ಬುಧವಾರ, ಆಗಸ್ಟ್ 21, 2019
24 °C
ಭಾರತ ಹಾಕಿ ತಂಡಕ್ಕೆ ಮತ್ತೊಂದು ಹಿನ್ನಡೆ

ಏಷ್ಯಾ ಕಪ್‌ನಿಂದ ಸುನಿಲ್ ಹೊರಕ್ಕೆ

Published:
Updated:

ನವದೆಹಲಿ (ಪಿಟಿಐ): ಮುಂಬರುವ ಏಷ್ಯಾ ಕಪ್ ಹಾಕಿ ಟೂರ್ನಿಗೂ ಮುನ್ನವೇ ಭಾರತ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಪ್ರಮುಖ ಆಟಗಾರ ಕರ್ನಾಟಕದ ಎಸ್.ವಿ.ಸುನಿಲ್ ಗಾಯಗೊಂಡಿದ್ದು, ಟೂರ್ನಿಯಿಂದ ಹೊರಬಿದ್ದಿದ್ದಾರೆ.ಈಗಾಗಲೇ ಸ್ಟ್ರೈಕರ್‌ಗಳಾದ ಆಕಾಶ್‌ದೀಪ್ ಸಿಂಗ್, ದನಿಶ್ ಮುಜ್ತಬಾ ಹಾಗೂ ಗುರ್ವಿಂದರ್ ಸಿಂಗ್ ಕೂಡ ಗಾಯದ ಸಮಸ್ಯೆಯಿಂದ ತಂಡದಿಂದ ಹೊರ ಉಳಿದಿದ್ದಾರೆ. ಆಗಸ್ಟ್ 24 ರಿಂದ ಸೆಪ್ಟೆಂಬರ್ ಒಂದರವರೆಗೆ ಮಲೇಷ್ಯಾದಲ್ಲಿ ಏಷ್ಯಾ ಕಪ್ ಟೂರ್ನಿ ನಡೆಯಲಿದೆ.ಟರ್ಫ್ ಹಾಸುವಿನಲ್ಲಿ ಉತ್ತಮ ಪ್ರದರ್ಶನ ತೋರುವ ಸಾಮರ್ಥ್ಯ ಹೊಂದಿರುವ ಸುನಿಲ್, ಏಷ್ಯಾ ಕಪ್ ಟೂರ್ನಿಗೆ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿತ್ತು. ಅದಕ್ಕಾಗಿ ಅವರು ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ (ಎಸ್‌ಎಐ) ಕಠಿಣ ಅಭ್ಯಾಸದಲ್ಲಿ ತೊಡಗಿದ್ದರು. ಆದರೆ ಪೂರ್ವ ಸಿದ್ಧತಾ ಶಿಬಿರದಲ್ಲಿ ಅವರು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಈ ಶಿಬಿರ ಜುಲೈ 16ರಂದು ಆರಂಭವಾಗಿದ್ದು, ಆಗಸ್ಟ್ 16ಕ್ಕೆ ಮುಗಿಯಲಿದೆ.`ಶುಕ್ರವಾರ ಅಭ್ಯಾಸದ ವೇಳೆ ಜಾರಿ ಬಿದ್ದಿದ್ದರಿಂದ ಎಡ ಮೊಣಕೈಗೆ ಗಾಯವಾಗಿದೆ. ವೈದ್ಯರು ಆರು ವಾರಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆ. ಏಷ್ಯಾ ಕಪ್‌ನಂತಹ ಟೂರ್ನಿಯಿಂದ ಹೊರಗುಳಿಯಬೇಕಾಗಿರುವುದು ತುಂಬಾ ನಿರಾಶೆ ಉಂಟು ಮಾಡಿದೆ. ಆದರೆ ಇಂತಹ ಸಮಸ್ಯೆ ಉದ್ಭವಿಸಿದರೆ ನಾವೇನು ಮಾಡಲು ಸಾಧ್ಯ' ಎಂದು ಸುನಿಲ್ ನುಡಿದಿದ್ದಾರೆ.`ಅದೇನೇ ಇರಲಿ, ತಂಡದ ಆಟಗಾರರು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಏಷ್ಯಾ ಕಪ್‌ನಲ್ಲಿ ಭಾರತ ಜಯ ಸಾಧಿಸುವ ವಿಶ್ವಾಸವಿದ್ದು, ಅದಕ್ಕಾಗಿ ಪ್ರಾರ್ಥಿಸುವೆ' ಎಂದೂ ಅವರು ತಿಳಿಸಿದ್ದಾರೆ. ಮುಂದಿನ ವರ್ಷ ಹೇಗ್‌ನಲ್ಲಿ ನಡೆಯಲಿರುವ ಎಫ್‌ಐಎಚ್ ವಿಶ್ವ ಕಪ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು ಭಾರತ ಏಷ್ಯಾ ಕಪ್‌ನಲ್ಲಿ ಗೆಲ್ಲಬೇಕಿದೆ. ಹಾಲೆಂಡ್‌ನ ರೋಟರ್‌ಡಮ್‌ನಲ್ಲಿ ನಡೆದ `ಎಫ್‌ಐಎಚ್ ವಿಶ್ವ ಹಾಕಿ ಲೀಗ್ ರೌಂಡ್-3' ಟೂರ್ನಿಯಲ್ಲಿ ವಿಶ್ವ ಹಾಕಿಗೆ ನೇರ ಪ್ರವೇಶ ಪಡೆಯುವಲ್ಲಿ ಭಾರತ ವಿಫಲವಾಗಿತ್ತು.

Post Comments (+)