂ. 5ರಂತೆ ಮಾರಾಟ. 



* ಬಂಡವಾಳ ಹೂಡಿಕೆಯಲ್ಲಿ ಸರ್ಕಾರ, ಖಾಸಗಿ ಸಹಭಾಗಿತ್ವ?

`ಸೋಲಾರ್ ಪಾರ್ಕ್ ಹೊರತುಪಡಿಸಿ ಗುಜರಾತ್‌ನ ವಿವಿಧೆಡೆಯೂ ಸೌರ ಶಕ್ತಿ ಘಟಕಗಳಿದ್ದು, ಖಾಸಗಿ (50 ಕಂಪೆನಿಗಳಿಗೂ ಹೆಚ್ಚು) ಹೂಡಿಕೆಯೇ ರೂ. 9000 ಕೋಟಿ. ಸೋಲಾರ್ ಪಾರ್ಕ್‌ಗೆ ಸರ್ಕಾರ ಭೂಮಿ ಒದಗಿಸಿದೆ. ಮೂಲ ಸೌಕರ್ಯಕ್ಕೆ ರೂ. 600 ಕೋಟಿ ವಿನಿಯೋಗಿಸಿದೆ. ಸೋಲಾರ್ ಪಾರ್ಕ್‌ನ ಭೂ ಅಭಿವೃದ್ಧಿಗೆ ರೂ 350 ಕೋಟಿ ವೆಚ್ಚವಾಗಿದೆ(ಈ ಯೋಜನೆಯನ್ನೇ ಇ ಐ ಟೆಕ್ನಾಲಜೀಸ್ ನಿರ್ವಹಿಸಿದ್ದು). ಇದನ್ನು `ಸೋಲಾರ್ ಪಾರ್ಕ್~ ಉಪಭೋಗಿ ಸಂಸ್ಥೆಗಳು ಕಾಲಾನುಕ್ರಮದಲ್ಲಿ ಸರ್ಕಾರಕ್ಕೆ ಹಿಂದಿರುಗಿಸಬೇಕಿದೆ.         

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.